ವಿಕೃತ ಕಾಮಿಗಳಿಗೆ ಕಾದಿದೆ ನೇಣಿನ ಕುಣಿಕೆ

ಕ್ಕಳ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ತಿದ್ದುಪಡಿ ಮಸೂದೆ ಸೋಮವಾರ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ದೌರ್ಜನ್ಯ ಎಸಗುವ ಪ್ರಕರಣಗಳಿಗೆ ಇದು ಅನ್ವಯವಾಗಲಿದೆ. ಹಲವು ರಾಜ್ಯಗಳಲ್ಲಿ ಈ ಅಪರಾಧಿಗಳಿಗೆ ಗಲ್ಲುಶಿಕ್ಷೆ ಜಾರಿಯಾಗಲಿದ್ದು, ಈ ಕುರಿತಾದ ಮಾಹಿತಿ ಇಲ್ಲಿದೆ.

ಜಮ್ಮು-ಕಾಶ್ಮೀರದ ಕಥುವಾ ಮತ್ತು ಉತ್ತರಪ್ರದೇಶದ ಉನ್ನಾವೋದಲ್ಲಿ ಇಬ್ಬರು ಬಾಲಕಿಯರ ಮೇಲೆ ನಡೆದ ಅತ್ಯಾಚಾರದ ಘಟನೆಗಳು ಭಾರಿ ತಲ್ಲಣ ಮೂಡಿಸಿದವು. ಮಕ್ಕಳ ಮೇಲೆ ಇಂಥ ದೌರ್ಜನ್ಯ ಎಸಗುವ ವಿಕೃತಕಾಮಿಗಳಿಗೆ ಮರಣದಂಡನೆ ವಿಧಿಸಬೇಕು ಎಂಬ ಜನಾಗ್ರಹವೂ

ತೀವ್ರಗೊಂಡಿತು. ಇದಕ್ಕೆ ಸ್ಪಂದಿಸಿದ ಕೇಂದ್ರ ಸರ್ಕಾರ ಈ ಸಂಬಂಧ ಏಪ್ರಿಲ್ 21ರಂದು ಸುಗ್ರಿವಾಜ್ಞೆ ಹೊರಡಿಸಿತ್ತು. ಪ್ರಸಕ್ತ, ಅಪರಾಧ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಇದು ಲೋಕಸಭೆಯಲ್ಲಿ ಅನುಮೋದನೆಯನ್ನೂ ಪಡೆದಿದೆ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಕಾಮುಕರಿಗೆ ಇನ್ನು ಮರಣದಂಡನೆ ಜಾರಿಯಾಗಲಿದೆ.

ಸುಗ್ರೀವಾಜ್ಞೆ ಅನ್ವಯ ಈಗಾಗಲೇ ಎರಡು ರಾಜ್ಯಗಳ ನ್ಯಾಯಾಲಯಗಳು ನಾಲ್ವರು ಅಪರಾಧಿಗಳಿಗೆ ಮರಣದಂಡನೆ ಘೋಷಿಸಿವೆ. ಅಲ್ಲದೆ, ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳು ಈ ಸುಗ್ರಿವಾಜ್ಞೆಯನ್ನು ಅನುಸರಿಸಿ ಸ್ವತಂತ್ರ ಮಸೂದೆ ರಚಿಸಿದ್ದು, ಕೇಂದ್ರ ಸರ್ಕಾರದ ಅನುಮೋದನೆಗೆ ಕಾಯುತ್ತಿವೆ ಎಂಬುದು ಗಮನಾರ್ಹ. 12 ವರ್ಷದೊಳಗಿನ ಮಕ್ಕಳ ಮೇಲೆ ದೌರ್ಜನ್ಯ ಎಸಗುವ ಅಪರಾಧಿಗಳಿಗೆ ಗಲ್ಲು ವಿಧಿಸುವ ಸಂಬಂಧದ ಮಸೂದೆಯನ್ನು ಇತ್ತೀಚೆಗಷ್ಟೇ ಅರುಣಾಚಲ ಪ್ರದೇಶ ಮತ್ತು ಹರಿಯಾಣ ಸರ್ಕಾರಗಳು ಕೂಡ ಅಂಗೀಕರಿಸಿವೆ.

