ಮಕ್ಕಳ ಭಿಕ್ಷಾಟನೆ ತಡೆಗೆ ಶೀಘ್ರ ಅಭಿಯಾನ

ದಾವಣಗೆರೆ: ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಧ್ಯಕ್ಷತೆಯಲ್ಲಿ ಡಿಸಿ ಕಚೇರಿಯಲ್ಲಿ ಸೋಮವಾರ ನಡೆದ ಜನಸ್ಪಂದನ ಸಭೆ, ಜನರ ಸಮಸ್ಯೆಗಳಿಗೆ ವೇದಿಕೆಯಾಯಿತು. ಸಾಮಾಜಿಕ ಕಳಕಳಿ ಹಾಗೂ ವೈಯಕ್ತಿಕ ಕೊರತೆಗಳ ಅಹವಾಲು ಸಲ್ಲಿಕೆಯಾದವು.

ಬಾಡಿಗೆ ಮಕ್ಕಳನ್ನು ಬಳಸಿ ಕೆಲ ಹೆಣ್ಣುಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ, ಇದನ್ನು ತಪ್ಪಿಸುವಂತೆ ಪರಿಸರ ಸಂರಕ್ಷಣಾ ವೇದಿಕೆಯ ಗಿರೀಶ್ ದೇವರಮನೆ ಮನವಿ ಸಲ್ಲಿಸಿದರು.

ಪೊಲೀಸ್ ಹಾಗೂ ಇತರೆ ಇಲಾಖೆಗಳ ಸಹಯೋಗದಲ್ಲಿ ಭಿಕ್ಷಾಟನೆ ತಡೆಗಾಗಿ ವಿಶೇಷ ಅಭಿಯಾನ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಸಾಮಾಜಿಕ ಭದ್ರತಾ ಯೋಜನೆಯಡಿ ಮಾಸಾಶನಕ್ಕೆ ಅರ್ಜಿ ಸಲ್ಲಿಸಿದ ಅನೇಕರು, ತಹಸೀಲ್ದಾರ್ ಕಚೇರಿಗಳ ಕೌಂಟರ್‌ಗಳಲ್ಲಿ ತಮಗೆ ಸ್ಪಂದನೆ ಸಿಗುತ್ತಿಲ್ಲ ಎಂದು ದೂರಿದರು. 35 ಸಾವಿರಕ್ಕೂ ಹೆಚ್ಚು ಜನರ ಮಾಸಾಶನ ನೀಡಿಕೆ ಪ್ರಕರಣಗಳಿವೆ. ಜನರಿಗೆ ತ್ವರಿತವಾಗಿ ತಲುಪಿಸಲು ಕ್ರಮ ವಹಿಸಬೇಕೆಂದು ಡಿಸಿ ಸೂಚಿಸಿದರು.

ಚನ್ನಗಿರಿ ತಾಲೂಕಿನ ಹಲವು ಗ್ರಾಮಗಳಿಗೆ ಹೆಚ್ಚುವರಿ ಬಸ್ ಬೇಕೆಂಬ ಮನವಿ ಸಲ್ಲಿಕೆಯಾಯಿತು. ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಕಾರಿ ಸಿದ್ದೇಶ್ವರ, ಜಿಲ್ಲೆಗೆ 99 ಬಸ್‌ಗಳ ಅಗತ್ಯವಿದೆ ಎಂದು ಮಾಹಿತಿ ನೀಡಿದರು. ಈ ಬಗ್ಗೆ ಮೇಲಧಿಕಾರಿಗಳ ಬಳಿ ಚರ್ಚಿಸಲು ಡಿಸಿ ಸಮ್ಮತಿಸಿದರು.

ಜಿಪಂ ಸಿಇಒ ಪದ್ಮಾ ಬಸವಂತಪ್ಪ, ನಗರಾಭಿವೃದ್ಧಿ ಕೋಶದ ಅಧಿಕಾರಿ ನಜ್ಮಾ, ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.

Leave a Reply

Your email address will not be published. Required fields are marked *