ನಂದಗೋಕುಲವಾದ ರಾಜಾಂಗಣ

ಉಡುಪಿ: ಪುಟ್ಟ ಕೃಷ್ಣ ಯಶೋದೆಯನ್ನು ಬಿಟ್ಟು ಬರಲಾಗದೆ ಅಳಲು ತೊಡಗಿದರೆ ಶತ ಪ್ರಯತ್ನದಿಂದ ಯಶೋದೆ ಮುದ್ದು ಮಾಡಿ ಅಂತೂ ವೇದಿಕೆಗೆ ಹತ್ತಿಸಲು ಯಶಸ್ವಿಯಾದರೆ ಮತ್ತೆ ಮಾತ್ರ ಏನೂ ಮಾಡದೆ ವೇದಿಕೆಯಲ್ಲಿ ಸುಮ್ಮನೆ ನಿಂತ ಬಾಲಕೃಷ್ಣ. ಒಂದು ಕೃಷ್ಣನ ಕೊಳಲು ಉಲ್ಟಾ ನಿಂತರೆ ಮತ್ತೊಬ್ಬ ಕೃಷ್ಣನಿಗೆ ಕಳಚಿಕೊಳ್ಳುತ್ತಿರುವ ತನ್ನ ಕೈಯ ಆಭರಣದ್ದೇ ಚಿಂತೆ. ಅದನ್ನು ಸರಿ ಮಾಡುವುದರಲ್ಲಿ ಸ್ಪರ್ಧೆಗೆ ನೀಡಿದ ಸಮಯ ಖತಂ.
ಅದರಲ್ಲೂ ವೇದಿಕೆ ಮೇಲಿರುವ ಮುದ್ದುಕೃಷ್ಣರಿಗಿಂತ ಕೆಳಗೆ ನಿಂತ ಯಶೋದೆ ಗೋಪಿಕೆಯರಿಗೆ ಬಲು ಟೆನ್ಶನ್. ಕೃಷ್ಣನಿಗೆ ಕೆಲವು ದಿನಗಳಿಂದ ಅಂಗಡಿ ಅಂಗಡಿ ಸುತ್ತಿ ತಂದ ವೇಷಭೂಷಣಗಳಿಂದ ಅಲಂಕರಿಸಿ ಒಂದೆರಡು ಹಾಡಿಗೆ ಹೆಜ್ಜೆ ಹಾಕುವುದನ್ನು ಕಲಿಸುವುದರೊಂದಿಗೆ ಮನೆಯಲ್ಲೇ ಮಾಡಿದ ಒಂದಷ್ಟು ಕಾಳಿಂಗ, ಗೋವರ್ಧನ ಗಿರಿ, ವಜ್ರ ಕವಚ, ಗೋವುಗಳ ಪ್ರತಿಕೃತಿ ಹೊತ್ತು ತಂದು ಅದರಲ್ಲಿ ಕೃಷ್ಣನನ್ನು ಕುಣಿಸಿ ಸಂಭ್ರಮ ಪಡುವ ಯಶೋದೆಯರಿಗೆ ತಮ್ಮ ಮಗು ವೇದಿಕೆಯಲ್ಲಿ ಯಾವ ರೀತಿ ಕುಣಿಯುವುದೋ, ಹೇಗೆ ನಟನೆ ಮಾಡುವುದೋ, ಏನೆಲ್ಲ ಕಸರತ್ತುಗಳಿಂದ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗುವುದೋ ಎಂಬ ಆತಂಕ, ತವಕ.

