ಕುಶಾಲನಗರ: ಚೆಸ್ ಆಟದಲ್ಲಿ ಎರಡು ಬಾರಿ ಇಂಡಿಯಾ ರೆಕಾರ್ಡ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ ಆಗಿರುವ ಕುಶಾಲನಗರ ಪಟ್ಟಣದ ಕೆ.ಎಸ್.ಚಿನ್ಮಿತ್ ಎಂಬ ಬಾಲ ಪ್ರತಿಭೆಯನ್ನು ಕುಶಾಲನಗರದಲ್ಲಿ ಆದಿ ಚುಂಚನಗಿರಿ ಮಠಾಧ್ಯಕ್ಷ ಶ್ರೀ ನಿರ್ಮಲಾನಂದ ಸ್ವಾಮೀಜಿ ಸನ್ಮಾನಿಸಿ ಅಭಿನಂದಿಸಿದರು.

ಕುಶಾಲನಗರದಲ್ಲಿ ಮಂಗಳವಾರ ಆರಂಭಗೊಂಡ ಜಿಲ್ಲಾ ಗೌಡ ಯುವ ವೇದಿಕೆಯ ವತಿಯಿಂದ ಪಿ.ಎಂ.ಶ್ರೀ ಶಾಲಾ ಮೈದಾನದಲ್ಲಿ ಆರಂಭಗೊಂಡ ರಾಜ್ಯಮಟ್ಟದ ಕಬಡ್ಡಿ ಟೂರ್ನಿಯ ಆರಂಭೋತ್ಸವದಲ್ಲಿ ಬಾಲ ಪ್ರತಿಭೆ ಚಿನ್ಮಿತ್‌ಗೆ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಬಾಲ ಪ್ರತಿಭೆಯ ಸಾಧನೆಯ ಬಗ್ಗೆ ಸ್ವಾಮೀಜಿ ಶ್ಲಾಘಿಸಿದರು.
ಬಾಲ ಪ್ರತಿಭೆ ಚಿನ್ಮಿತ್‌ನ ಸಾಧನೆಯು ಕೊಡಗು ಜಿಲ್ಲೆಗೆ ಮಾತ್ರವಲ್ಲದೇ ರಾಜ್ಯಕ್ಕೆ ಮಾದರಿಯಾದುದು. ಎಳೆಯ ಮಕ್ಕಳಲ್ಲಿ ಇಂತಹ ಕ್ರೀಡಾ ಪ್ರೋತ್ಸಾಹ ನೀಡಿದರೆ ಮಕ್ಕಳು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ರೀತಿಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದರು.
ಈ ಪ್ರತಿಭೆಗೆ ಪ್ರೋತ್ಸಾಹ ನೀಡಿದ ಪೋಷಕರಿಗೆ ಸ್ವಾಮೀಜಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಂಭುನಾಥ ಸ್ವಾಮೀಜಿ, ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ, ಮಾಜಿ ಸಚಿವ ಎಂ.ಪಿ.ಅಪ್ಪಚ್ಚುರಂಜನ್, ಶಾಸಕ ಡಾ.ಮಂತರ್ ಗೌಡ, ಜಿಲ್ಲಾ ಗೌಡ ಯುವ ವೇದಿಕೆಯ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ, ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ಸೇರಿದಂತೆ ಬಾಲ ಕ್ರೀಡಾ ಪ್ರತಿಭೆಯ ಪೋಷಕರಾದ ವಕೀಲ ಕೆ.ಪಿ.ಶರತ್ ಮತ್ತು ಚಂದ್ರಕಲಾ ಹಾಗೂ ಅಜ್ಜಿಯಾದ ಪದ್ಮ ಪುರುಷೋತ್ತಮ್ ಇದ್ದರು.