ಮನೆಯೇ ಮೊದಲ ಪಾಠಶಾಲೆ

| ಡಾ. ಸರಸ್ವತಿ ಹೆಗಡೆ, ಉನ್ನತಿ ಹೀಲಿಂಗ್ ಫೌಂಡೇಷನ್

ಕೆಲವು ವರ್ಷಗಳ ಹಿಂದಿನ ಮಕ್ಕಳು ಉತ್ಸಾಹದ ಚಿಲುಮೆಯಾಗಿ ಇರುತ್ತಿದ್ದರು. ನಿರಂತರ ಚಟುವಟಿಕೆ, ಆಟ, ನಗು, ಹರಟೆ ಸದಾ ತುಂಬಿರುತ್ತಿತ್ತು. ಯಾರ ಬೈಗುಳಕ್ಕೂ ಜಗ್ಗದೆ ಉತ್ಸಾಹಕ್ಕೆ ತಣ್ಣೀರೆರಚಿಕೊಳ್ಳುತ್ತಿಲಿಲ್ಲ. ಸುತ್ತಲಿನ ಮಕ್ಕಳ ಜತೆ ಕುಣಿದು ಕುಪ್ಪಳಿಸುವ ಸ್ವಭಾವ ಸಹಜವಾಗಿತ್ತು. ಮಗು ಎನ್ನುವ ಪದಕ್ಕೆ ಪರ್ಯಾಯ ಪದ ಉತ್ಸಾಹ ಎನ್ನುವಂತೆ ಇತ್ತು.

ಊಟ, ತಿಂಡಿ ತಿನ್ನಲು ತಕರಾರು ಮಾಡುವ ಮಕ್ಕಳು ಕಮ್ಮಿ ಇರುತ್ತಿದ್ದರು. ಎಲ್ಲರ ಜತೆ ಕುಳಿತು ಊಟ ಮಾಡುವ ಪ್ರವೃತ್ತಿ, ಪರಸ್ಪರ ಹಂಚಿಕೊಳ್ಳುವಿಕೆ, ಸಮಸ್ಯೆಗಳು ಎದುರಾದಾಗ ಹೋಗಲಿಬಿಡು ಎಂದು ಮುಂದೆ ಹೋಗುವ ಪ್ರವೃತ್ತಿ, ಕ್ಷಮೆ, ಸರಳತೆ, ಸ್ವಾಭಿಮಾನ, ಸಮಾಜ, ಹಿರಿಯರನ್ನು ಗೌರವಿಸುವ ಸ್ವಭಾವ, ದೇಶಭಕ್ತಿ, ಆತ್ಮಗೌರವ ಕಾಪಾಡಿಕೊಳ್ಳುವುದೇ ಮುಂತಾದ ಸಕಾರಾತ್ಮಕ ಸ್ವಭಾವಗಳು ಹೆಚ್ಚಿನ ಪ್ರಮಾಣದಲ್ಲಿ ಸಹಜವಾಗಿಯೇ ಕಾಣಸಿಗುತ್ತಿದ್ದವು. ರಾತ್ರಿ ಬೇಗ ಮಲಗುವುದು, ಬೆಳಗ್ಗೆ ಬೇಗ ಏಳುವುದು ಹೆಚ್ಚು ಕಮ್ಮಿ ಎಲ್ಲ ಮನೆಗಳಲ್ಲೂ ಅಭ್ಯಾಸವಾಗಿತ್ತು. ಬೆಳಗ್ಗೆ ಸೂರ್ಯೂೕದಯದ ನಂತರ ಏಳುವವರ ಸಂಖ್ಯೆ ಬಹಳ ಕಮ್ಮಿ ಇತ್ತು. ಸಮಾಜದ ದಿನಚರಿಯೇ ಹೆಚ್ಚು ವ್ಯವಸ್ಥಿತವಾಗಿತ್ತು. ಮನೆಯಲ್ಲಿ ಮಕ್ಕಳು ಕೆಲಸ ಮಾಡುವುದು ಸಹಜವಾಗಿತ್ತು. ಯಾವ ಮಗುವಿಗೂ ಒತ್ತಾಯದಿಂದ ಹೋಂವರ್ಕ್ ಮಾಡಿಸಿ, ಕಾಲುಚೀಲ ತೊಡಿಸಿ, ಸ್ಕೂಲ್ ಬ್ಯಾಗ್ ತುಂಬಿಸಿ, ತಡವಾಯಿತೆಂದು ಅವಸರದಿಂದ ಎತ್ತಿಕೊಂಡು ಹೋಗಿ ಶಾಲೆಯ ವ್ಯಾನ್​ನಲ್ಲಿ ಕಳಿಸುವ ಅಭ್ಯಾಸ ನಗರ ಪ್ರದೇಶದಲ್ಲಿಯೂ ಇರಲಿಲ್ಲ. ಬಾಲ್ಯದಿಂದಲೇ ಮಕ್ಕಳು ತಮ್ಮ ಕೆಲಸ ತಾವು ಮಾಡಿಕೊಳ್ಳುವುದನ್ನು ಕಲಿಯುತ್ತಿದ್ದರು. ಅವರು ಮಾಡಿಕೊಳ್ಳದಿದ್ದರೆ ಅದನ್ನು ಕಲಿಸುವ ವ್ಯವಧಾನ, ಅನಿವಾರ್ಯತೆ ಮತ್ತು ಅನುಭವ ಕುಟುಂಬದ ಸದಸ್ಯರಲ್ಲಿ ಇರುತ್ತಿತ್ತು.