ಎರಡು ಪ್ರಕರಣಗಳು: ಮಧ್ಯಪ್ರದೇಶದಲ್ಲಿ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಎರಡು ಪ್ರಕರಣಗಳಲ್ಲಿ ಇಬ್ಬರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಒಂದು ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಕೆಯಾದ ಐದೇ ದಿನದಲ್ಲಿ ಮರಣದಂಡನೆ ಶಿಕ್ಷೆ ಘೋಷಣೆಯಾಗಿದೆ.

ಕಾಟ್ಣಿ ಪಟ್ಟಣದಲ್ಲಿ ಶಾಲೆಯಿಂದ ಮನೆಗೆ ಬರುತ್ತಿದ್ದ ಆರು ವರ್ಷದ ಕಿಂಡರ್​ಗಾರ್ಟನ್ ವಿದ್ಯಾರ್ಥಿನಿ ಮೇಲೆ ಆಟೋ ರಿಕ್ಷಾ ಚಾಲಕ ರಾಜಕುಮಾರ್ ಕೋಲ್ (35) ಅತ್ಯಾಚಾರ ಎಸಗಿದ್ದ. ಈತನ ವಿರುದ್ಧ ಆರೋಪಪಟ್ಟಿ ಸಲ್ಲಿಕೆಯಾದ ಐದು ದಿನದಲ್ಲಿ ಕಾಂತಿ ಜಿಲ್ಲಾ ವಿಶೇಷ ನ್ಯಾಯಾಲಯ ಐಪಿಸಿ ಸೆಕ್ಷನ್ 376 ಎಬಿ ಅನ್ವಯ ಮರಣದಂಡನೆ ವಿಧಿಸಿದೆ (ಜುಲೈ 27). ಈತನನ್ನು ಜುಲೈ 7ರಂದು ಬಂಧಿಸಿ 18ರಂದು ಆರೋಪಪಟ್ಟಿ ಸಲ್ಲಿಸಲಾಗಿತ್ತು.

ಮತ್ತೊಂದು ಪ್ರಕರಣದಲ್ಲಿ, ಐಸ್​ಕ್ಯಾಂಡಿ ಮಾರಾಟಗಾರ ಜಿತೇಂದ್ರ ಕುಶ್ವಾಹ ಎಂಬಾತ ಆರು ವರ್ಷದ ಬಾಲಕಿಯನ್ನು ಜೂನ್ 20-21ರ ರಾತ್ರಿ ಅಪಹರಿಸಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ. 24 ತಾಸಿನಲ್ಲಿ ಈತನನ್ನು ಬಂಧಿಸಿದ ಪೊಲೀಸರು, 10 ದಿನಗಳಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರು. 36 ದಿನಗಳಲ್ಲಿ ಅಂದರೆ ಜುಲೈ 27ರಂದು ಗ್ವಾಲಿಯರ್​ನ ತ್ವರಿತ ಗತಿ ನ್ಯಾಯಾಲಯ ಕುಶ್ವಾಹಗೆ ಗಲ್ಲು ಶಿಕ್ಷೆ ವಿಧಿಸಿದೆ.

