ಮಕ್ಕಳಲ್ಲಿ ಮಾನಸಿಕ ಆರೋಗ್ಯದ ರಕ್ಷಣೆ

| ಡಾ.ಬಿ.ಎಂ. ಹೆಗ್ಡೆ

ನೀವು ಮಗುವಿಗೆ, ‘ಐಸ್ಕ್ರೀಮ್ ಪಾರ್ಲರ್​ಗೆ ಹೋಗೋಣ’ ಎಂದರೆ ಅದು ಎಷ್ಟು ಖುಷಿಪಡುತ್ತದೆ ಅಲ್ಲವೆ? ಆ ಐಸ್ಕ್ರೀಮ್ ಪಾರ್ಲರ್​ಗೆ ಹೋಗುವ ಉತ್ಸಾಹ, ಖುಷಿ ಶಾಲೆಗೆ ಹೋಗುವುದರಲ್ಲೂ ಇರಬೇಕು. ನಮಗೆ ಅಂತಹ ಶಾಲೆಗಳು ಬೇಕು. ಶಾಲೆಗಳು ಹೇಗಿರಬೇಕು ಎಂದರೆ, ಶಾಲೆಯಲ್ಲಿ ಮಗುವಿನ ಮನಸ್ಸನ್ನು ವಿಕಾಸಗೊಳಿಸುವಂತಹ ವಾತಾವರಣ ಇರಬೇಕು. ಅಲ್ಲಿ ಹೆದರಿಸುವಂತಹ ಟೀಚರ್​ಗಳು ಇರಬಾರದು. ಗದರಿಸುವವರು, ಪೆಟ್ಟು ಕೊಡುವವರು ಇರಬಾರದು. ಶಾಲೆಯಲ್ಲಿ ಅಧ್ಯಾಪಕರ ಪಾತ್ರ ಬಹಳ ಮುಖ್ಯವಾದದ್ದು. ತನಗೆ ಒಂದೇ ಮಗು ಇದ್ದರೆ ಎಷ್ಟು ಪ್ರೀತಿಸುತ್ತಾರೋ ಅಷ್ಟೇ ಪ್ರೀತಿಯನ್ನು ಅಧ್ಯಾಪಕರು ಶಾಲೆಯ ಪ್ರತಿಯೊಂದು ಮಗುವಿನ ಬಗೆಗೂ ತೋರಿಸಬೇಕು. ಇಂತಹ ಶಾಲೆಗಳು ಬೇಕು.

ಹಾಲೆಂಡ್​ನ (ನೆದರ್ಲೆಂಡ್) ಮಾಸ್ಟ್ರಿಕ್ಟ್ ಎಂಬಲ್ಲಿ ಒಂದು ಮೆಡಿಕಲ್ ಕಾಲೇಜು ಇದೆ. ಅಲ್ಲಿ ಮೊದಲ ಎರಡು ವರ್ಷ ಪುಸ್ತಕದಲ್ಲಿ ಏನೇನು ಕಲಿಯಬೇಕೋ ಅದನ್ನೆಲ್ಲ ಕಲಿಸುತ್ತಾರೆ. ನಂತರ ಪರೀಕ್ಷೆ ಮಾಡುತ್ತಾರೆ. ಉಳಿದ ಮೂರು ವರ್ಷ ಅವರು ಪ್ರ್ಯಾಕ್ಟೀಸ್ ಮಾಡುವ ಒಬ್ಬ ಡಾಕ್ಟರ್ ಜತೆಗೆ ಅವರ ಮನೆಯಲ್ಲೇ ಇರಬೇಕು. ಅವರ ಹೆಜ್ಜೆಗಳನ್ನು ಇವರು ಅನುಸರಿಸಬೇಕು. ಅವರು ಹೋದಲ್ಲಿಗೆ ಇವರೂ ಹೋಗುವುದು, ಅವರು ರೋಗಿಗಳನ್ನು ಪರೀಕ್ಷಿಸಿದರೆ ಇವರೂ ಪರೀಕ್ಷಿಸುವುದು, ಅವರು ಮಾಡಿದ್ದನ್ನು ‘ನೋಡಿ ಕಲಿಯುವುದು’…ಹೀಗೆ ಅದನ್ನೇ ಮೂರು ವರ್ಷ ಮಾಡಿದ ನಂತರ ಅವರಿಗೆ ಪದವಿ ನೀಡಿ ಸಮಾಜಕ್ಕೆ ಬೀಳ್ಕೊಡುತ್ತಾರೆ.

