ಉಡುಪಿಯಲ್ಲಿ ಚೈಲ್ಡ್‌ಲೈನ್ ಆರಂಭ

<<<ರಕ್ಷಣೆ ಅಗತ್ಯವಿರುವ ಮಕ್ಕಳಿಗೆ ದಿನದ 24 ತಾಸು ತುರ್ತು ಸೇವೆ>>>

ವಿಜಯವಾಣಿ ಸುದ್ದಿಜಾಲ ಉಡುಪಿ
ಅನಾಥ, ನಿರ್ಗತಿಕ, ಶಿಕ್ಷಣ ವಂಚಿತ ಮಕ್ಕಳ ಆರೈಕೆ ಜತೆಗೆ ರಕ್ಷಣೆ ನೀಡಿ ಶಿಕ್ಷಣ ಮುಂದುವರಿಸಲು, ಸಂವಹನ ಕೊರತೆಯಿಂದ ವಂಚಿತರಾಗುವ ಮಕ್ಕಳ ರಕ್ಷಣೆಗೆ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಸಹಕಾರದಲ್ಲಿ ಉಚಿತ ‘ಚೈಲ್ಡ್‌ಲೈನ್-1098’ ಸೇವೆ ಉಡುಪಿ ಜಿಲ್ಲೆಯಲ್ಲಿ ಆರಂಭಗೊಂಡಿದೆ.

ಜಿಲ್ಲೆಯಲ್ಲಿ ಮಕ್ಕಳ ರಕ್ಷಣೆ ಸಂಬಂಧಿಸಿ ಚೈಲ್ಡ್‌ಲೈನ್‌ಗೆ ಕರೆ ಮಾಡಿದರೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿಗೆ ಕರೆ ವರ್ಗಾವಣೆಯಾಗುತ್ತಿತ್ತು. ಪ್ರಸ್ತುತ ಜಿಲ್ಲೆಯಲ್ಲಿಯೇ ಕೇಂದ್ರ ಸರ್ಕಾರದ ಯೋಜನೆ ಆರಂಭವಾಗಿದೆ.

ನಗರದ ಕುಕ್ಕಿಕಟ್ಟೆಯಲ್ಲಿರುವ ಶ್ರೀಕೃಷ್ಣ ಬಾಲನಿಕೇತನ ಸಂಸ್ಥೆ ಕಟ್ಟಡದಲ್ಲಿ ಕಳೆದ ತಿಂಗಳು ಮಾರ್ಚ್ 8ರಿಂದ ಚೈಲ್ಡ್‌ಲೈನ್ ಕಂಟ್ರೋಲ್ ರೂಂ ಆರಂಭವಾಗಿದೆ. ಹಿಂಸೆ, ಅತ್ಯಾಚಾರಕ್ಕೆ ಒಳಗಾದ ಮಕ್ಕಳು, ಬೀದಿ ಮಕ್ಕಳು, ಮಾನಸಿಕ ಹಾಗೂ ಅಂಗವಿಕಲ ಮಕ್ಕಳು, ಮಾದಕ ವಸ್ತುಗಳ ವ್ಯಸನಿಗಳು, ನಿರ್ಗತಿಕ ಮಕ್ಕಳು, ಬಾಲ್ಯ ವಿವಾಹ, ಬಾಲ ಕಾರ್ಮಿಕರು, ಕಾಣೆಯಾದ ಮಕ್ಕಳಿಗಾಗಿ ಈ ಸಹಾಯವಾಣಿ ಕಾರ್ಯ ನಿರ್ವಹಿಸುತ್ತದೆ.

