More

    ಮಕ್ಕಳಿಗೆ ಒತ್ತಡರಹಿತ ಪ್ರೋತ್ಸಾಹ ಅತ್ಯಗತ್ಯ: ವಿಜಯವಾಣಿ ಸೆಲೆಬ್ರಿಟಿ ಕಾರ್ನರ್​ನಲ್ಲಿ ಕೆ.ವೈ. ವೆಂಕಟೇಶ್​

    ಮಕ್ಕಳಿಗೆ ಒತ್ತಡರಹಿತ ಪ್ರೋತ್ಸಾಹ ಅತ್ಯಗತ್ಯ: ವಿಜಯವಾಣಿ ಸೆಲೆಬ್ರಿಟಿ ಕಾರ್ನರ್​ನಲ್ಲಿ ಕೆ.ವೈ. ವೆಂಕಟೇಶ್​ಕ್ರೀಡೆ ಎಂಬುದು ಬರೀ ಸ್ಪರ್ಧೆಯಲ್ಲ. ದೈಹಿಕ, ಮಾನಸಿಕ ಸದೃಢತೆಗೆ, ಆ ಮೂಲಕ ಉತ್ತಮ ವ್ಯಕ್ತಿತ್ವ ನಿರ್ವಣಕ್ಕೆ ಕ್ರೀಡಾಚಟುವಟಿಕೆಗಳು ಬುನಾದಿಯಾಗುತ್ತವೆ. ಈ ನಿಟ್ಟಿನಲ್ಲಿ ಶಾಲೆಗಳಲ್ಲಿ, ಮನೆಗಳಲ್ಲಿ ಪ್ರೋತ್ಸಾಹಕರ ವಾತಾವರಣ ರೂಪುಗೊಳ್ಳಬೇಕು. ಕ್ರೀಡೆಗಳು ಜೀವನಶೈಲಿಯ ಪ್ರಮುಖ ಭಾಗವಾಗಬೇಕು.

    ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ದೇಶದ ಆಸ್ತಿ, ಭವಿಷ್ಯ ಎಂದೆಲ್ಲ ಮಾತನಾಡುತ್ತೇವೆ. ಮಕ್ಕಳಿಗೆ ಆಸ್ತಿ ಮಾಡುವ ಬದಲಿಗೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂಬ ಭಾಷಣಗಳು ಶಾಲಾ-ಕಾಲೇಜು ಸಮಾರಂಭಗಳಲ್ಲಿ ಸಾಮಾನ್ಯವಾಗಿ ನೋಡುತ್ತ, ಕೇಳುತ್ತ ಬಂದಿದ್ದೇವೆ. ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ಪಾಲಕರು ಮತ್ತು ಸುತ್ತಮುತ್ತಲಿನ ಪರಿಸರ. ಕೇವಲ ಪುಸ್ತಕ, ಶಾಲಾಪಠ್ಯದಿಂದಲೇ ಇದೆಲ್ಲ ಸಾಧ್ಯವಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಮಕ್ಕಳಲ್ಲಿ ಕ್ರೀಡಾಮನೋಭಾವ ಬೆಳೆದರಷ್ಟೇ ಜೀವನದ ಪ್ರತಿಕೂಲ ಪರಿಸ್ಥಿತಿಯಲ್ಲೂ ಛಲಬಿಡದ ತ್ರಿವಿಕ್ರಮನಂತೆ ಸಾಧನೆ ಮಾಡಿ ಅವರ ಜೀವನವನ್ನು ಅವರೇ ರೂಪಿಸಿಕೊಳ್ಳುತ್ತಾರೆ. ಇದಕ್ಕೆ ಮೊದಲ ಹಂತವಾಗಿ ಕ್ರೀಡೆಯೂ ಪ್ರತಿ ಶಾಲಾ-ಕಾಲೇಜುಗಳಲ್ಲಿ ಪಠ್ಯದ ಭಾಗವಾಗಿರಬೇಕು. ಇಂದಿನ ಮಕ್ಕಳೇ ಮುಂದಿನ ಕ್ರೀಡಾಪಟುಗಳು ಎಂಬ ಮನೋಭಾವವನ್ನೂ ಎಲ್ಲರು ಬೆಳೆಸಿಕೊಳ್ಳಬೇಕು. ನಮ್ಮ ದೇಶ ಕ್ರೀಡಾಶಕ್ತಿಯಾಗಿ ಬೆಳಗಲು, ಆರಂಭಿಕ ಹಂತದಲ್ಲಿ ಹಾಕುವ ಉತ್ತಮ ಅಡಿಪಾಯವೇ ಮುಖ್ಯವಾಗುತ್ತದೆ.

    ಬಹುತೇಕರು ಜೀವನದುದ್ದಕ್ಕೂ ಆಟದೊಂದಿಗೆ ನಿಕಟ ಸಂಬಂಧ ಹೊಂದಿರುತ್ತಾರೆ. ಬಾಲ್ಯ ಮತ್ತು ಹರೆಯದಲ್ಲಿ ವಿವಿಧ ಕ್ರೀಡಾಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ನಂತರದಲ್ಲಿ ಮಕ್ಕಳ ಬೆಳವಣಿಗೆಯೊಂದಿಗೆ ಆಟಗಳ ವಿಷಯವೂ ಬದಲಾಗುತ್ತದೆ. ಮಕ್ಕಳ ದೈಹಿಕ ರಚನೆ ಮತ್ತು ಮನೋಬಲ ಹೆಚ್ಚಿಸುವಲ್ಲಿ ಆಟಗಳು ಅಸಾಧಾರಣ ಪಾತ್ರವಹಿಸುತ್ತವೆ. ಮೊಬೈಲ್, ಟಿವಿಯನ್ನು ಚಟವಾಗಿಸಿಕೊಳ್ಳದೆ, ಕೇವಲ ಅಲ್ಪಕಾಲದ ಮನರಂಜನೆಗೆ ಸೀಮಿತಗೊಳಿಸಬೇಕು. ಕ್ರೀಡೆಯಿಂದ ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗುತ್ತಾರೆ. ಅದರಲ್ಲೂ ಅಥ್ಲೆಟಿಕ್ಸ್, ಹಾಕಿ, ಈಜು, ವಾಲಿಬಾಲ್, ಬ್ಯಾಡ್ಮಿಂಟನ್​ನಂಥ ಕ್ರೀಡೆಗಳನ್ನು ಪ್ರಾರಂಭಿಕ ಹಂತದಲ್ಲಿ ಆಡುವುದು ಅಗತ್ಯ.

    ಮಕ್ಕಳನ್ನು ನಾಮ್ ಕೇ ವಾಸ್ತೆ ಕೋಚಿಂಗ್ ಕ್ಲಾಸ್​ಗೆ ಕಳುಹಿಸುವ ಮನೋಭಾವವನ್ನೂ ಬಿಡಬೇಕು. 10ನೇ ತರಗತಿಗೆ ಬಂದ ತಕ್ಷಣ ವಿದ್ಯಾಭ್ಯಾಸದೆಡೆಗೆ ಗಮನ ಹರಿಸಲು ಪಾಲಕರು ಒತ್ತಾಯಿಸುತ್ತಾರೆ. ಸಬ್-ಜೂನಿಯರ್ ವಿಭಾಗದಲ್ಲಿ ಉತ್ತಮ ನಿರ್ವಹಣೆ ತೋರುವ ಕ್ರೀಡಾಪಟುಗಳು 10ನೇ ತರಗತಿ, ಕಾಲೇಜಿನ ಹಂತಕ್ಕೆ ಬಂದಾಗ ಕ್ರೀಡೆಯಿಂದ ವಿಮುಖರಾಗುತ್ತಾರೆ. ಇದು ನಮ್ಮ ದೇಶದಲ್ಲಿ ಸಾಮಾನ್ಯವಾಗಿದೆ. ಕೇವಲ ಬೆರಳೆಣಿಕೆಯ ಮಂದಿಯಷ್ಟೇ ಕ್ರೀಡೆಯನ್ನು ವೃತ್ತಿಪರವಾಗಿ ಆಯ್ದುಕೊಂಡು ಮುಂದೆ ಸಾಗುತ್ತಾರೆ. ಜಪಾನ್, ಚೀನಾ, ಅಮೆರಿಕ ಸೇರಿದಂತೆ ಇನ್ನಿತರ ರಾಷ್ಟ್ರಗಳಲ್ಲಿ ಮಕ್ಕಳಿಗೆ ಕ್ರೀಡೆಯನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯವಿದೆ. ಇದೇ ಸಂಸ್ಕೃತಿ ಭಾರತಕ್ಕೂ ಬರಬೇಕು ಎಂಬುದು ನಮ್ಮ ಆಶಯ.

