ಕಂದನ ಅಳುವಿಗೆ ಮಿಡಿದ ಮನ; ಮಗುವಿನ ಅಮ್ಮನ ಬದಲಿಗೆ ಚುನಾವಣಾ ಕರ್ತವ್ಯಕ್ಕೆ ಹಾಜರಾದ ಸ್ನೇಹಿತೆ

ಚಿಕ್ಕಮಗಳೂರು: ಕಷ್ಟ ಕಾಲದಲ್ಲಿ ಕೆಲವೊಮ್ಮೆ ಸಂಬಂಧಿಗಳೇ ಹಿಂದೆ ಸರಿಯುವುದುಂಟು. ಆದರೆ ಸ್ನೇಹಿತರು ಮಾತ್ರ ಎಂಥದ್ದೇ ಸಂದರ್ಭ ಬಂದರೂ ಹೆಗಲು ಕೊಡುತ್ತಾರೆ ಎನ್ನುವುದಕ್ಕೆ ಮತ್ತೊಂದು ನಿದರ್ಶನ ಚಿಕ್ಕಮಗಳೂರಲ್ಲಿ ನಡೆದಿದೆ.

ಒಂದೆಡೆ ಚುನಾವಣಾ ಕರ್ತವ್ಯಕ್ಕೆ ಹಾಜರಾಗುವ ಅನಿವಾರ್ಯತೆ, ಮತ್ತೊಂದೆಡೆ ಅಮ್ಮನನ್ನು ಬಿಟ್ಟಿರದ ಅಳುವ ಮಗುವನ್ನು ಸಂತೈಸುವ ಅಸಹಾಯಕತೆ. ಇಂತಹ ಸಂದರ್ಭ ನೆರವಿಗೆ ಬಂದದ್ದು ಸ್ನೇಹಿತೆ ಎಂಬುದು ವಿಶೇಷ.

ನಗರದ ಐಡಿಎಸ್​ಜಿ ಕಾಲೇಜಿನಲ್ಲಿ ಬುಧವಾರ ಮಸ್ಟರಿಂಗ್ ಕಾರ್ಯ ನಡೆಯುತ್ತಿತ್ತು. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಕರ್ತವ್ಯಕ್ಕೆ ನಿಯುಕ್ತಿಗೊಂಡಿದ್ದ ಸಿಬ್ಬಂದಿ ಶಿಲ್ಪಾ ಅವರಿಗೆ ಮನೆಯಿಂದಲೇ ಮಗು ಪ್ರೀತಂ ಕೈಬಿಡದೆ ಸತಾಯಿಸುತ್ತಿದ್ದ. ಹೀಗಾಗಿ ಮಸ್ಟರಿಂಗ್ ಕಾರ್ಯದಲ್ಲಿ ಸಂತೈಸಿದರಾಯಿತು ಎಂದುಕೊಂಡು ಮಸ್ಟರಿಂಗ್ ನಡೆಯುತ್ತಿದ್ದ ಐಡಿಎಸ್​ಜಿ ಕಾಲೇಜಿಗೆ ಶಿಲ್ಪಾ ತಮ್ಮ ತಾಯಿಯನ್ನು ಕರೆತಂದಿದ್ದರು. ಮಗುವನ್ನು ತನ್ನ ತಾಯಿ ಮಡಿಲಿಗೆ ಬಿಟ್ಟು ಅವರು ಕರ್ತವ್ಯದ ಕಡೆಗೆ ತೆರಳಿದರು.

ತಾಯಿ ತನ್ನನ್ನು ಬಿಟ್ಟು ಕೊಠಡಿ ಒಳಹೋಗುತ್ತಿದ್ದಂತೆ ಅಜ್ಜಿ ಜತೆಗಿದ್ದ ಮಗು ಪಕ್ಕದ ಕಿಟಕಿಯ ಸರಳುಗಳನ್ನು ಗಟ್ಟಿಯಾಗಿ ಹಿಡಿದು ಅಳತೊಡಗಿತು. ಚೀರಾಡುತ್ತಲೇ ಇದ್ದ ಮಗು ಅಮ್ಮನ ಬಳಿಗೆ ತೆರಳಲು ಆತುರಪಡುತ್ತಿತ್ತು.

ಇದನ್ನು ಗಮನಿಸಿದ ಸೆಕ್ಟರ್ ಅಧಿಕಾರಿ ಮಲ್ಲಿಕಾರ್ಜುನ್ ಬದಲಿ ವ್ಯವಸ್ಥೆ ಮಾಡಿಕೊಳ್ಳಲು ಮೇಲಧಿಕಾರಿ ಬಳಿ ತೆರಳುತ್ತಿದ್ದಾಗ ಎದುರಾಗಿದ್ದು ಶಿಲ್ಪಾರ ಸ್ನೇಹಿತೆ ಮತ್ತೊಬ್ಬರು ಶಿಲ್ಪಾ. ಹಾಲುಗಲ್ಲದ ಹಸುಳೆಯ ಗೋಳಾಟ ಕಂಡು ಕರುಳು ಅವರಿಗೆ ಚುರುಕ್ ಎನಿಸಿರಬೇಕು. ನಿಮ್ಮ ಬದಲಾಗಿ ನಾನೇ ಕಾರ್ಯ ನಿರ್ವಹಿಸುವುದಾಗಿ ಹೇಳಿ ಮಗುವಿನ ಅಮ್ಮ ಶಿಲ್ಪಾ ಮನೆಗೆ ತೆರಳಲು ಅವಕಾಶ ಮಾಡಿಕೊಟ್ಟು ಮಾನವೀಯತೆ ಮೆರೆದರು.

ಬಳಿಕ ಶಿಲ್ಪಾ ಕರ್ತವ್ಯದಿಂದ ಬಿಡುಗಡೆಯಾಗಿ ಮಗು ಪ್ರೀತಂ, ಅಜ್ಜಿ ಲಲಿತಮ್ಮ ಜತೆ ನಿರ್ಗಮಿಸಿದರು.