ಸಾಧ್ಯವಾದರೆ ನಿಮ್ಮ ಸುತ್ತಲೂ ಇರುವ ಮಕ್ಕಳನ್ನು ಅವಲೋಕಿಸಿ. ಎಲ್ಲ ವಯಸ್ಸಿನವರನ್ನು ಗಮನಿಸಿ. ಶಾಲೆಯ ಸಮೀಪ ಹೋಗಿ ನಿಂತು ಗಮನಿಸಿ. ನಿಮ್ಮ ಬಾಲ್ಯ ಹಾಗೂ ಈಗಿನ ಮಕ್ಕಳ ಬಾಲ್ಯವನ್ನು ವಿಶೇಷವಾದ ದೃಷ್ಟಿಕೋನಗಳಿಂದ ಗಮನಿಸಿ.

ಅವರು ತಾಂತ್ರಿಕವಾಗಿ ಬುದ್ಧಿವಂತರು, ತೀಕ್ಷ ್ಣುತಿಗಳು. ಅವರ ಕಲಿಯುವ ಸಾಮರ್ಥ್ಯ ನಮ್ಮ ಬಾಲ್ಯಕ್ಕಿಂತ ಹೆಚ್ಚು ತ್ವರಿತವಾಗಿ ಇರುತ್ತದೆ. ಆದರೆ, ಅವರಲ್ಲಿ ಮಾನವೀಯ ಬಾಂಧವ್ಯಗಳು, ಸ್ವಾವಲಂಬನೆ ಮತ್ತು ಸಹನೆ ಕ್ಷೀಣಿಸುತ್ತಿರುವುದು ಗಮನಿಸುತ್ತೀರಿ. ಈ ಬದಲಾವಣೆ ಎಲ್ಲಿ, ಯಾಕೆ, ಹೇಗೆ ಆಯಿತು? ಒಮ್ಮೆ ಗಮನಿಸಿದಾಗ ಉತ್ತರ ಅಲ್ಲಿಯೇ ಇದೆ.

ಎಲ್ಲ ಪಾಠವನ್ನು ಶಾಲೆಯಲ್ಲಿ ಕಲಿಯಲು ಸಾಧ್ಯವಿಲ್ಲ. ಶಾಲೆಯಲ್ಲಿ ಕಲಿತ ಪಾಠ ಉದ್ಯೋಗಕ್ಕೆ ಅವಕಾಶ ಮಾಡಿಕೊಡಬಹುದೇ ಹೊರತು ಬದುಕಿನ ಕೌಶಲ ಕಲಿಸುತ್ತಿಲ್ಲ. ಮನೆಯಲ್ಲಿ ಕೆಲಸ ಮಾಡಲು ಕಲಿಯಬೇಕು. ಕೆಲಸ ಮಾಡಿದಾಗಲೇ ಸಮಯ ನಿರ್ವಹಣೆಯ ಮತ್ತು ಮಾನಸಿಕ ತಾಕತ್ತಿನ ಅನುಭವ ಬರುವುದು. ಮನೆಯಲ್ಲಿ ಮಕ್ಕಳು ತಮ್ಮ ಕೆಲಸ ಮಾಡಿಕೊಳ್ಳುವುದು ಬಹಳ ಮುಖ್ಯ. ಅವರ ಓದಿಗೆ ತೊಂದರೆಯಾಗುತ್ತದೆ ಎಂದು ಅವರನ್ನು ಎಲ್ಲ ರೀತಿಯ ಜವಾಬ್ದಾರಿಗಳಿಂದ ತಪ್ಪಿಸಿ, ಭ್ರಮಾಲೋಕದಲ್ಲಿ ಮುಳುಗಿಸುವುದು ತಪ್ಪು. ಇಲ್ಲದಿದ್ದಲ್ಲಿ ಬಾಲ್ಯದಿಂದಲೇ ದುರಹಂಕಾರ, ನಿರ್ಲಕ್ಷ್ಯ ನಿಷ್ಕಾಳಜಿಯನ್ನು ತಮ್ಮ ಪಾಲಕರು ಮತ್ತು ಸಮಾಜದ ಬಗ್ಗೆ ಬೆಳೆಸಿಕೊಳ್ಳುತ್ತಾರೆ. ಅತಿಯಾದ ಸ್ವಾರ್ಥತನದಿಂದ ಬದುಕಿನಲ್ಲಿ ಅತಿಯಾದ ನೋವು, ದುಃಖ, ನಿರಾಸೆಗೆ ಒಳಗಾಗುತ್ತಾರೆ. ಮನೆಯಲ್ಲಿ ಹಠ ಮಾಡಿ ಪಡೆದಿದ್ದು ಸಮಾಜದಲ್ಲಿ ಸಿಗದಿದ್ದಾಗ ಖಿನ್ನತೆಗೆ ಒಳಗಾಗುತ್ತಾರೆ.

