ರೈಲಿನ ಕೆಳಗೆ ಬಿದ್ದರೂ ಬದುಕುಳಿದ ಮಗು!

ಆಗ್ರಾ: ರೈಲು ಹಾದು ಹೋದರೂ ಹಳಿ ಮೇಲೆ ಬಿದ್ದಿದ್ದ ಒಂದು ವರ್ಷದ ಮಗು ಸ್ವಲ್ಪವೂ ಗಾಯಗೊಳ್ಳದೇ ಆಶ್ಚರ್ಯಕರ ರೀತಿಯಲ್ಲಿ ಬಚಾವಾಗಿದೆ. ನವದೆಹಲಿಯಿಂದ ವಿಶಾಖಪಟ್ಟಣಕ್ಕೆ ತೆರಳುತ್ತಿದ್ದ ಸಮತಾ ರೈಲಿನಲ್ಲಿ ಮಗುವಿನ ಜತೆ ದಂಪತಿ ಪ್ರಯಾಣಿಸಿದ್ದರು. ಮಥುರಾ ನಿಲ್ದಾಣದಲ್ಲಿ ಅವರು ರೈಲು ಇಳಿಯುತ್ತಿದ್ದರು. ಅಷ್ಟರಲ್ಲಿ ರೈಲು ಚಲಿಸಲಾರಂಭಿಸಿತು. ಅವಸರದಲ್ಲಿ ತಾಯಿಯ ಕಂಕುಳಲ್ಲಿದ್ದ ಪುಟ್ಟ ಮಗು ಜಾರಿ, ಹಳಿ ಮೇಲೆ ಬಿತ್ತು. ಇದೇ ವೇಳೆ ಮತ್ತೊಂದು ಕಡೆಯಿಂದ ರೈಲು ಆಗಮಿಸಿತ್ತು. ಮಗು ಬದುಕುಳಿಯುವುದು ಅಸಾಧ್ಯವೆಂದೇ ಅಲ್ಲಿದ್ದವರು ಭಾವಿಸಿದ್ದರು. ರೈಲು ಹೋದ ಬಳಿಕ ಮಗುವಿನ ಅಳು ಸದ್ದು ಕೇಳಿಸಿತು. ಮಗುವನ್ನು ಎತ್ತಿಕೊಂಡು ಪರೀಕ್ಷಿಸಿದಾಗ ಮಗುವಿಗೆ ಸಣ್ಣ ಗಾಯವೂ ಆಗಿಲ್ಲದಿರುವುದು ಕಂಡುಬಂದಿತು.