ಸುಖಕ್ಕೆ ಗ್ಯಾರಂಟಿ ವಾರಂಟಿ ಎರಡೂ ಇಲ್ಲ!

ನನಗೆ ಉಪ್ಪಿಟ್ಟು ಸೇರಲ್ಲ ಇಡ್ಲಿ ಮಾಡ್ಕೊಡá-. -ಆಯ್ತು ಪುಟ್ಟ.

ಈ ಸ್ಕೂಲ್ ಬ್ಯಾಗು ತುಂಬ ಭಾರ. ಎತ್ತಿಕೊಂಡು ಹೋಗಕ್ಕೆ ಆಗಲ್ಲ.-ಪರವಾಗಿಲ್ಲ ನನ್ನ ಕೈಯಲ್ಲಿ ಕೊಡು ಮಗು.

ಸ್ಕೂಲಿಗೆ ಲೇಟ್ ಆಗೋಯ್ತು, ಬೇಗ ಯೂನಿಫಾಮ್ರ್ ಇಸ್ತ್ರಿ ಮಾಡಿ ಕೊಡು.-ಸರಿ ಈಗಲೇ ಬಂದೆ. ಮಾಡಿಕೊಡ್ತೀನಿ.

ಇವತ್ತು ತುಂಬ ಹೋಂ ವರ್ಕ್​ಇದೆ. ನನ್ನ ಹತ್ತಿರ ಇದನ್ನು ಮುಗಿಸೋಕೆ ಸಾಧ್ಯವೇ ಇಲ್ಲ.-ಯೋಚನೆ ಮಾಡಬೇಡ ನಾನು ಸ್ವಲ್ಪ ಮಾಡಿಕೊಡ್ತೀನಿ.

‘ಸ್ಕೂಲ್ ವ್ಯಾನಿನಲಿ ್ಲೋಗಲ್ಲ. ಡ್ರಾಪ್ ಮಾಡಿ’, ‘ಬೋರ್ ಆಗ್ತಾ ಇದೆ, ನೀನು ಫ್ರೆಂಡ್ ಜೊತೆ ಮಾತಾಡಿದ್ದು ಸಾಕು. ತಕ್ಷಣ ಮನೆಗೆ ಹೋಗೋಣ’…ಹೀಗೆ ಸಾಲು ಸಾಲು ಸಂವಾದಗಳು ಮನೆಮನೆಯಲ್ಲೂ ಕಿವಿಗೆ ಬೀಳುತ್ತಿವೆ. ಇತ್ತೀಚೆಗೆ ಅಪ್ಪ-ಅಮ್ಮಂದಿರು ತಥಾಸ್ತು ದೇವತೆಗಳಂತೆ ಆಗುತ್ತಿದ್ದಾರೆ. ‘ನಾವು ಪಟ್ಟ ಕಷ್ಟವನ್ನು ಮಕ್ಕಳು ಪಡಬಾರದು. ಅವರು ಸುಖವಾಗಿ ಬೆಳೆಯಲಿ. ನಮ್ಮ ಹತ್ತಿರ ಆಗುವಷ್ಟು ಅನುಕೂಲ ಒದಗಿಸೋಣ’ ಇತ್ಯಾದಿ ಭಾವನೆಗಳಿಂದ ಪಾಲಕರು ಸಾಮರ್ಥ್ಯ ಮೀರಿ ಮಕ್ಕಳಿಗೆ ಸುಖವಾದ (ಸೋಮಾರಿತನ, ನಿಷ್ಪ್ರಯೋಜಕ ಮತ್ತು ಭ್ರಮೆಯಿಂದ ತುಂಬಿದ) ಬದುಕನ್ನು ಕೊಡಲು ಪ್ರಯತ್ನಿಸುತ್ತಾರೆ.

