ಐದು ವರ್ಷದ ಮಗಳಿಗೆ ರಕ್ತ ಕ್ಯಾನ್ಸರ್ ಆಗಿದೆ ಎಂದು ಕಂಗೆಟ್ಟಿದ್ದ ಪೋಷಕರು ಚಿಕಿತ್ಸೆಗಾಗಿ ಸಂಪರ್ಕಿಸಿದ್ದರು. ಎರಡು ವರ್ಷ ಅನೇಕ ಏಳುಬೀಳುಗಳಿದ್ದರೂ ಧೃತಿಗೆಡದೆ ಸೂಕ್ತವಾಗಿ ನಿರ್ವಹಿಸಿ ಮಗುವಿಗೆ ಪುನರ್ಜನ್ಮ ಕೊಟ್ಟರು. ಮಗುವಿಗೆ ಕಿಮೋಥೆರಪಿ ಕೊಡುವಾಗಲೆಲ್ಲ ‘ಉನ್ನತಿ’ಯ ಸಂಪರ್ಕದಲ್ಲಿದ್ದು, ತಮ್ಮ ಮನಸ್ಥಿತಿಯನ್ನು ನಿರ್ವಹಿಸಿಕೊಳ್ಳುತ್ತಾ, ಮಗುವಿಗೆ ಸೂಕ್ತ ಹೀಲಿಂಗ್ ಮತ್ತು ಮಾರ್ಗದರ್ಶನ ಕೊಡುತ್ತಾ ಆಧುನಿಕ ವೈದ್ಯಪದ್ಧತಿಯ ಜತೆಯಲ್ಲಿ ಚಿಕಿತ್ಸೆ ಅಳವಡಿಸಿಕೊಳ್ಳಲು ಸಾಧ್ಯವಾಯಿತು. ಏಕೆಂದರೆ ಚಿಕಿತ್ಸೆ ಎಲ್ಲಾ ಆಯಾಮಗಳಲ್ಲಿಯೂ ದೊರೆಯಬೇಕಾಗುತ್ತದೆ.
ಮಕ್ಕಳಲ್ಲಿ ಅನಾರೋಗ್ಯದ ಸಮಸ್ಯೆ ಸಹಜವೇ. ಆಗ ಇಡೀ ಮನೆಯ ವಾತಾವರಣವೇ ವ್ಯತ್ಯಾಸವಾಗಿ ಬಿಡುತ್ತದೆ. ಇದರ ಪ್ರಭಾವ ಮನೆಯಲ್ಲಿನ ಹಿರಿಯರ ಮೇಲೆಯೂ ಬೀರುತ್ತದೆ. ಮನೆಯ ಹಿರಿಯರ ಮನಸ್ಸು, ನಡವಳಿಕೆಗಳಿಂದಾಗಿ ಮಕ್ಕಳ ಮೇಲೆ ಅದರ ಪರಿಣಾಮ ಇನ್ನೂ ಹೆಚ್ಚಾಗುತ್ತದೆ. ಇದೊಂದು ವಿಷವೃತ್ತ ಇದ್ದಹಾಗೆ. ಮನೆಯಲ್ಲಿನ ಹಿರಿಯರ ಮಾತು, ಮನಸ್ಸು, ನಡವಳಿಕೆಗೆ ಅನುಗುಣವಾಗಿ ಮಕ್ಕಳ ಮನಸ್ಸಿನಲ್ಲಿಯೂ ಬದಲಾವಣೆ ಆಗುತ್ತದೆ. ತನಗೆ ಬಂದ ಕಾಯಿಲೆಯ ಪ್ರಮಾಣ ಎಂಥದು ಎನ್ನುವ ನಿರ್ಧಾರಗಳು ಮಕ್ಕಳ ಮನಸ್ಸಿನಲ್ಲಿ ಬೆಳೆಯುತ್ತವೆ. ಈ ನಿರ್ಧಾರಕ್ಕೆ ಅನುಗುಣವಾಗಿ ಅವರು ಜೀವನವನ್ನು ಸ್ವೀಕರಿಸುವ ರೀತಿ, ಸಮಸ್ಯೆ ಬಂದಾಗ ಎದುರಿಸುವ ರೀತಿ ಅವಲಂಬಿತವಾಗುತ್ತದೆ. ಸುತ್ತಮುತ್ತ ಗಮನಿಸಿ ನೋಡಿದಾಗ ಸಣ್ಣಪುಟ್ಟ ಸಮಸ್ಯೆಗೆ ದೊಡ್ಡದಾಗಿ ಚಿಂತಿಸಿ ಕೊರಗುವ ಪೋಷಕರು, ದೊಡ್ಡ ಸಮಸ್ಯೆಯನ್ನು ಚಿಕ್ಕದಾಗಿ ನೋಡುವ ಪೋಷಕರು, ಅತಿಯಾಗಿ ಕಾಳಜಿ ಮಾಡುವವರು, ನಿರ್ಲಕ್ಷ ಮಾಡುವವರು ಎಲ್ಲ ತರದವರು ಕಂಡೇ ಕಾಣುತ್ತಾರೆ. ಇದೆಲ್ಲ ಪೋಷಕರ ಸ್ವಭಾವವನ್ನು ತೋರಿಸುತ್ತದೆಯೇ ಹೊರತು ಅನಾರೋಗ್ಯದಲ್ಲಿರುವ ಮಕ್ಕಳಿಗೆ ಹೆಚ್ಚಿನ ಉಪಯೋಗ ಆಗಲಿಕ್ಕಿಲ್ಲ.
ಕಾಯಿಲೆಯಿಂದ ಆರೋಗ್ಯದ ಕಡೆ ನಡೆಯುವಾಗ ನಾಲ್ಕು ವಿಭಾಗ ಮಾಡಿಕೊಳ್ಳುವುದು ಉತ್ತಮ. ಚಿಕಿತ್ಸೆ , ಪಥ್ಯ, ಆರೈಕೆ ಮತ್ತು ಅಂತಃಶಕ್ತಿ.
ಚಿಕಿತ್ಸೆ: ಕಾಯಿಲೆಯ ಸ್ವರೂಪ ಮತ್ತು ತೀವ್ರತೆಗೆ ಅನುಗುಣವಾಗಿ ಸೂಕ್ತ ವೈದ್ಯ ಪದ್ಧತಿಯನ್ನು ಹಾಗೂ ವೈದ್ಯರನ್ನು ಆಯ್ಕೆ ಮಾಡಿಕೊಳ್ಳಿ. ನಂತರ ವೈದ್ಯರ ಮಾರ್ಗದರ್ಶನವನ್ನು ಚಾಚೂ ತಪ್ಪದೆ ಅನುಸರಿಸಿ. ವೈದ್ಯರ ಬಗ್ಗೆ ನಕಾರಾತ್ಮಕ ಸಂವಾದವನ್ನು ಯಾವುದೇ ಕಾರಣಕ್ಕೂ ಮಕ್ಕಳ ಎದುರಿನಲ್ಲಿ ಮಾಡಬೇಡಿ. ನಿಮಗೆ ವೈದ್ಯರಲ್ಲಿ ವಿಶ್ವಾಸ ಇಲ್ಲದಿದ್ದಲ್ಲಿ ಅಥವಾ ಇನ್ನೂ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಬೇರೆ ವೈದ್ಯರನ್ನು ಸಂರ್ಪಸಿ ಅಥವಾ ಇನ್ನೊಂದು ಅಭಿಪ್ರಾಯ ತೆಗೆದುಕೊಂಡು ಅದೇ ವೈದ್ಯರ ಜತೆ ಮುಂದುವರೆಯಬೇಕೋ ಬೇಡವೋ ಎಂದು ನಿರ್ಧರಿಸಿ. ಆದರೆ ಯಾವುದೇ ಕಾರಣಕ್ಕೂ ವೈದ್ಯರ ಚಿಕಿತ್ಸೆಯ ಬಗ್ಗೆ ಮಕ್ಕಳ ಎದುರಿನಲ್ಲಿ ಬಯ್ಯುವುದು, ಗೊಣಗುವುದು ಮಾಡಬಾರದು. ಇದರಿಂದ ಮಕ್ಕಳ ಮನಸ್ಸಿನಲ್ಲಿ ತಾವು ತೆಗೆದುಕೊಳ್ಳುವ ಚಿಕಿತ್ಸೆಯ ಬಗ್ಗೆ ಅಪನಂಬಿಕೆ ಉಂಟಾಗುತ್ತದೆ. ಭರವಸೆಯಿಂದ ತುಂಬಿದ ಮನಸ್ಸು ಚಿಕಿತ್ಸೆಗೆ ಸ್ಪಂದಿಸುವಷ್ಟು ತ್ವರಿತವಾಗಿ ಅಪನಂಬಿಕೆಯಲ್ಲಿದ್ದಾಗ, ಅನುಮಾನದಲ್ಲಿ ಇದ್ದಾಗ ಸಾಧ್ಯವಾಗುವುದಿಲ್ಲ. ಹಾಗಾಗಿ ಮಕ್ಕಳ ಎದುರಿನಲ್ಲಿ ಮಾತನಾಡುವಾಗ ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ, ನೀನು ಬೇಗ ಹುಷಾರಾಗುತ್ತಿ, ಆರೋಗ್ಯಚೆನ್ನಾಗಿ ಆಗುತ್ತಿದೆ ಎನ್ನುವ ಸಕಾರಾತ್ಮಕ ಮಾತುಗಳನ್ನು ಪ್ರೇರೇಪಿಸುತ್ತಾ ಹೇಳಿ. ನಿಮ್ಮ ನಡವಳಿಕೆಯಲ್ಲಿಯೂ, ಮನಸ್ಸಿನಲ್ಲಿಯೂ ಇದೇ ಸ್ವಭಾವ ತುಂಬಿಸಿಕೊಳ್ಳಿ.
ಕೆಲವು ಕಾಯಿಲೆಗಳಿಗೆೆ ಚಿಕಿತ್ಸೆ ಇರುತ್ತದೆ ಕೇಲವದಕ್ಕೆ ಇರುವುದಿಲ್ಲ. ವಾಸ್ತವಿಕತೆಯನ್ನು ಒಪ್ಪಿಕೊಳ್ಳುವ ಸಾಮರ್ಥ್ಯ ಮನಸ್ಸಿಗೆ ಬರಬೇಕಾಗುತ್ತದೆ. ಭರವಸೆಯಿಂದ ಆಶ್ಚರ್ಯಕರ ರೀತಿಯಲ್ಲಿ ಆರೋಗ್ಯ ಸಂಪಾದಿಸಿದ ಸಾವಿರಾರು ಉದಾಹರಣೆಗಳು ಸಿಗುತ್ತವೆ.
ಪಥ್ಯ- ಕಾಯಿಲೆಗೆ ಮೂಲ ಕಂಡುಕೊಳ್ಳಿ. ವಾತಾವರಣ, ಆಹಾರ, ವಿಹಾರ,ವಿಚಾರ , ಅಭ್ಯಾಸ, ನಡವಳಿಕೆ, ಮನಸ್ಸು ಹೀಗೆ ಇವುಗಳಲ್ಲಿ ಯಾವುದು ಕಾಯಿಲೆಗೆ ಮೂಲ ಎಂದು ಕಂಡುಕೊಳ್ಳಿ. ಕಾಯಿಲೆಗೆ ಕಾರಣವಾಗುವ ಅಂಶಗಳನ್ನು ದೂರ ಮಾಡುವುದು ಹಾಗೂ ಆರೋಗ್ಯ ವರ್ಧನೆಗೆ ಅಗತ್ಯವಾದ ಅಂಶಗಳನ್ನು ಪಾಲಿಸುವುದು ಪಥ್ಯ ಎನಿಸಿಕೊಳ್ಳುತ್ತದೆ. ಮಕ್ಕಳು ಹಠ ಮಾಡುತ್ತಾರೆ, ನಿಮ್ಮ ಭಾವನೆಗಳಿಗೆ ಧಕ್ಕೆಯಾಗುತ್ತದೆ, ಅಯ್ಯೋ ಪಾಪ ತಿನ್ನಲಿ ಬಿಡು, ಜನ ಏನು ತಿಳಿದುಕೊಳ್ಳುತ್ತಾರೆ ಇತ್ಯಾದಿ ನೆಪಗಳನ್ನು ಒಡ್ಡಿ ಪಥ್ಯವನ್ನು ಎಂದಿಗೂ ಬಿಡಬಾರದು. ಪಥ್ಯವನ್ನು ಸರಿಯಾಗಿ ಆಚರಿಸಿದರೆ ಕಾಯಿಲೆಯ ಮೂಲಕಾರಣ ನಿವಾರಣೆಯಾಗುತ್ತದೆ ಹಾಗೂ ಕಾಯಿಲೆ ಉಲ್ಬಣ ಗೊಳ್ಳದಂತೆ ತಡೆಗಟ್ಟಲು ಸಾಧ್ಯವಾಗುತ್ತದೆ.
