ಮಳವಳ್ಳಿ: ಮಕ್ಕಳ ಅನುಕೂಲಕ್ಕೆಂದು ಸರ್ಕಾರದ ಅನುದಾನದಲ್ಲಿ ನಿರ್ಮಾಣವಾಗಿರುವ ಅಂಗನವಾಡಿ ಕಟ್ಟಡ ಅಧಿಕಾರಿಯ ಸ್ವಾಮಿನಿಷ್ಠೆಯಿಂದಾಗಿ ಉದ್ಘಾಟನೆಯಾಗದ ಹಿನ್ನೆಲೆಯಲ್ಲಿ ಮಕ್ಕಳು ಶಿಥಿಲ ಕಟ್ಟಡದಲ್ಲಿ ಕೂರಬೇಕಾಗಿದೆ.
ಮಳವಳ್ಳಿ ತಾಲೂಕಿನ ಬೆಳಕವಾಡಿ ಸಮೀಪದ ಹೊಸಹಳ್ಳಿ ಗ್ರಾಮದಲ್ಲಿ ಮುರಿದು ಬೀಳುವ ಶಾಲಾ ಕೊಠಡಿಯಲ್ಲಿ ಅಂಗನಾಡಿ ಕೇಂದ್ರವಿದ್ದು 30ಕ್ಕೂ ಹೆಚ್ಚು ಪುಟಾಣಿಗಳು ಶಿಥಿಲ ಕಟ್ಟಡದಲ್ಲಿ ಕಲಿಯುವಂತಾಗಿದೆ. 6 ತಿಂಗಳ ಹಿಂದೆ ಹೊಸ ಕಟ್ಟಡ ನಿರ್ಮಾಣವಾಗಿದೆ. ಆದರೆ, ಶಾಸಕರು ಉದ್ಘಾಟನೆ ಮಾಡಬೇಕೆಂಬ ಕಾರಣದಿಂದ ಸ್ಥಳಾಂತರ ಮಾಡಲು ಶಿಶು ಅಭಿವೃದ್ಧಿ ಅಧಿಕಾರಿ ಕುಮಾರ್ ಮೀನಮೇಷ ಎಣಿಸುತ್ತಿದ್ದಾರೆ.
ಇತ್ತೀಚೆಗೆ ಉದ್ಘಾಟನೆಗೆ ಬಂದಿದ್ದ ಶಾಸಕ ಡಾ.ಕೆ.ಅನ್ನದಾನಿ, ಅಂಗನವಾಡಿ ಕಟ್ಟಡಕ್ಕೆ ಶಿಲಾಫಲಕ ಹಾಕಿಲ್ಲವೆಂಬ ಕಾರಣದಿಂದ ಉದ್ಘಾಟನೆ ಮಾಡದೆ ತೆರಳಿದ್ದಾರೆ ಎಂದು ಗ್ರಾಪಂ ಅಧ್ಯಕ್ಷೆ ಮಧುಮಾಲೀನಿ ಆರೋಪಿಸಿದ್ದಾರೆ.
ಒಟ್ಟಾರೆ ಹೆಸರಿಗಾಗಿ ರಾಜಕಾರಣಿಗಳು ನಡೆದುಕೊಳ್ಳುತ್ತಿರುವ ರೀತಿ, ಅವರ ಹಿಂದೆ ಬಿದ್ದಿರುವ ಅಧಿಕಾರಿಗಳ ಮೊಂಡುತನದ ನಡೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಪ್ರತಿಷ್ಠೆ ಬಿಟ್ಟು ಕೇಂದ್ರ ಉದ್ಘಾಟನೆ ಮಾಡುವರೋ ಅಥವಾ ನಾಮಫಲಕದ ಜಪ ಮಾಡಿಕೊಂಡು ಮಕ್ಕಳಿಗೆ ಅಪಾಯವಾದ ಮೇಲೆ ಸಂತಾಪ ಹೇಳಲು ಬರುವರೋ ಕಾದುನೋಡಬೇಕಿದೆ.