ಒಮ್ಮೆ ಯೋಚಿಸಿ. ಮಕ್ಕಳ ಮನಸ್ಸಿನಲ್ಲಿ ಇದರಿಂದ ಎಂತಹ ಭಾವನೆಗಳು ಉತ್ಪನ್ನಗೊಳ್ಳುತ್ತವೆ, ಅವರು ಜೀವನವನ್ನು ನೋಡುವ ರೀತಿ, ಕಷ್ಟಗಳನ್ನು ಎದುರಿಸುವ ಪರಿ, ಹೊಸ ಸಂದರ್ಭಗಳನ್ನು ಸ್ವೀಕರಿಸುವ ಸಾಮರ್ಥ್ಯಗಳ ಮೇಲೆ ಎಂತಹ ದುಷ್ಪರಿಣಾಮ ಬೀರುತ್ತದೆ? ಏನೇ ಕಷ್ಟ ಬಂದರೂ ಪರಿಹರಿಸಲು ‘ನಾನೇನೂ ಕಷ್ಟಪಡಬೇಕಾಗಿಲ್ಲ, ಹೇಗೋ ಅಪ್ಪನೋ ಅಮ್ಮನೋ ನೋಡಿಕೊಳ್ಳುತ್ತಾರೆ’ ಇತ್ಯಾದಿ ಭ್ರಮೆ ತುಂಬಿಕೊಳ್ಳುತ್ತದೆ. ಬದುಕು ಆಕಸ್ಮಿಕ, ಬದಲಾವಣೆ ವಿಶ್ವದ ನಿಯಮ. ಈ ಬದಲಾವಣೆ ಯಾವಾಗಲೂ ಸಕಾರಾತ್ಮಕವಾಗಿಯೇ ಇರುವುದಿಲ್ಲ. ಸುಖ-ದುಃಖ ಎರಡೂ ಇದ್ದೇ ಇರುತ್ತವೆ. ಇವನ್ನು ಸಮನಾಗಿ ಸ್ವೀಕರಿಸುವ ಮತ್ತು ಎಂತಹ ಸಂದರ್ಭದಲ್ಲಿಯೂ ಎದೆಗುಂದದೆ ಎದುರಿಸಿ ಮುನ್ನಡೆಯುವ ತಾಕತ್ತನ್ನು ಮಕ್ಕಳಿಗೆ ನೀಡಿದಲ್ಲಿ ಅದು ನಿಜವಾದ ಶಿಕ್ಷಣ. ಆ ಅಪ್ಪ ಅಮ್ಮ ಇಬ್ಬರೂ ಪ್ರಸಿದ್ಧ ವೈದ್ಯರು. ಮಗಳು ಕೂಡ ವೈದ್ಯಕೀಯ ಶಿಕ್ಷಣ ಪ್ರಾರಂಭಿಸಿದಳು. ಮೊದಲನೆಯ ಪರೀಕ್ಷೆ ಫಲಿತಾಂಶ ಬಂದಾಗ ಪಾಸಾಗಲು ಒಂದೇ ಅಂಕ ಕಮ್ಮಿ ಇತ್ತು. ಅಷ್ಟೊಂದು ಮುಖ್ಯವಲ್ಲದ ಒಂದು ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ಅವಮಾನ ತಡೆದುಕೊಳ್ಳಲಾಗದೆ ಕಾಲೇಜಿಗೆ ಹೋಗುವುದಿಲ್ಲ ಎಂದು ಮನೆಯಲ್ಲಿ ಕುಳಿತುಬಿಟ್ಟಳು. ಇತ್ತೀಚೆಗಂತೂ ಶಾಲೆಗೆ ಹೋಗುವುದಿಲ್ಲ ಎಂದು ಮನೆಯಲ್ಲಿ ಕೂರುವವರು ಹೆಚ್ಚುತ್ತಲೇ ಇದ್ದಾರೆ. ವಿದ್ಯಾಭ್ಯಾಸ, ಸಂಪತ್ತು, ಉತ್ತಮ ಸಹವಾಸ ಹೀಗೆ ಹೊರಗಿನಿಂದ ಸಿಗಬಹುದಾದ ಎಲ್ಲ ಸೌಲಭ್ಯ ಸಿಕ್ಕಿದರೂ ತಾವು ಬೆಳೆಸಿಕೊಳ್ಳಲಾಗದ ಕಷ್ಟ ಸಹಿಷ್ಣುತೆಯಿಂದಾಗಿ ಇಂತಹ ನಿರ್ಧಾರಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಿದೆ.

ಒತ್ತಡ ಸಹಿಸಿಕೊಳ್ಳಲಾಗದೆ ಕೆಲಸ ಬಿಡುವವರು, ವೈವಾಹಿಕ ಸಂಬಂಧ ಕಡಿದುಕೊಳ್ಳುವವರು, ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸುವವರು, ಮಾನಸಿಕವಾಗಿ ಓಡಿ ಹೋಗುವ ಪ್ರವೃತ್ತಿಯವರು, ಜೀವನ ಅಂತ್ಯಗೊಳಿಸಿ ಕೊಳ್ಳುವವರು ನಮ್ಮ ಸುತ್ತಲೂ ಕಾಣಿಸುತ್ತಲೇ ಇರುತ್ತಾರೆ. ನಮ್ಮ ಜೀವನದ ಯಾವುದೇ ಪರಿಸ್ಥಿತಿಯನ್ನು ಅನುಭವಿಸಿದವರಲ್ಲಿ ನಾವು ಮೊದಲನೆಯವರೂ ಅಲ್ಲ, ಕೊನೆಯವರೂ ಅಲ್ಲ. ತಲೆತಲಾಂತರದಿಂದ ಇಂತಹ ಸಮಸ್ಯೆಯನ್ನು ಕೋಟ್ಯಂತರ ಜನ ಅನುಭವಿಸಿ ಎದುರಿಸಿ ಮುನ್ನಡೆದು ಹೋಗಿದ್ದಾರೆ.