ಆರೈಕೆ –ಪ್ರೀತಿ, ಕಾಳಜಿ, ಸಾಂತ್ವನ, ಸಮಾಧಾನ, ಧೈರ್ಯ, ಭರವಸೆ ಇವುಗಳನ್ನು ಕೊಡಬೇಕಾದ ರೀತಿಯಲ್ಲಿ, ಕೊಡಬೇಕಾದ ಸಮಯದಲ್ಲಿ ಕೊಡುವುದು ಮುಖ್ಯ. ಇದು ಕಮ್ಮಿಯಾದಾಗ ಆರೋಗ್ಯ ಪುನಃಸ್ಥಾಪನೆಗೊಳಿಸಿಕೊಳ್ಳಲು ನಿರಾಸಕ್ತಿ ಹೊಂದಬಹುದು. ತನ್ನ ಅಗತ್ಯ ಯಾರಿಗೂ ಇಲ್ಲ ಇತ್ಯಾದಿ ನಿರಾಸೆ, ನಿರಾಸಕ್ತಿ ಮಾನಸಿಕ ಸ್ಥೈರ್ಯ ಕುಗ್ಗಿಸಬಹುದು.
ಅದೇ ರೀತಿ ಕಾಳಜಿ ಅತಿ ಹೆಚ್ಚಾದಾಗ ಕಾಳಜಿಯೆನ್ನುವ ಕಂಫರ್ಟ್ ಜೋನ್ನಿಂದ ಹೊರಬಂದು ಸಹಜ ಜೀವನ ನಡೆಸುವ ಆಸಕ್ತಿ ಬರದೇ ಹೋಗಬಹುದು. ಕಾಯಿಲೆ ಇದ್ದಾಗ ಸಿಗುವ ಎಲ್ಲಾ ಅನುಕೂಲಗಳನ್ನು ಗಮನಿಸಿದಾಗ ಕಾಯಿಲೆಯ ಸ್ಥಿತಿಯೇ ಹೆಚ್ಚು ಅನುಕೂಲಕರ ಎನ್ನುವ ಭ್ರಾಂತ ಸ್ಥಿತಿಗೆ ಮಕ್ಕಳು ಜಾರಬಹುದು. ಹಾಗಾಗಿ ಆರೈಕೆ ಹಿತಮಿತವಾಗಿರಬೇಕು. ಕಾಳಜಿಯ ಕೊರತೆಯೂ- ಅತಿಯೂ ಆಗದಂತೆ ಎಚ್ಚರ ವಹಿಸಬೇಕು. ಮಾನಸಿಕ ದೃಢತೆ, ಸ್ಪಷ್ಟತೆ, ದೂರದರ್ಶಿತ್ವ ಮುಂತಾದ ಸಕಾರಾತ್ಮಕ ಗುಣಗಳು ಪೋಷಕರಲ್ಲಿ ಇದ್ದಾಗ ಇಂತಹ ಸಕಾರಾತ್ಮಕ ಆರೈಕೆ ಸಾಧ್ಯವಾಗುತ್ತದೆ.ಇಲ್ಲದಿದ್ದಲ್ಲಿ ತಮ್ಮ ಮಾನಸಿಕ ಅಭದ್ರತೆ, ಆತಂಕವನ್ನು ಪೋಷಕರು ಮಕ್ಕಳಿಗೆ ರವಾನಿಸುವ ಸಾಧ್ಯತೆ ಹೆಚ್ಚುತ್ತದೆ.