    ವಿದೇಶದಲ್ಲಿ ಮಗು 9 ವರ್ಷ ಪೂರೈಸಿದ ತಕ್ಷಣವೇ ತರಬೇತುದಾರರ ಸುಪರ್ದಿಗೆ ವಹಿಸುತ್ತಾರೆ. ನಂತರ ತಂದೆ-ತಾಯಿ ಕೂಡ ಇಬ್ಬರ ಮಧ್ಯ ಪ್ರವೇಶಿಸುವುದಿಲ್ಲ. ಮಗುವಿಗೂ ಒತ್ತಡ ಹೇರುವುದಿಲ್ಲ. ಇದರಿಂದ ಕೋಚ್​ಗೂ ತರಬೇತಿ ನೀಡಲು ಸುಲಭವಾಗುತ್ತದೆ. ಆದರೆ, ನಮ್ಮ ದೇಶದಲ್ಲಿ ಪರಿಸ್ಥಿತಿ ಭಿನ್ನ. ಮಕ್ಕಳು ಆಡುತ್ತಿರುವಾಗ ಪಾಲಕರು ಮಧ್ಯಪ್ರವೇಶಿಸುವುದು ಸಾಮಾನ್ಯವಾಗಿದೆ. ಅಲ್ಲದೆ, ಕೋಚ್ ಮೇಲೆ ಒತ್ತಡ ಹೇರುವ ಮೂಲಕ ಅವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾರೆ. ಇದು ತಪು್ಪ. ಇದರಿಂದ ಕ್ರೀಡಾಸ್ಪೂರ್ತಿ ಕಡಿಮೆಯಾಗುತ್ತಿದೆ. ಪಾಲಕರು ಬೆಂಬಲವನ್ನಷ್ಟೇ ಕೊಡಬೇಕೇ ಹೊರತು, ಒತ್ತಡ ಹೇರುವಂಥ ಕೆಲಸ ಮಾಡಬಾರದು.

    2021ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟಗಳು ಭಾರತೀಯರ ಪಾಲಿಗೆ ಸ್ಪೂರ್ತಿದಾಯಕವಾಗಿವೆ. ಒಲಿಂಪಿಕ್ಸ್​ನಲ್ಲಿ 7 ಹಾಗೂ ಪ್ಯಾರಾಲಿಂಪಿಕ್ಸ್​ನಲ್ಲಿ 19 ಪದಕಗಳು ಬಂದವು. ಪ್ಯಾರಾ ಕ್ರೀಡಾಪಟುಗಳಿಂದ ಇಂಥ ಸಾಧನೆಯನ್ನು ಯಾರೂ ಊಹಿಸಿರಲಿಲ್ಲ. ಮುಂದಿನ ದಿನಗಳಲ್ಲಿ ಮತ್ತಷ್ಟು ಪದಕಗಳು ಇಂಥ ದೊಡ್ಡ ಕ್ರೀಡಾಕೂಟಗಳಲ್ಲಿ ಬರುವಂತೆ ಆಗಬೇಕು. ಕೇಂದ್ರ ಸರ್ಕಾರ ಆರಂಭಿಸಿರುವ ‘ಖೇಲೋ ಇಂಡಿಯಾ’ದಂಥ ಮಹತ್ವದ ಕ್ರೀಡಾಕೂಟಗಳಿಂದ ಇಂದಿನ ಯುವಪೀಳಿಗೆಗೆ ಸಾಕಷ್ಟು ಪ್ರಯೋಜನವಾಗುತ್ತಿದೆ. ಮುಂದಿನ ದಿನಗಳಲ್ಲಿ ಜಪಾನ್, ಚೀನಾದಂಥ ಬಲಿಷ್ಠ ರಾಷ್ಟ್ರಗಳ ವಿರುದ್ಧ ಹೋರಾಡಲು ಇಂಥ ಯೋಜನೆ ಸಹಕಾರಿಯಾಗಲಿದೆ.

    ಸರ್ಕಾರಗಳು ತಂದಿರುವ ಯೋಜನೆಗಳನ್ನು ಸೂಕ್ತವಾಗಿ ಬಳಸಿಕೊಂಡರೆ ಪ್ರತಿಯೊಬ್ಬರಿಗೂ ಅನುಕೂಲ, ಇಂಥ ಯೋಜನೆಗಳಿಂದಲೇ ಹಲವು ಸ್ಟಾರ್​ಗಳು ಮುಂದಕ್ಕೆ ಬಂದಿದ್ದಾರೆ. ಮಕ್ಕಳಿಗೆ ಮೊದಲು ಒತ್ತಡರಹಿತ ಪ್ರೋತ್ಸಾಹವೇ ಅವರ ಸಾಧನೆಗೆ ಪ್ರೇರಣೆಯಾಗಲಿ.

