ಮಕ್ಕಳ ಸಾಹಿತ್ಯ ಮಾನವತಾವಾದ, ಕರುಣೆ ಬೆಳಸಲಿ: ಡಾ.ಬಸು ಬೇವಿನಗಿಡದ ಆಶಯ

ಧಾರವಾಡ: ಮಕ್ಕಳ ಸಾಹಿತ್ಯವು ಪುಟಾಣಿಗಳಲ್ಲಿ ಮನುಷ್ಯತ್ವ, ಸಾಮಾಜಿಕ ಮೌಲ್ಯ ಹುಟ್ಟು ಹಾಕಬೇಕು. ಮಾನವತಾವಾದ, ದಯೆ, ಅನುಕಂಪ ಮತ್ತು ಕರುಣೆಯ ಭಾವ ಬೆಳೆಸಬೇಕು ಎಂದು ಡಾ.ಬಸು ಬೇವಿನಗಿಡದ ಹೇಳಿದರು.

ಸಾಹಿತ್ಯ ಸಮ್ಮೇಳನದ ಅಂಗವಾಗಿ ಕೃಷಿ ವಿವಿ ಆವರಣದ ಪ್ರೇಕ್ಷಾಗೃಹ ಸಭಾಂಗಣದ ಡಾ.ಡಿ.ಸಿ. ಪಾವಟೆ ವೇದಿಕೆಯಲ್ಲಿ ಶನಿವಾರ ಜರುಗಿದ ಮೊದಲ ಮಕ್ಕಳ ಸಾಹಿತ್ಯ ಗೋಷ್ಠಿಯಲ್ಲಿ ‘ಮಕ್ಕಳ ಸಾಹಿತ್ಯ: ಮಾನವೀಯ ಮೌಲ್ಯಗಳು’ ವಿಷಯ ಮಂಡನೆ ಮಾಡಿ ಅವರು ಅವರು ಮಾತನಾಡಿದರು.

ಇಂದು ಯುವ ಸಾಹಿತಿಗಳು ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿ ಗದ್ಯ ಮತ್ತು ನಾಟಕಗಳನ್ನು ರಚಿಸಿ ಉತ್ತಮ ಸಾಧನೆಗೈದಿದ್ದಾರೆ. ರಾಷ್ಟ್ರಕವಿ ಕುವೆಂಪು ಸೇರಿ ಕನ್ನಡ ನಾಡಿನ ಹಲವು ಸಾಹಿತಿಗಳು ಅತ್ಯುತ್ತಮ ಕಾವ್ಯ ರಚನೆಯೊಂದಿಗೆ ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಈ ಸಾಹಿತ್ಯದ ಪರಂಪರೆ ಮುಂದುವರಿಸಿಕೊಂಡು ಹೋಗಬೇಕಾದ ಕರ್ತವ್ಯ ಇಂದಿನ ಯುವಕರ ಮೇಲಿದೆ ಎಂದರು.

ದೇಶ ಕಟ್ಟಿದ ನಾಯಕರ ಬಗ್ಗೆ ಅಪಪ್ರಚಾರ ನಡೆಯುತ್ತಿದೆ. ಇದನ್ನು ಆಲಿಸಿದ ಮಕ್ಕಳ ಮನದಲ್ಲಿ ನಾಯಕರ ಬಗ್ಗೆ ತಪ್ಪುಕಲ್ಪನೆ ಹುಟ್ಟುತ್ತಿದೆ. ಹಾಗಾಗಿ, ಅಪಪ್ರಚಾರ ನಿಲ್ಲಿಸಬೇಕು. ಮಕ್ಕಳಲ್ಲಿ ಸೂಕ್ಷ್ಮತೆ, ಸಂವೇದನಾಶೀಲತೆ ಬೆಳೆಸಬೇಕು. ಎಲ್ಲ ಜನರ ಒಳಿತು ಬಯಸುವ ಮನೋಧೋರಣೆ ಬೆಳೆಸಬೇಕು. ಬಾಳ್ವೆಗೆ ಅಡಿಪಾಯ ಹಾಕುವ ಕೆಲಸ ಆಗಬೇಕಿದೆ ಎಂದರು.

ಹೆತ್ತವರು ಕೇವಲ ಮೋಜು-ಮಸ್ತಿಯ ಸಂಗತಿಗಳ ಬದಲಿಗೆ ತಾವು ಅನುಭವಿಸಿದ ಸಂಘರ್ಷ, ಸಂಕಟದ ಕಥೆಗಳನ್ನು ಮಕ್ಕಳಿಗೆ ಹೇಳಿ ಬದುಕನ್ನು ಸವಾಲಿನಿಂದ ಸ್ವೀಕರಿಸಲು ಪ್ರೇರಣೆ ತುಂಬಬೇಕು. ಸಾಮಾಜಿಕ ನ್ಯಾಯದ ತಕ್ಕಡಿಯಲ್ಲಿ ಮಕ್ಕಳ ಸಾಹಿತ್ಯವನ್ನು ತೂಗಬೇಕು. ಹೊಸ ಲೇಖಕರು ಉತ್ತಮ ಕಥೆಗಳನ್ನು ಬರೆಯುತ್ತಿದ್ದಾರೆ. ವಿಷಯ ವೈಭವೀಕರಿಸುವ ಬದಲಿಗೆ, ನೈಜ ಸಂಗತಿಗಳ ಮೇಲೆ ಬೆಳಕು ಚೆಲ್ಲಬೇಕು. ಮಕ್ಕಳಲ್ಲಿ ಕಲ್ಪನಾ ಶಕ್ತಿ, ದೇಸಿಯತೆ, ಗ್ರಾಮೀಣ ಸೊಗಡು, ಲಯ ಮತ್ತು ದಂತಕಥೆಯ ಬಗ್ಗೆ ತಿಳಿಸಬೇಕು ಎಂದು ಸಲಹೆ ನೀಡಿದರು.