24 ಗಂಟೆ ಸೇವೆ: ಚೈಲ್ಡ್‌ಲೈನ್ ಸಹಾಯವಾಣಿ ಸಂಖ್ಯೆ 1098ಕ್ಕೆ ಜಿಲ್ಲೆಯ ಯಾವುದೇ ಪ್ರದೇಶದಿಂದ ಕರೆ ಮಾಡಿದರೆ ಬೆಂಗಳೂರಿನ ಕೇಂದ್ರೀಕೃತ ಸಂಪರ್ಕ ಕೇಂದ್ರ (ಸೆಂಟ್ರಲೈಸ್ಡ್ ಕಾಂಟ್ಯಾಕ್ಟ್ ಸೆಂಟರ್)ದಲ್ಲಿ ಕರೆ ವಿವರ ದಾಖಲಾಗುತ್ತದೆ. ಅಲ್ಲಿನ ಸಿಬ್ಬಂದಿ ಸಂಬಂಧಪಟ್ಟ ಜಿಲ್ಲೆಯ ಚೈಲ್ಡ್ ಲೈನ್ ಕೇಂದ್ರಕ್ಕೆ ಮಾಹಿತಿ ನೀಡುತ್ತಾರೆ. ಈ ಚೈಲ್ಡ್‌ಲೈನ್ ಸಂಕಷ್ಟದಲ್ಲಿರುವ ಹಾಗೂ ಪೋಷಣೆ-ರಕ್ಷಣೆಯ ಅಗತ್ಯವಿರುವ ಮಕ್ಕಳಿಗೆ ದಿನದ 24 ತಾಸು ಉಚಿತ ಮತ್ತು ತುರ್ತು ಸೇವೆ ನೀಡಲಿದೆ. ಸಂಕಷ್ಟದಲ್ಲಿರುವ ಮಕ್ಕಳು, ಸಾರ್ವಜನಿಕರು ಯಾರೇ ಕರೆ ಮಾಡಿದರೂ ಒಂದು ತಾಸಿನೊಳಗೆ ತೊಂದರೆಯಲ್ಲಿರುವ ಮಕ್ಕಳನ್ನು ರಕ್ಷಣೆ ಮಾಡಲಾಗುತ್ತದೆ. ಈ ಯೋಜನೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯ ಹಾಗೂ ರಾಜ್ಯ ಸರ್ಕಾರ , ಸರ್ಕಾರೇತರ ಸಂಸ್ಥೆ, ಬೆಂಬಲಿತ ವ್ಯವಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತದೆ.

ಐವರು ಮಕ್ಕಳ ರಕ್ಷಣೆ: ಚೈಲ್ಡ್‌ಲೈನ್ ಘಟಕ ಆರಂಭವಾಗಿ ಎರಡು ತಿಂಗಳಾಗಿದ್ದು, ಏಪ್ರಿಲ್ ತಿಂಗಳಲ್ಲಿ ಐವರು ಮಕ್ಕಳ ರಕ್ಷಣೆ ಮಾಡಲಾಗಿದೆ. ಉದ್ಯಾವರದಲ್ಲಿ ಸಿಕ್ಕಿದ ಇಬ್ಬರು ಬಾಲಕರು ಬಾಲನಿಕೇತನದಲ್ಲಿ ವಸತಿ ಪಡೆದಿದ್ದಾರೆ ಎಂದು ಚೈಲ್ಡ್‌ಲೈನ್ ಕೇಂದ್ರದ ಸಂಯೋಜಕ ಅರವಿಂದ್ ತಿಳಿಸಿದ್ದಾರೆ. ಚೈಲ್ಡ್‌ಲೈನ್ ಕೇಂದ್ರದಲ್ಲಿ ಒಬ್ಬ ನಿರ್ದೇಶಕ, ಒಬ್ಬ ಕೌನ್ಸಿಲರ್ ಮತ್ತು ಒಬ್ಬ ಸ್ವಯಂ ಸೇವಕರಿದ್ದಾರೆ. ಉಳಿದಂತೆ, 6 ಮಂದಿ ತಂಡದ ಸದಸ್ಯರಿದ್ದಾರೆ. 2018-19ನೇ ಸಾಲಿನಲ್ಲಿ ಮಂಜೂರಾದ ಈ ಕೇಂದ್ರವು ದಿನದ 24 ತಾಸು ಹಗಲು ರಾತ್ರಿ ಕಾರ್ಯನಿರ್ವಹಿಸುತ್ತದೆ. ಅಗತ್ಯವಿರುವ ಮಕ್ಕಳಿಗೆ ಕೌನ್ಸಿಲಿಂಗ್ ನೀಡಲಾಗುತ್ತದೆ. ಮೂಲ ಸೌಕರ್ಯ ಒದಗಿಸಲಾಗಿದೆ ಎಂದು ಕೇಂದ್ರದ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ ಮಾಹಿತಿ ನೀಡಿದ್ದಾರೆ.