ಓದು ಮಾತ್ರವೇ ಬದುಕನ್ನು ರೂಪಿಸುವುದಾದಲ್ಲಿ ವಿದ್ಯಾವಂತರು ಅತ್ಯಂತ ಯಶಸ್ವಿ ಹಾಗೂ ಆನಂದದ ಜೀವನ ನಡೆಸಬೇಕಿತ್ತು. ಆದರೆ ವಾಸ್ತವಿಕವಾಗಿ ಹಾಗೇನೂ ಇಲ್ಲ. ಓದಿಕೊಳ್ಳುವುದು ಮುಖ್ಯ, ಅದಕ್ಕೆ ಸೂಕ್ತ ವಾತಾವರಣ ಮುಖ್ಯ. ಶಾಲೆಯಲ್ಲಿ ಗಳಿಸುವ ಅಂಕಗಳು ಮನುಷ್ಯನ ಬದುಕನ್ನು ನಿರ್ಧರಿಸುವುದಿಲ್ಲ. ಜೀವನದ ಗುರಿಯೇ ಮಕ್ಕಳ ಅಗತ್ಯಗಳನ್ನು ಪೂರೈಸುವುದು ಎನ್ನುವ ಭ್ರಮೆಯನ್ನು ಮಕ್ಕಳಲ್ಲಿ ತುಂಬಬೇಡಿ. ಇದರಿಂದ ಮಕ್ಕಳು ಸ್ವಾರ್ಥಿಗಳಾಗುತ್ತಾರೆ. ಕಷ್ಟಪಟ್ಟು ಸಮಯಾವಕಾಶ ಮಾಡಿಕೊಂಡು ಅಭ್ಯಾಸ ಮಾಡಿ ಮುಂದೆ ಬರುವ ಮಕ್ಕಳಲ್ಲಿ ಬರುವ ಸರ್ವಾಂಗೀಣ ಅಭಿವೃದ್ಧಿ, ನಿರಂತರವಾಗಿ ಒತ್ತಾಯ ಮಾಡಿ, ಬೇರೆ ಇನ್ನು ಯಾವ ಜೀವನ ಕೌಶಲ ಕಲಿಯದೆ ಇರುವ ಮಕ್ಕಳಲ್ಲಿ ಕಾಣುವುದಿಲ್ಲ. ಬದುಕು ಸರ್ವಾಂಗೀಣವೇ ಹೊರತು ಏಕಮುಖವಲ್ಲ. ನಮ್ಮ ಜೀವನದಲ್ಲಿ ಮನಸ್ಸಿನ ಪಾತ್ರ ಬಹಳ ದೊಡ್ಡದು. ಮನಸ್ಸಿಗೆ ಒಂದು ಗುರಿ, ಸಾಧನೆ, ಅಭ್ಯಾಸ, ಶಿಸ್ತು, ನಿಯಮಗಳನ್ನು ಹಾಕಿಕೊಟ್ಟಲ್ಲಿ ಅದೇ ರೀತಿ ನಡೆಯಲು ಅಭ್ಯಾಸವಾಗುತ್ತದೆ. ಶಿಸ್ತು-ಸಂಯಮವನ್ನು ಬಾಲ್ಯದಿಂದಲೇ ಅರಿಯಬೇಕು. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಲಾರದು. ಸಮಾಜದ ಅನೇಕ ಜ್ವಲಂತ ಸಮಸ್ಯೆಗಳಿಗೆ ಮಕ್ಕಳಲ್ಲಿ ಪರಿವರ್ತನೆ ತರುವುದೇ ಪರಿಹಾರ.