ಅಂತಃಶಕ್ತಿ: ಚಿಕಿತ್ಸೆ ಎನ್ನುವುದು ಪ್ರತಿವ್ಯಕ್ತಿಯ ಒಳಗಿರುವ ಆಂತರಿಕ ಪ್ರಕ್ರಿಯೆ. ಶರೀರವನ್ನು ಆರೋಗ್ಯ ಸ್ಥಿತಿಗೆ ಮರಳಿ ತರಲು ಅವರವರ ಶರೀರವೇ ಕೆಲಸ ಮಾಡಬೇಕಾಗಿರುತ್ತದೆ. ಇದನ್ನು ಹೆಚ್ಚುಗೊಳಿಸಲು ಇರುವ ಸರಳ ವಿಧಾನಗಳಲ್ಲಿ ದೀರ್ಘ ಉಸಿರಾಟ, ಸಕಾರಾತ್ಮಕ ಚಿಂತನೆ, ಬಿಸಿಲಿಗೆ ಮೈಯೊಡ್ಡುವುದು, ಪ್ರಾರ್ಥನೆ, ಯೋಗ, ಧ್ಯಾನ ಇತ್ಯಾದಿಗಳನ್ನು ಸ್ವತಹ ಅನಾರೋಗ್ಯದಲ್ಲಿರುವ ವ್ಯಕ್ತಿಯೇ ಅಳವಡಿಸಿಕೊಳ್ಳಬೇಕು.ನರಳುತ್ತಾ ನರಳುತ್ತಾ ರೋಗ ಎನ್ನುವ ಗಾದೆ ಮಾತಿದೆ. ಯಾವ ವ್ಯಕ್ತಿ ಇಡೀ ದಿನ ತನ್ನ ಕಾಯಿಲೆಯ ಬಗ್ಗೆ ಚಿಂತಿಸುತ್ತಾರೋ, ಅದೇ ವಿಷಯದಲ್ಲಿ ಮುಳುಗಿರುತ್ತಾರೋ ಅವರಿಗೆ ದಿನಕ್ಕೊಂದು ಹೊಸದಾದ ಕಾಯಿಲೆ ಅಥವಾ ಅದರ ಲಕ್ಷಣಗಳು ಹೆಚ್ಚುತ್ತಲೇ ಹೋಗುತ್ತವೆ. ಯಾವುದೇ ಕಾರಣಕ್ಕೂ ಇಂತಹ ಮಾನಸಿಕ ಸ್ವಭಾವ ಬೆಳೆಯದಂತೆ ಬಾಲ್ಯದಿಂದಲೇ ಸರಿಯಾದ ತರಬೇತಿ ಮತ್ತು ಮಾರ್ಗದರ್ಶನ ಅತಿ ಅಗತ್ಯ.