    ಮಕ್ಕಳಲ್ಲಿ ಹೋಲಿಕೆ ಸರಿಯಲ್ಲ: ಮಕ್ಕಳನ್ನು ವಿದ್ಯಾಭ್ಯಾಸದ ವಿಷಯದಲ್ಲೇ ಆಗಲಿ, ಕ್ರೀಡೆಯಲ್ಲಾಗಲಿ ಬೇರೆಯವರೊಂದಿಗೆ ಹೋಲಿಸಬಾರದು. ಪ್ರತಿಯೊಬ್ಬರಿಗೂ ಅವರದೇ ಆದ ವಿಶೇಷ ಸಾಮರ್ಥ್ಯವಿದೆ. ಹೀಗಾಗಿ ಅವರ ಸಾಮರ್ಥ್ಯವನ್ನು ಬೇರೆಯವರ ಮುಂದೆ ಅಳೆಯಬಾರದು. ಮಕ್ಕಳು ದೇಶಕ್ಕಿಂತ ಮೊದಲು ತಂದೆ-ತಾಯಿಗೆ ಹೆಸರು ತಂದಿರುತ್ತಾರೆ. ನಂತರ ರಾಜ್ಯ, ದೇಶಕ್ಕೆ ಹೆಸರು ತರುತ್ತಾರೆ. ಕೇವಲ ಕ್ರೀಡೆಯಲ್ಲಿ ಅಲ್ಲ, ಯಾವುದೇ ಕ್ಷೇತ್ರದಲ್ಲಾಗಲೀ ಮಕ್ಕಳ ಸಾಧನೆಯ ಶ್ರೇಯ ಪಾಲಕರಿಗೆ ಮೊದಲಿಗೆ ಸಿಗುವುದು, ಇದನ್ನು ನಾವು ಅರಿಯಬೇಕಿದೆ. ನಿಮ್ಮ ಮಕ್ಕಳನ್ನು ಬೇರೆಯವರೊಂದಿಗೆ ಹೋಲಿಸಿದರೆ ಅವರಲ್ಲಿರುವ ಸ್ವಗೌರವ, ನಂಬಿಕೆ ಕಡಿಮೆಯಾಗುತ್ತ ಹೋಗುತ್ತದೆ. ತಮ್ಮ ಮಕ್ಕಳು ಬೇರೆಯವರಿಗಿಂತ ವಿಶೇಷ ಎಂಬುದನ್ನು ಪ್ರತಿ ಪಾಲಕರು ಅರಿಯಬೇಕು. ಅವರಿಗೆ ಅವರದ್ದೇ ಆದ ಸ್ವಂತಿಕೆ, ಗುರುತು ಇರುತ್ತದೆ. ಶೈಕ್ಷಣಿಕವಾಗಿ ಕ್ರೀಡೆಯಲ್ಲಿ ಸಾಧನೆ ಮಾಡುವುದೊಂದೇ ಮಕ್ಕಳ ಜೀವನದ ಗುರಿಯಲ್ಲ ಎಂಬುದನ್ನು ಪಾಲಕರು ಅರ್ಥೈಸಿಕೊಳ್ಳಬೇಕು.