ಉದಾಹರಣೆಗೆ ಅದೇ ವೈದ್ಯಕೀಯ ವಿದ್ಯಾರ್ಥಿನಿಯ ಓದಿದ ಸಿಲೆಬಸ್​ಅನ್ನು ಈಗಾಗಲೇ ಲಕ್ಷಾಂತರ ಜನ ಅದೇ ರೀತಿಯ ಒತ್ತಡ ಅನುಭವಿಸಿಕೊಂಡು ಮುಂದೆ ಹೋಗಿರುತ್ತಾರೆ. ಅವಳು ಓದುವ ಸಿಲೆಬಸ್​ನ ಒತ್ತಡವನ್ನು ಅವಳ ಸಹಪಾಠಿಗಳು ಹಾಗೂ ದೇಶದ ಲಕ್ಷಾಂತರ ವಿದ್ಯಾರ್ಥಿಗಳು ಅನುಭವಿಸುತ್ತಿರುತ್ತಾರೆ. ಇನ್ನೂ ಅನೇಕ ವರ್ಷಗಳ ನಂತರವೂ ಇದೇ ರೀತಿಯ ಅಭ್ಯಾಸ ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ. ಹಾಗಾಗಿ ನಾನೊಬ್ಬನೇ ಕಷ್ಟದಲ್ಲಿ ಇರುವುದು, ನನಗೊಬ್ಬನಿಗೆ ಎಲ್ಲ ಸಂಕಷ್ಟಗಳು ಬಂದಾಗಿವೆ ಎನ್ನುವ ಭ್ರಮೆ ಎಂದಿಗೂ ಹೊಂದಬಾರದು.

ಪ್ರಾರಂಭದಲ್ಲಿ ಹೇಳಿದ ಎಲ್ಲ ಉದಾಹರಣೆಗಳಲ್ಲಿ ಸಮಯ ಪಾಲನೆ, ಶಿಸ್ತು, ಒತ್ತಡದ ಸಂದರ್ಭಗಳಲ್ಲಿ ಕಾರ್ಯನಿರ್ವಹಣೆ ಮಾಡುವ ರೀತಿ, ಬೇರೆಯವರು ಸಹಕಾರ ನೀಡದಿದ್ದಾಗ ಅನಿವಾರ್ಯವಾಗಿ ತಮ್ಮ ಸಾಮರ್ಥ್ಯದಿಂದಲೇ ನಿರ್ವಹಣೆ ಮಾಡುವ ಕಾರ್ಯಕ್ಷಮತೆ ಹೆಚ್ಚುತ್ತದೆ. ಇವು, ಯಾವುದೇ ವ್ಯಕ್ತಿಯ ಬದುಕು ಯಶಸ್ವಿಯಾಗಬೇಕೆಂದರೆ ಮೂಲಭೂತ ಮಾನಸಿಕ ಅಗತ್ಯಗಳು. ಬಾಲ್ಯದಿಂದಲೇ ಸುರಕ್ಷಿತ ವಾತಾವರಣದಲ್ಲಿ, ನಿಜವಾದ ಪ್ರೀತಿ ತುಂಬಿದ ಕಾಳಜಿಯಲ್ಲಿ ಇಂತಹ ಸಾಮರ್ಥ್ಯ ಗಳಿಸಿಕೊಳ್ಳುವುದು ಸುಲಭ. ಅಪ್ಪ-ಅಮ್ಮ ಕೊಡುವ ತಾತ್ಕಾಲಿಕ ಸುಖಗಳು ಶಾಶ್ವತವಲ್ಲ. ಮಕ್ಕಳನ್ನು ನಿಜವಾಗಿಯೂ ಪ್ರೀತಿಸುವ ತಾಯಿ-ತಂದೆಯರು ಸುಖ ಮತ್ತು ಯಶಸ್ಸು ಗಳಿಸುವ ದಾರಿಯನ್ನು ತೋರಿಸಿಕೊಡಿ. ಅದೇ ಕಷ್ಟಸಹಿಷ್ಣುತೆ.