ಕಳೆದ ಮೇ 21ರಂದು ಸಾಗರ ಜಿಲ್ಲೆಯ ರೆಹ್ಲಿಯ ದೇವಸ್ಥಾನದಲ್ಲಿ 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆಗೈದ ಭಾಗಿ ಅಲಿಯಾಸ್ ನಾರಾಯಣ್ ಪಟೇಲ್​ನಿಗೆ ನ್ಯಾಯಾಲಯ ಜುಲೈ 7ರಂದು ಮರಣದಂಡನೆ ಘೋಷಿಸಿದೆ. ಈ ಘಟನೆ ನಡೆದ 24 ತಾಸುಗಳಲ್ಲಿ ಅಪರಾಧಿಯನ್ನು ಬಂಧಿಸಿ, 72 ತಾಸುಗಳಲ್ಲಿ ಆರೋಪಪಟ್ಟಿ ದಾಖಲಿಸಲಾಗಿತ್ತು. 46 ದಿನಗಳಲ್ಲಿ ಪ್ರಕರಣದ ತೀರ್ಪು ಹೊರಬಿತ್ತು. ಒಟ್ಟಾರೆ ಈ ವರ್ಷ ಮಧ್ಯಪ್ರದೇಶದಲ್ಲಿ 4 ಅತ್ಯಾಚಾರ ಪ್ರಕರಣಗಳಲ್ಲಿ ಮರಣದಂಡನೆ ಘೋಷಿಸಲಾಗಿದೆ. ಈ ಪೈಕಿ ಎರಡನ್ನು ಸುಗ್ರೀವಾಜ್ಞೆ ಜಾರಿ ಮುನ್ನ ಮತ್ತು ಎರಡನ್ನು ಜಾರಿ ಬಳಿಕ ಘೋಷಿಸಲಾಗಿದೆ.

ಸಮಾಜವಿಜ್ಞಾನಿಗಳು ಹೇಳುವುದೇನು?

ನಿಜಕ್ಕೂ ಇಂಥದ್ದೊಂದು ಕಾಯ್ದೆಯ ಅವಶ್ಯಕತೆ ಇತ್ತು. ಏನೂ ತಿಳಿಯದ ಮುಗ್ಧ ಮಕ್ಕಳ ಮೇಲೆ ಅತ್ಯಾಚಾರದ ಘಟನೆಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಲೇ ಇವೆ. 6-8 ವರ್ಷದ ಹೆಣ್ಣುಮಕ್ಕಳಿಗೆ ಚಾಕ್​ಲೇಟ್ ಆಸೆ ತೋರಿಸಿಯೋ, ಬೆದರಿಸಿಯೋ ದೌರ್ಜನ್ಯ ನಡೆಸುವ ಕಾಮುಕರಿಗೆ ಉಗ್ರ ಶಿಕ್ಷೆ ಆಗಲೇಬೇಕು. ಈ ಮಕ್ಕಳು ಘಟನೆ ಬಗ್ಗೆ ಬಾಯಿ ಬಿಡುವ ಸಾಧ್ಯತೆ ಕಡಿಮೆ ಎಂದು ಭಾವಿಸಿ ದುರುಳರು ಇಂಥ ಕೃತ್ಯಗಳಿಗೆ ಮುಂದಾಗುತ್ತಾರೆ. ಬಾಲ್ಯದಲ್ಲೇ ಜೀವನ ನರಕವಾಗಿಸುವ ಇಂಥ ಕೃತ್ಯಕ್ಕೆ ಮರಣದಂಡನೆ ಸರಿಯಾದ ಶಿಕ್ಷೆಯಾಗಿದ್ದು, ಶಿಕ್ಷೆಯ ಭಯದಿಂದಲಾದರೂ ಮುಂಬರುವ ದಿನಗಳಲ್ಲಿ ಈ ಬಗೆಯ ಘಟನೆಗಳು ತಗ್ಗುವ ಸಾಧ್ಯತೆ ಇದೆ ಎನ್ನುತ್ತಾರೆ ಸಮಾಜವಿಜ್ಞಾನಿಗಳು.