ಈಗ ನಮ್ಮಲ್ಲಿ ಕೊನೆಯ ವರ್ಷ ಪಾಸ್ ಆದ ಮರುದಿನವೇ ಅವನು ಕನ್ಸಲ್ಟಂಟ್-ಅವನಷ್ಟಕ್ಕೇ! ಆದರೆ ಹಾಗಲ್ಲ. ನಿಜವಾಗಿ ಕಲಿತು, ಅನುಭವಿಸಿ, ಅದರ ಕಷ್ಟಗಳನ್ನು ಅರಿತು, ಸ್ವಂತ ಅನುಭವದಿಂದ ಮೇಲೆ ಬರಬೇಕು. ಶಾಲೆಗಳು ಕೂಡ ಹಾಗೆಯೇ ಇರಬೇಕು. ಶಾಲೆಯಲ್ಲಿ ಅಧ್ಯಾಪಕರ ಜೀವನ ಆದರ್ಶಮಯವಾಗಿರಬೇಕು. ಅವರು ಹೇಳಿದ್ದನ್ನೇ ಮಾಡಬೇಕು, ಮಾಡಿದ್ದನ್ನೇ ಹೇಳಬೇಕು. ಹೇಳುವುದೊಂದು, ಮಾಡುವುದೊಂದು ಎಂದಾಗಬಾರದು. ಇಲ್ಲದಿದ್ದರೆ ಅಧ್ಯಾಪಕರೆಲ್ಲ, ‘ಧೂಮಪಾನ ಹಾಳು’ ಎಂದು ಹೇಳಿ ಬಿಡುವಿನ ಅವಧಿಯಲ್ಲಿ ಟೀಚರ್ಸ್ ರೂಮ್​ಗೆ ಹೋಗಿ ಸಿಗರೇಟ್ ಸೇದಿದರೆ ಮಕ್ಕಳಿಗೆ ಏನು ಅನಿಸಬಹುದು? ಅವರು ಏನು ಮಾಡುತ್ತಾರೆ ಹೇಳಿ! ಅಧ್ಯಾಪಕರು ಸಿಗರೇಟ್ ಸೇದುವುದನ್ನು ಮಕ್ಕಳು ನೋಡಿದರೆ, ‘ಅಧ್ಯಾಪಕರು ಹೇಳಿದ್ದು ಸುಳ್ಳು. ಧೂಮಪಾನ ಒಳ್ಳೆಯದಲ್ಲ ಎಂದಾದರೆ ನಮ್ಮ ಮೇಷ್ಟ್ರು ಯಾಕೆ ಧೂಮಪಾನ ಮಾಡುತ್ತಾರೆ? ಹಾಗಾಗಿ ಇವರು ನಮಗೆ ಮೋಸ ಮಾಡುತ್ತಾರೆ’ ಎಂದು ಭಾವಿಸಿಕೊಂಡು ಅವರು ಕೂಡ ಹೋಗಿ ಧೂಮಪಾನ ಮಾಡಲು ಪ್ರಾರಂಭಿಸುತ್ತಾರೆ.

ನಾವು ನಮ್ಮ ಮನೆಯಲ್ಲಿ ಮಕ್ಕಳಿಗೆ ಆದರ್ಶಪ್ರಾಯರಾಗಿರುತ್ತೇವೆ. ಆಗಿರಬೇಕು ಕೂಡ. ನಾವು ನಮ್ಮ ಸ್ನೇಹಿತರನ್ನೆಲ್ಲ ಕರೆದು ಮದ್ಯಪಾನ ಮಾಡುವುದು, ಆಕಸ್ಮಿಕವಾಗಿ ಮಕ್ಕಳು ಬಂದು ನೋಡಿದರೆ, ‘ಛೇ ಛೇ! ಇದು ನಿಮಗಲ್ಲ. ನೀವೆಲ್ಲ ಹೋಗಿ ಹೋಂವರ್ಕ್ ಮಾಡಿಕೊಳ್ಳಿ’ ಎನ್ನುವುದು. ಆಗ ಮಗು ಏನು ‘ಅರೆ! ಇದು ಒಳ್ಳೆಯದಲ್ಲದಿದ್ದರೆ ನನ್ನ ತಂದೆ ಯಾಕೆ ಸೇವಿಸುತ್ತಾನೆ?’ ಎಂದುಕೊಳ್ಳುವುದಿಲ್ಲವೆ?

ಹಾಗಾಗಿ ನಮಗೆ ಆದರ್ಶ ಇರಬೇಕು. ನಾವು ಮಾಡಿದ್ದನ್ನು ಮಕ್ಕಳು ಕಲಿಯಬೇಕು. ಅಂಥ ಆದರ್ಶಮಯ ವ್ಯಕ್ತಿಗಳೇ ಅಧ್ಯಾಪಕರಾಗಬೇಕು ಎಂಬುದು ನನ್ನ ಅಭಿಪ್ರಾಯ. ಮುಂಚಿನ ಕಾಲದಲ್ಲಿ ಅಂಥ ಆದರ್ಶಮಯ ವ್ಯಕ್ತಿಗಳೇ ಅಧ್ಯಾಪಕರಾಗಿದ್ದರು. ಆದರೆ ಈಗ ಹಾಗಲ್ಲ. ಬಹುತೇಕ ಜನ ಏನೂ ಕೆಲಸ ಸಿಗದಿದ್ದರೆ ಶಾಲೆಯಲ್ಲಿ ಅಧ್ಯಾಪಕರಾಗುತ್ತಾರೆ. ಅಷ್ಟೇ ಅಲ್ಲ, ಅವರಿಗೆ ಇನ್ನೂ ಬೇರೆ ಬೇರೆ ಆಸಕ್ತಿಗಳಿರುತ್ತವೆ. ನನ್ನ ದೃಷ್ಟಿಯಲ್ಲಿ ಅಧ್ಯಾಪಕ ವೃತ್ತಿ ಎನ್ನುವುದು ಅತ್ಯಂತ ಉದಾತ್ತವಾದ ವೃತ್ತಿಯಾಗಿದೆ. ಆ ಬಳಿಕ ವೈದ್ಯಕೀಯ ವೃತ್ತಿ. ಈಗ ಅದಿಲ್ಲ. ಈಗ ಅದು ತಿರುವುಮುರುವಾಗಿದೆ. ಬಹಳಷ್ಟು ವೈದ್ಯರಿಗೆ ಆದರ್ಶಗಳಿಲ್ಲ. ಸಾಕಷ್ಟು ಅಧ್ಯಾಪಕರಿಗೂ ಅದಿಲ್ಲ. ಇಂಥ ಪರಿಸ್ಥಿತಿ ಬರಬಾರದು, ಇದು ಬದಲಾಗಬೇಕು ಎಂಬುದು ನನ್ನ ಆಶೆ.