ಪರಿಹಾರ ಮಾರ್ಗಗಳು

  • ಮಕ್ಕಳ ಎಲ್ಲ ಅಗತ್ಯಗಳನ್ನು ಪೂರೈಕೆ ಮಾಡಬೇಡಿ. ಕೌಶಲ ಕಲಿಯಲಿಕ್ಕೆ ಇರುವ ಮಾರ್ಗವೆಂದರೆ ಅನಿವಾರ್ಯತೆ ಮತ್ತು ಅಗತ್ಯ. ಆಗಲೇ ಕೌಶಲ, ಸಾಮರ್ಥ್ಯಗಳು ತಾನಾಗಿಯೇ ಹೆಚ್ಚುತ್ತವೆ. ಅಂತಹ ಅವಕಾಶಗಳು ಮಕ್ಕಳಿಗೆ ಸಿಗಬೇಕು, ಅವರೇ ಪ್ರಯತ್ನ ಮಾಡಬೇಕು.
  • ಅವರ ಎಲ್ಲ ಕಷ್ಟಗಳನ್ನು ನಿವಾರಿಸಬೇಡಿ. ಕಷ್ಟ-ಸುಖ ಬದುಕಿನ ಅವಿಭಾಜ್ಯ ಅಂಗ. ಕೆಲವೊಮ್ಮೆ ಅವರು ಕಷ್ಟಕ್ಕೆ ಸಿಲುಕಿ ಹಾಕಿಕೊಳ್ಳುತ್ತಿದ್ದಾರೆ ಎಂದು ಗೊತ್ತಿದ್ದರೂ ಒಳಗೊಳ್ಳಲು ಬಿಡಿ. ಉದಾ: ಹೋಂ ವರ್ಕ್ ಮುಗಿಸದೆ ಶಾಲೆಗೆ ಹೋದಾಗ ಆಗುವ ಅವಮಾನಗಳನ್ನು ಎದುರಿಸಲಿ. ಏಕೆಂದರೆ ಇಂತಹ ಅವಮಾನ ಬದುಕಿನಲ್ಲಿ ಸಹಜ.
  • ಸಮಸ್ಯೆ ನಿವಾರಿಸುವ ಕೌಶಲ ಹೆಚ್ಚಿಸಿ. ಪ್ರತಿ ಹೆಜ್ಜೆಯನ್ನು ನಿರ್ದೇಶಿಸುವುದಕ್ಕೂ ಮಾರ್ಗದರ್ಶನ ಮಾಡುವುದಕ್ಕೂ ಬಹಳ ವ್ಯತ್ಯಾಸವಿದೆ. ಮಾರ್ಗದರ್ಶನದಲ್ಲಿ ಅವರ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಹೆಚ್ಚಿನ ಅವಕಾಶವಿರುತ್ತದೆ, ನಿರ್ದೇಶನವೆಂದರೆ ಹೇಳಿದಷ್ಟೇ ಮಾಡಬೇಕಾಗಿರುತ್ತದೆ.
  • ಹೇಗೆ’ ಎನ್ನುವುದಕ್ಕೆ ಒತ್ತು ಕೊಡಿ, ‘ಯಾಕೆ’ ಎನ್ನುವುದಕ್ಕಲ್ಲ. ಮಳೆಯಲ್ಲಿ ನೆನೆದು ಬಂದ ಮಗುವನ್ನು ಯಾಕೆ ನೆನೆದು ಬಂದೆ ಎಂದು ಕೇಳುವುದಕ್ಕಿಂತ ಹೇಗೆ ನೆನೆಯದೇ ಬರಬಹುದಾಗಿತ್ತು ಎಂದು ತಿಳಿಸುವುದರಿಂದ ಮಕ್ಕಳ ಮನಸ್ಸು ಪರಿಹಾರ ಮಾರ್ಗವನ್ನು ಹುಡುಕುತ್ತದೆ.
  • ಕಷ್ಟಸಹಿಷ್ಣುತೆಯ ಚಟುವಟಿಕೆ ಮಾಡಿ. ಉದಾಹರಣೆಗೆ ಅವರ ಸಾಮರ್ಥ್ಯಕ್ಕಿಂತ ಹೆಚ್ಚಿನ ಎತ್ತರದ ಬೆಟ್ಟ, ಮಾರ್ಗವನ್ನು ಕ್ರಮಿಸಲು ಕರೆದೊಯ್ಯಿರಿ. ಆಯಾಸ ಗೊಂಡರೂ ಹೆಚ್ಚು ಸಹಾಯಹಸ್ತ ನೀಡದೆ, ಸ್ವಸಾಮರ್ಥ್ಯದಿಂದಲೇ ಹಿಂತಿರುಗಿ ಬರಬೇಕು.

Leave a Reply

Your email address will not be published. Required fields are marked *