ರಾಜಸ್ಥಾನದಲ್ಲಿನ ಸ್ಥಿತಿ

ರಾಜಸ್ಥಾನ ಸರ್ಕಾರ ಅಪರಾಧ ಕಾಯ್ದೆ(ರಾಜಸ್ಥಾನ ತಿದ್ದುಪಡಿ)ಗೆ ಈ ವರ್ಷದ ಮಾರ್ಚ್​ನಲ್ಲಿ ಅಂಗೀಕಾರ ಪಡೆದುಕೊಂಡಿದೆ. ಇದು ಸೆಕ್ಷನ್ 376ಎಎ(12 ವರ್ಷದವರೆಗಿನ ಬಾಲಕಿಯರ ಮೇಲೆ ಅತ್ಯಾಚಾರ) ಮತ್ತು ಸೆಕ್ಷನ್ 376ಡಿಡಿ(12 ವರ್ಷದವರೆಗಿನ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ) ಒಳಗೊಂಡಿದ್ದು, ಅಪರಾಧಿಗಳಿಗೆ ಮರಣದಂಡನೆ ವಿಧಿಸುವ ಅವಕಾಶವಿದೆ. ಮೇ 9ರಂದು ಏಳು ತಿಂಗಳ ಹೆಣ್ಣುಮಗುವಿನ ಮೇಲೆ ಅತ್ಯಾಚಾರ ಎಸಗಿದ 19 ವರ್ಷದ ಪಿಂಟು ಎಂಬ ಅಪರಾಧಿಗೆ ಜುಲೈ 21ರಂದು ಅಲ್ವಾರ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಗೇಂದ್ರ ಕುಮಾರ್ ಅಗರ್​ವಾಲ್ ಮರಣದಂಡನೆ ಘೋಷಿಸಿದ್ದಾರೆ. ಹರಿಯಾಣ ಮತ್ತು ಅರುಣಾಚಲ ಪ್ರದೇಶ ಸರ್ಕಾರಗಳು ಕೂಡ ಇದೇ ಸೆಕ್ಷನ್​ಗಳ ಅಡಿಯಲ್ಲಿ ಈ ವರ್ಷದ ಮಾರ್ಚ್​ನಲ್ಲಿ ಕಾನೂನು ಅಂಗೀಕರಿಸಿವೆ.

ಫಾಸ್ಟ್​ಟ್ರಾ್ಯಕ್ ಕೋರ್ಟ್ ಶೀಘ್ರ

ಅತ್ಯಾಚಾರ ಪ್ರಕರಣಗಳ ತ್ವರಿತ ವಿಚಾರಣೆಗೆ ದೇಶಾದ್ಯಂತ ಫಾಸ್ಟ್ ಟ್ರಾ್ಯಕ್ ಕೋರ್ಟ್​ಗಳ ಸ್ಥಾಪನೆ ಮತ್ತು ಅಂಥ ಪ್ರಕರಣಗಳಿಗೆ ಸಂಬಂಧಿತ ತನಿಖೆಗೆ ನೆರವಾಗುವ ಮೂಲಭೂತ ಸೌಕರ್ಯ ವೃದ್ಧಿಗೆ ಕಾನೂನು ಸಚಿವಾಲಯ ಕೇಂದ್ರ ಸರ್ಕಾರಕ್ಕೆ ಕಾನೂನು ಪ್ರಸಾವನೆ ಸಲ್ಲಿಸಿದೆ. 12 ವರ್ಷದೊಳಗಿನ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿನ ಅಪರಾಧಿಗಳಿಗೆ ಮರಣದಂಡನೆ ವಿಧಿಸುವ ಕೇಂದ್ರ ಸರ್ಕಾರದ ನೂತನ ಸುಗ್ರೀವಾಜ್ಞೆಯ ಭಾಗವಾಗಿ ಈ ಯೋಜನೆ ಜಾರಿಯಾಗಲಿದೆ. ಸಚಿವ ಸಂಪುಟದಲ್ಲಿ ಇದಕ್ಕೆ ಅನುಮೋದನೆ ದೊರೆತ ಬಳಿಕ ಅನುಷ್ಠಾನದ ರೂಪ ಪಡೆದುಕೊಳ್ಳಲಿದೆ.