    ಮನೆಊಟಕ್ಕೆ ಆದ್ಯತೆ ನೀಡಿ: ಮಕ್ಕಳಿಗೆ ಜಂಕ್​ಫುಡ್ಸ್ ನೀಡುವುದನ್ನು ನಿಲ್ಲಿಸಬೇಕು. ಇಂಥ ಆಹಾರ ಪದಾರ್ಥಗಳಿಂದ ದೂರವಿದ್ದರಷ್ಟೇ ಮಕ್ಕಳಿಗೆ ಕ್ರೀಡಾಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಸಾಧ್ಯ. ಮನೆಊಟವೇ ಎಲ್ಲದಕ್ಕೂ ಮದ್ದು ಎಂಬಂತೆ, ಮನೆಯಲ್ಲಿ ಅಮ್ಮಂದಿರು ತಯಾರಿಸಿದ ಶುಚಿ, ರುಚಿಕರ ತಿಂಡಿ, ಊಟ ಮಾಡುವುದರಿಂದ ಆರೋಗ್ಯಕ್ಕೂ ಒಳ್ಳೆಯದು, ಅಪ್ಪನ ಹಣ ಕೂಡ ಉಳಿತಾಯವಾಗುತ್ತದೆ. ಮಕ್ಕಳಿಗೆ ಮನೆಊಟಕ್ಕಿಂತ ಪ್ರೊಟೀನ್ ಮತ್ತೊಂದು ಏನಿದೆ? ‘ಮನೆಯೇ ಮಂತ್ರಾಲಯ, ಮನಸ್ಸೇ ದೇವಾಲಯ’ ಎಂದು ಹಿರಿಯರು ಹೇಳಿರುವಂತೆ, ಮಕ್ಕಳಿಗೆ ಮನೆಯಲ್ಲೇ ಕ್ರೀಡಾಸ್ಪೂರ್ತಿಯನ್ನು ತುಂಬಬೇಕು. ಕ್ರೀಡೆ ಆಯ್ಕೆಯಲ್ಲಿ ಯಾವುದು ಬೇಕು, ಯಾವುದು ಬೇಡ ಎಂಬುದರ ಬಗ್ಗೆ ತಿಳಿವಳಿಕೆ ಕೊಡಬೇಕು. ಇತ್ತೀಚಿನ ದಿನಗಳಲ್ಲಿ ಉದ್ದೀಪನ ಮದ್ದು ಮತ್ತು ಮಾದಕದ್ರವ್ಯ ಎಂಬುದು ಯುವಜನರ ಪಾಲಿಗೆ ಪಿಡುಗಾಗಿದೆ. ಹೀಗಾಗಿ ಮಕ್ಕಳಿಗೆ ಸ್ಪರ್ಧೆಯ ಜತೆಗೆ ಉದ್ದೀಪನ ಮದ್ದಿನ ಬಗ್ಗೆಯೂ ಹೆಚ್ಚು ಜಾಗರೂಕತೆ ವಹಿಸುವಂತೆ ತಿಳಿಹೇಳಬೇಕು. ಅಲ್ಲದೆ, ಯಾರೋ ನಿಷೇಧಿತ ಉದ್ದೀಪನ ಮದ್ದು ಸೇವಿಸಿದ ತಕ್ಷಣ ನಮ್ಮ ಮಕ್ಕಳು ಕ್ರೀಡೆಯಿಂದ ವಿಮುಖರಾಗುವಂತೆ ಒತ್ತಡ ಹೇರಬಾರದು, ಇದರಿಂದ ನಮಗೇ ನಷ್ಟ. ವೃತ್ತಿಪರರಾಗಿ ಯೋಚಿಸಿ ಮಕ್ಕಳ ಬೆನ್ನಿಗೆ ನಿಂತರೆ ಖಂಡಿತವಾಗಿಯೂ ನಾವು ಯಶಸ್ವಿಯಾಗುತ್ತೇವೆ. ಇದು ಕ್ರೀಡೆಯಲ್ಲಿ ಅಷ್ಟೇ ಅಲ್ಲ, ಎಲ್ಲ ಕ್ಷೇತ್ರಕ್ಕೂ ಅನ್ವಯಿಸುತ್ತದೆ.

    ಆಟವು ಒಂದು ಅರ್ಥಪೂರ್ಣ ಚಟುವಟಿಕೆಯಾಗಿದೆ. ಅಂದರೆ, ಉದ್ದೇಶದ ಏಕತೆಯಿಂದ ಒಂದುಗೂಡಿಸುವ ಅರ್ಥಪೂರ್ಣ ಕ್ರಿಯೆಗಳ ಒಂದು ಭಾಗ ಎಂದುಕೊಳ್ಳಬೇಕು. ಆಟವು ಮಾನವನ ಚಟುವಟಿಕೆಯ ಉತ್ಪನ್ನವಾಗಿದ್ದು, ಅದರ ಮೂಲಕ ವ್ಯಕ್ತಿ ವಾಸ್ತವವನ್ನು ಪರಿವರ್ತಿಸುತ್ತಾನೆ ಮತ್ತು ಜಗತ್ತನ್ನು ಬದಲಾಯಿಸುತ್ತಾನೆ. ಮಾನವ ಆಟದ ಸಾರವು ನೈಜತೆಯನ್ನು ಪ್ರದರ್ಶಿಸುವ ಮತ್ತು ಪರಿವರ್ತಿಸುವ ಸಾಮರ್ಥ್ಯದಲ್ಲಿದೆ. ಆಟದಲ್ಲಿ ಮೊದಲ ಬಾರಿಗೆ ಪ್ರಪಂಚದ ಮೇಲೆ ಪ್ರಭಾವ ಬೀರುವ ಮಗುವಿನ ಅಗತ್ಯ ನಮಗಿದೆ.

    (ಲೇಖಕರು ಪದ್ಮಶ್ರೀ ಪುರಸ್ಕೃತ ಪ್ಯಾರಾ ಅಥ್ಲೀಟ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts