ಮಕ್ಕಳ ಅಶ್ಲೀಲ ದೃಶ್ಯ ಷೇರ್ ಮಾಡಿದ್ರೆ 7 ವರ್ಷ ಜೈಲು

ನವದೆಹಲಿ: ವಾಟ್ಸ್​ಆಪ್ ಗ್ರೂಪ್​ಗಳಲ್ಲಿ ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಷೇರ್ ಮಾಡಿದರೆ ಇನ್ನು 7 ವರ್ಷ ಜೈಲು ಶಿಕ್ಷೆ ಖಚಿತ. ಸಾಮಾಜಿಕ ಜಾಲ ತಾಣಗಳಲ್ಲಿ ಇಂಥ ವಿಡಿಯೋಗಳು ಹೆಚ್ಚಿನ ಸಂಖ್ಯೆಯಲ್ಲಿ ಷೇರ್ ಆಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ನಿಯಂತ್ರಣ ಹೇರಲು ಮುಂದಾಗಿದೆ.

ಪೋಕ್ಸೋ ಕಾಯ್ದೆಯಲ್ಲಿ ತಿದ್ದುಪಡಿ ತರುವ ಮೂಲಕ ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಇನ್ಸ್ ಟೆಂಟ್ ಮೆಸೆಜಿಂಗ್ ಆಪ್​ನಲ್ಲಿ ಹಂಚಿಕೆ ಮಾಡುವವರಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಲು ಸರ್ಕಾರ ಚಿಂತನೆ ನಡೆಸಿದೆ. ಇಂಥ ಆರೋಪಿಗಳಿಗೆ ಜಾಮೀನು ಸಿಗುವುದಿಲ್ಲ ಮತ್ತು ದಂಡ ಕೂಡ ಹೇರಲಾಗುತ್ತದೆ. ಎರಡನೇ ಬಾರಿ ಇದೇ ಅಪರಾಧ ಕೃತ್ಯದಲ್ಲಿ ಸಿಕ್ಕಿಬಿದ್ದರೆ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಗುರಿಪಡಿಸುವ ಬಗ್ಗೆ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.

ಕಾನೂನು ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದಿಂದ ಪ್ರಸ್ತಾವನೆಗೆ ಮುಂದಿನ ವಾರ ಸಮ್ಮತಿ ಸಿಗುವ ಸಾಧ್ಯತೆಯಿದೆ. ಬಳಿಕ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಶ್ಲೀಲ ವಿಡಿಯೋಗಳು ಬೇರೊಬ್ಬರಿಂದ ಸ್ವೀಕೃತವಾದರೆ ಕೂಡಲೇ ಸಂಬಂಧಿತ ಸಚಿವಾಲಯದ ಅಧಿಕಾರಿಯ ಗಮನಕ್ಕೆ ತರಬೇಕು. ವಿಡಿಯೋಗಳನ್ನು ಮೊಬೈಲ್​ನಲ್ಲಿ ಸಂಗ್ರಹಿಸಿಟ್ಟುಕೊಳ್ಳುವವರ ವಿರುದ್ಧವೂ ಕ್ರಮ ಜರುಗಿಸುವ ಬಗ್ಗೆ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.