ಇಡೀ ಪರಿಸರವೇ ಕೃಷ್ಣಮಯ: ಕೆಳಗಡೆ ನಿಂತೇ ತಮ್ಮ ಹಾವಭಾವಗಳಿಂದ ಮಗುವಿಗೆ ಸನ್ನೆ ಮಾಡುತ್ತ ತಾನೇ ನೃತ್ಯ ಮಾಡುತ್ತ ವೇದಿಕೆ ಮೇಲಿರುವ ಮುದ್ದುಕೃಷ್ಣನನ್ನು ಹುರಿದುಂಬಿಸುವ ಅವರ ಹುಮ್ಮಸ್ಸು ನೋಡುವುದೇ ಗಮ್ಮತ್ತು. ಮುದ್ದುಕೃಷ್ಣ, ಬಾಲಕೃಷ್ಣ, ಕಿಶೋರ ಕೃಷ್ಣರೊಂದಿಗೆ ಬುಟ್ಟಿಯಲ್ಲಿ ಮಲಗಿದ ವಸುದೇವ ಕಂದ, ದೊಡ್ಡ ಬಾಳೆ ಎಲೆಯಲ್ಲಿ ಮಲಗಿದ ಪುಟ್ಟ ಮುಕುಂದ, ಗೋವರ್ಧನ ಗಿರಿ ಎತ್ತಿದ ಗೋವರ್ಧನ ಧಾರಿ, ಕಾಳಿಂಗನನ್ನು ಮಣಿಸಿ ಹೆಡೆಯ ಮೇಲೆ ಕುಣಿದ ಕೃಷ್ಣ, ಗೋವುಗಳೊಂದಿಗಿರುವ ಗೋಪಾಲಕೃಷ್ಣ, ಬಾಗಿಲನು ತೆರೆದು ದರ್ಶನ ನೀಡಿದ ಶ್ರೀಕೃಷ್ಣ, ಕೊಳಲ ನುಡಿಸಿದ ಮುರಳೀಲೋಲ, ಬೆಣ್ಣೆ ಕದ್ದು ತಿಂದ ನವನೀತ. ಇಡೀ ಪರಿಸರವೇ ಕೃಷ್ಣ ಮಯ… ಅದರೊಂದಿಗೆ ಯಶೋದೆ, ದೇವಕಿ, ನಂದಗೋಪ, ವಸುದೇವ, ಗೋಪಿಕೆಯರು.. ಎಲ್ಲಿ ನೋಡಿದರಲ್ಲಿ ಕೃಷ್ಣನ ನಗು, ಅಳು, ಚೇಷ್ಟೆ, ತುಂಟತನ…. ಅಷ್ಟಮಿಯ ಸಮಯ ಉಡುಪಿಗೆ ಉಡುಪಿಯೇ ನಂದಗೋಕುಲವಾಗುತ್ತದೆ… ಎಲ್ಲ ಕಡೆಯೂ ಮುದ್ದುಕೃಷ್ಣ.. ಮುದ್ದು ರಾಧೆ ಸ್ಪರ್ಧೆಗಳು. ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಅವನು ಪ್ರಿಯ.. ಎಲ್ಲ ವಯಸ್ಸಿನವರಿಗೂ ಅವನು ಸಖ.. ತಮ್ಮ ಪುಟ್ಟ ಮಕ್ಕಳಿಗೆ ಮುದ್ದು ಕೃಷ್ಣ ವೇಷ ಹಾಕಿ ನೋಡುವುದೇ ಒಂದು ಸುಖ.

  • ಉಡುಪಿ ಶ್ರೀ ಕೃಷ್ಣಮಠ ರಾಜಾಂಗಣದಲ್ಲಿ ಶ್ರೀಕೃಷ್ಣಾಷ್ಟಮಿ ಪ್ರಯುಕ್ತ ಮುದ್ದುಕೃಷ್ಣ ವೇಷ, ಮಧ್ವಾಂಗಣದಲ್ಲಿ ಕಿಶೋರ ಕೃಷ್ಣ, ಅನ್ನ ಬ್ರಹ್ಮದಲ್ಲಿ ಬಾಲಕೃಷ್ಣ ವೇಷ ಸ್ಪರ್ಧೆ ಆಯೋಜನೆ
  • 260: ರಾಜಾಂಗಣದಲ್ಲಿ ಒಂದು ತಿಂಗಳಿಂದ ಮೂರು ವರ್ಷವರೆಗಿನ 260 ಮಕ್ಕಳು ಭಾಗಿ
  • 190: ಮಧ್ವಾಂಗಣದಲ್ಲಿ 2ರಿಂದ 5 ವರ್ಷದವರೆಗಿನ 190 ಮಕ್ಕಳು ಸ್ಪರ್ಧೆಯಲ್ಲಿ ಭಾಗಿ
  • 80: ಅನ್ನ ಬ್ರಹ್ಮದಲ್ಲಿ 5ರಿಂದ 8 ವರ್ಷದವರೆಗಿನ 80 ಮಕ್ಕಳು ಮುದ್ದುಕೃಷ್ಣ ವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.