ಮಕ್ಕಳಿಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡಿ

ಖಾನಾಪುರ: ಪಾಲಕರು ಮಕ್ಕಳಿಗೆ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಬೇಕು ಎಂದು ವಿಶ್ರಾಂತ ಶಿಕ್ಷಕಿ ಶಾಂತಾ ಸವದಿ ಕರೆ ನೀಡಿದ್ದಾರೆ.

ಪಟ್ಟಣದ ವಿಶ್ವೇಶ್ವರಯ್ಯ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಆದರ್ಶ ಪ್ರಾಥಮಿಕ ಕನ್ನಡ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಗಡಿಭಾಗದಲ್ಲಿರುವ ಪ್ರತಿಯೊಬ್ಬ ಕನ್ನಡಿಗರು ತಮ್ಮ ತಾಯ್ನಡಿನ ಮೇಲಿರುವ ಅಭಿಮಾನ ಹಾಗೂ ಪ್ರೀತಿ ಹೊಂದಬೇಕು.

ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸಬೇಕು ಎಂದರು. ನೇತಾಜಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪ್ರೇಮಾ ಇಳಗೇರ, ಮುಖ್ಯಾಧ್ಯಾಪಕಿ ಪ್ರಭಾವತಿ ಕುಲಕರ್ಣಿ, ಪಪಂ ಸದಸ್ಯ ಮಜಹರ್ ಖಾನಾಪುರಿ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. ಕಳೆದ ಶೈಕ್ಷಣಿಕ ವರ್ಷದಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಮತ್ತು ಬಹುಮಾನ ವಿತರಿಸಲಾಯಿತು.

ನಂತರ ತಾಯಂದಿರ ಸಭೆ ಜರುಗಿತು. ಪಾಲಕರಿಗಾಗಿ ಶಾಲೆ ವತಿಯಿಂದ ವಿವಿಧ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕ ಮಹೇಂದ್ರ ಇಳಗೇರ ವಾರ್ಷಿಕ ವರದಿ ಓದಿದರು. ದಾಕ್ಷಾಯಿಣಿ ಪೂಜಾರ ನಿರೂಪಿಸಿದರು. ವಿದ್ಯಾ ಉಪ್ಪೀನ ವಂದಿಸಿದರು.