ಬಾಲ್ಯದಲ್ಲಿಯೇ ಇರಲಿ ಅಭ್ಯಾಸ
ಕಾಯಿಲೆ ಎನ್ನುವುದು ಒಂದು ತಾತ್ಕಾಲಿಕ ಸ್ಥಿತಿ. ಅದನ್ನು ಮೀರಿ ನಿಲ್ಲುವ ಸಾಮರ್ಥ್ಯ ತನ್ನೊಳಗೆ ತುಂಬಿದೆ ಎನ್ನುವ ಭರವಸೆ, ನಂಬಿಕೆ, ಕಲ್ಪನೆ ದೃಷ್ಟಿಕೋನವನ್ನು ಮಕ್ಕಳಿಗೆ ಬಾಲ್ಯದಿಂದಲೇ ಅಭ್ಯಾಸ ಮಾಡಿಸಿಕೊಡಬೇಕು. ತನ್ನ ಆರೋಗ್ಯಕ್ಕೆ ತಾನೇ ಜವಾಬ್ದಾರಿ ತೆಗೆದುಕೊಳ್ಳುವ ಸ್ವಭಾವ ಬರಬೇಕು. ಅಂತಃಶಕ್ತಿ ಹೆಚ್ಚಾದಾಗ ಆಂತರಿಕ ಚಿಕಿತ್ಸಾ ಸಾಮರ್ಥ್ಯವೂ ಹೆಚ್ಚುತ್ತದೆ. ವೈದ್ಯರು ಕೊಡುವ ಚಿಕಿತ್ಸೆ, ಸೇವಿಸುವ ಔಷಧಿಗಳು ಹೆಚ್ಚು ಪರಿಣಾಮ ನೀಡಬಲ್ಲದು. ಸೂಕ್ತವಾದ ಪಥ್ಯವನ್ನು ಮಾಡುವ ಮನಸ್ಥಿತಿ ಅಭ್ಯಾಸವಾಗುತ್ತದೆ. ಸಿಗುವ ಆರೈಕೆಯನ್ನು ಉಪಯೋಗಿಸಿಕೊಂಡು ಉತ್ತಮ ಆರೋಗ್ಯ ಸ್ಥಾಪನೆ ಸಾಧ್ಯವಾಗುತ್ತದೆ . ಈಗಿನ ಆರೋಗ್ಯ ಸ್ಥಿತಿ ಮಕ್ಕಳಲ್ಲಿ ಹೇಗಿದೆ ಎನ್ನುವುದು ಮುಖ್ಯವಲ್ಲ ಅದನ್ನು ಯಾವ ಸ್ಥಿತಿಗೆ ತಲುಪಿಸಬೇಕು ಎನ್ನುವ ದೂರದರ್ಶಿತ್ವ ಮುಖ್ಯ. ಅದಕ್ಕೆ ಸೂಕ್ತ ಮಾರ್ಗದರ್ಶನ, ಸಹಾಯ, ಅನುಕೂಲ, ಅನುಗ್ರಹಗಳು ಪ್ರಯತ್ನಿಸುವ ವ್ಯಕ್ತಿ ಎಡೆಗೆ ಹರಿದುಬರುತ್ತದೆ. ಏಕೆಂದರೆ ಪ್ರಕೃತಿಯು ನಿಯಮವೇ ಪ್ರತಿಧ್ವನಿಯಂತಿರುತ್ತದೆ. ಮಾಡಬೇಕಾದ್ದನ್ನು ಸರಿಯಾದ ರೀತಿಯಲ್ಲಿ ಮಾಡುತ್ತಾ ಹೋದಾಗ ಪ್ರಕೃತಿಯ ನಿಯಮಕ್ಕೆ ಅನುಗುಣವಾಗಿ ಆಗಬೇಕಾಗಿದ್ದು ಆಗುತ್ತಲೇ ಹೋಗುತ್ತದೆ.
(ಕಳೆದ ವಾರ ಪ್ರಕಟಗೊಂಡ ‘ಸೂಪರ್ ಬ್ರೇನ್ ಯೋಗ’ ಲೇಖನದಲ್ಲಿ ಉಲ್ಲೇಖಿಸಲಾದ ಅಂಶಗಳನ್ನು ಸಂಶೋಧನೆ ಮೂಲಕ ಹೇಳಿಕೊಟ್ಟವರು ‘ಆಧುನಿಕ ಪ್ರಾಣ ಚೈತನ್ಯ ಚಿಕಿತ್ಸೆಯ ಪಿತಾಮಹ’ ಎಂದು ಕರೆಯಲ್ಪಡುವ ಆಧ್ಯಾತ್ಮಿಕ ಸಂಶೋಧಕ ಮಾಸ್ಟರ್ ಚೋವ ಕೊಕ್ಸುಯಿ. ಕಳೆದ ವಾರದ ಅಂಕಣದಲ್ಲಿ ಕಣ್ತಿಪ್ಪಿನಿಂದ ಇವರ ಹೆಸರು ಬಿಟ್ಟುಹೋಗಿತ್ತು.)