ಕೇಂದ್ರ-ರಾಜ್ಯ ಸರ್ಕಾರದ ಸಾಧನೆಗಳ ಬಹಿರಂಗ ಚರ್ಚೆಗೆ ಸಿದ್ಧ

ಚಿಕ್ಕಮಗಳೂರು: ನಾಲ್ಕೂವರೆ ವರ್ಷದಲ್ಲಿ ಕೇಂದ್ರ ಸರ್ಕಾರದ ಸಾಧನೆ ಹಾಗೂ ರಾಜ್ಯದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಮಾಡಿರುವ ಕೆಲಸದ ಬಗ್ಗೆ ಬಹಿರಂಗ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಬರುವುದಾದರೆ ನಾನು ಸಿದ್ಧ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಂಥಾಹ್ವಾನ ನೀಡಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ತಾಯಿ ಚನ್ನಮ್ಮ ಹಾಗೂ ಪುತ್ರ ನಿಖಿಲ್ ಜತೆ ಶೃಂಗೇರಿ ಮಠಕ್ಕೆ ಬುಧವಾರ ಸಂಜೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ರಿಮೋಟ್ ಕಂಟ್ರೋಲ್​ನಲ್ಲಿದ್ದಾರೆಂಬ ಪ್ರಧಾನಿ ಟೀಕೆಗೆ ಅಸಮಾಧಾನ ವ್ಯಕ್ತಪಡಿಸಿದರು.

ನರೇಂದ್ರ ಮೋದಿ ಸಂತೆ ಭಾಷಣಕ್ಕೆ ನಾನ್ಯಾಕೆ ಪ್ರತಿಕ್ರಿಯೆ ನೀಡಬೇಕು ಎಂದು ಹೇಳುತ್ತಲೇ ಅವರು, ನಾನು ರಾಜ್ಯದ ಸಮಸ್ಯೆಗಳ ಬಗ್ಗೆ ಯಾವ ರೀತಿ ಕಾರ್ಯಕ್ರಮ ರೂಪಿಸಬೇಕೆಂದು ಸಿದ್ಧತೆ ಮಾಡಿಕೊಂಡಿದ್ದೇನೆ. ಈ ಕಾರಣಕ್ಕಾಗಿ ನಮ್ಮ ಸ್ನೆಹಿತರು(ಕಾಂಗ್ರೆಸ್) ನನ್ನನ್ನು ರಿಮೋಟ್ ಕಂಟ್ರೋಲ್ ಮಾಡಿಕೊಂಡಿದ್ದಾರೆ. ಪ್ರಧಾನಿ ಹೇಳುವುದರಲ್ಲಿ ತಪ್ಪೇನಿಲ್ಲ ಎಂದರು.

ಮುಖ್ಯಮಂತ್ರಿಯಾಗಿ ನಾನು ರಾಜ್ಯದ ರೈತರಿಗೆ ಏನು ಮಾಡಿದ್ದೇನೆ? ನಾಲ್ಕೂವರೆ ವರ್ಷದಲ್ಲಿ ಮೋದಿ ಏನು ಮಾಡಿದ್ದಾರೆ? ಕೃಷಿ ಸಾಲ ಮನ್ನಾ ಮಾಡಿದ್ದಕ್ಕೆ ಮೈತ್ರಿ ಸರ್ಕಾರ ರೈತ ವಿರೋಧಿಯೇ? ಹಾಗಾದರೆ ರೈತರ ಸಾಲ ಮನ್ನಾ ಮಾಡುವುದು ಪ್ರಧಾನಿ ದೃಷ್ಟಿಯಲ್ಲಿ ಪಾಪದ ಕೆಲಸವೇ? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿದ ಸಿಎಂ ಮುಂದಿನ ದಿನಗಳಲ್ಲಿ ಜನರೇ ತೀರ್ಮಾನ ಮಾಡುತ್ತಾರೆ ಬಿಡಿ ಎಂದರು.