ಚೈಲ್ಡ್ ಲಾಕ್ ವ್ಯವಸ್ಥೆ ಬಂದ್

ಬೆಂಗಳೂರು: ಮಹಿಳಾ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ 2019 ಜು.1ರಿಂದ ಟ್ಯಾಕ್ಸಿಯಾಗಿ ಬಳಸುವ ಕಾರು ಸೇರಿ ಎಂ1 ವರ್ಗದ ಎಲ್ಲ ಸಾರಿಗೆ ವಾಹನಗಳಲ್ಲಿ ಚೈಲ್ಡ್ ಲಾಕ್ ವ್ಯವಸ್ಥೆಯನ್ನು ಕಡ್ಡಾಯವಾಗಿ ನಿಷ್ಕ್ರಿಯಗೊಳಿಸಬೇಕು ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಸೂಚಿಸಿದೆ. ಈ ಕುರಿತು ಎಲ್ಲ ರಾಜ್ಯದ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಸಾರಿಗೆ ಆಯುಕ್ತರಿಗೆ ಸಚಿವಾಲಯ ಸುತ್ತೋಲೆ ರವಾನಿಸಿದೆ.

ಮಕ್ಕಳ ಸುರಕ್ಷತೆಗಾಗಿ ವಾಹನ ಉತ್ಪಾದಕರು ಚೈಲ್ಡ್ ಲಾಕ್ ವ್ಯವಸ್ಥೆಯನ್ನು ವಾಹನಗಳಲ್ಲಿ ಅಳವಡಿಸಿರುತ್ತಾರೆ. ಚೈಲ್ಡ್ ಲಾಕ್ ವ್ಯವಸ್ಥೆ ಚಾಲ್ತಿಯಲ್ಲಿರುವಾಗ ಕಾರಿನ ಬಾಗಿಲುಗಳನ್ನು ತೆರೆಯಲು ಸಾಧ್ಯವಿಲ್ಲ. ಇಂತಹ ಸನ್ನಿವೇಶದಲ್ಲಿ ಅಪರಾಧಿಗಳು ಈ ವ್ಯವಸ್ಥೆ ದುರ್ಬಳಕೆ ಮಾಡಿಕೊಳ್ಳಬಹುದು. ಆದ್ದರಿಂದ ಚೈಲ್ಡ್ ಲಾಕ್ ವ್ಯವಸ್ಥೆ ನಿಷ್ಕ್ರಿಯಗೊಳಿಸಬೇಕು ಎಂದು ಸೂಚಿಸಿದೆ.

ಆಪ್ ಆಧಾರಿತ ಟ್ಯಾಕ್ಸಿಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಕೆಲ ತಿಂಗಳ ಹಿಂದೆ ಕಂಪನಿಗಳ ಪ್ರತಿನಿಧಿಗಳು, ಪೊಲೀಸ್ ಅಧಿಕಾರಿಗಳ ಜತೆ ಡಿಸಿಎಂ ಡಾ. ಜಿ. ಪರಮೇಶ್ವರ್ ಸಭೆ ನಡೆಸಿದ್ದರು. ಈ ಸಂದರ್ಭದಲ್ಲಿಯೂ ಚೈಲ್ಡ್ ಲಾಕ್ ವ್ಯವಸ್ಥೆ ಬಗ್ಗೆ ಚರ್ಚೆ ನಡೆದಿತ್ತು.

ಕರಡು ಅಧಿಸೂಚನೆಯಲ್ಲಿ ಏನಿತ್ತು?: ಕರ್ನಾಟಕ ಮೋಟಾರು ವಾಹನಗಳ ಕಾಯ್ದೆ-1988ರ ಕಲಂ2(25)ರಲ್ಲಿ ವ್ಯಾಖ್ಯಾನಿಸಿರುವ ಸಾರಿಗೆ ವಾಹನ ವರ್ಗದ ಮೋಟಾರ್ ಕ್ಯಾಬ್ಸ್ (ಟ್ಯಾಕ್ಸಿ) ವಾಹನಗಳಲ್ಲಿ ಚೈಲ್ಡ್ ಸೇಫ್ಟಿ ಲಾಕ್ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸತಕ್ಕದ್ದು, ತಪ್ಪಿದ್ದಲ್ಲಿ ಅಂಥ ವಾಹನಗಳ ರಹದಾರಿ ನೀಡುವ/ನವೀಕರಿಸುವ ಮತ್ತು ಅರ್ಹತಾ ಪತ್ರ ನೀಡುವ/ನವೀಕರಣ ಮಂಜೂರು ಮಾಡುವಂತಿಲ್ಲ ಎಂದು ಉಲ್ಲೇಖಿಸಿ ಸಾರಿಗೆ ಇಲಾಖೆ ಆಕ್ಷೇಪಣೆ ಆಹ್ವಾನಿಸಿತ್ತು.

ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ

ಚೈಲ್ಡ್ ಲಾಕ್ ವ್ಯವಸ್ಥೆ ನಿಷ್ಕ್ರಿಯ ಕುರಿತು ಪ್ರಸ್ತುತ ಕರ್ನಾಟಕ ಹೈಕೋರ್ಟ್​ನಲ್ಲಿ ಪಿಐಎಲ್​ವಿಚಾರಣೆ ನಡೆಯುತ್ತಿದೆ. ಚೈಲ್ಡ್ ಲಾಕ್ ನಿಷ್ಕ್ರಿಯ ಕರ್ನಾಟಕ ಮೋಟಾರು ವಾಹನಗಳ ಕಾಯ್ದೆ ನಿಯಮಕ್ಕೆ ತಿದ್ದುಪಡಿ ತಂದು ಅ.9ರಂದು ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದೆ. ಈ ಕುರಿತು ಸಾರಿಗೆ ಇಲಾಖೆ ಶೀಘ್ರ ಅಂತಿಮ ಅಧಿಸೂಚನೆ ಹೊರಡಿಸುವ ಸಾಧ್ಯತೆಯಿದೆ. ಜನವರಿ ಮೊದಲ ವಾರ ಪಿಐಎಲ್ ಮತ್ತೆ ವಿಚಾರಣೆಗೆ ಬರಲಿದೆ. ಕೇಂದ್ರದ ಸುತ್ತೋಲೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರತ್ಯೇಕ ಅಧಿಸೂಚನೆ ಹೊರಡಿಸಲಿದೆಯೇ ಅಥವಾ ಜು.1ರ ಮೊದಲೇ ಚೈಲ್ಡ್ ಲಾಕ್ ವ್ಯವಸ್ಥೆ ನಿಷ್ಕ್ರಿಯಗೊಳಿಸಲು ಆದೇಶಿಸಲಿದೆಯೇ ಎನ್ನುವುದು ಪ್ರಶ್ನೆಯಾಗಿದೆ.