ಪರೀಕ್ಷೆ ಬರೆದ ದೃಷ್ಟಿ ಇಲ್ಲದ ವಿದ್ಯಾರ್ಥಿ

ಚಿಕ್ಕಮಗಳೂರು: ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯುವ ದೃಷ್ಟಿ ಇಲ್ಲದ ವಿದ್ಯಾರ್ಥಿಗಳಿಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ನಗರದ ಮೌಂಟೆನ್ ವ್ಹೀವ್ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪ್ರತ್ಯೇಕ ಕೊಠಡಿ ಸ್ಥಾಪಿಸಿದ್ದು, 15 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.

ಈಗಾಗಲೆ ಕನ್ನಡ ವಿಷಯ ಬರೆದಿರುವ ವಿದ್ಯಾರ್ಥಿಗಳು ಶನಿವಾರ ಅರ್ಥಶಾಸ್ತ್ರ ವಿಷಯ ಪರೀಕ್ಷೆ ಬರೆದರು. ದೃಷ್ಟಿ ಇಲ್ಲದ ವಿದ್ಯಾರ್ಥಿಗಳಿಗೆ ಗಣಿತ ವಿಷಯ ಇರುವುದಿಲ್ಲ. ಇದಕ್ಕೆ ಬದಲಾಗಿ ಅರ್ಥಶಾಸ್ತ್ರ ವಿಷಯ ಪರೀಕ್ಷೆ ಅವರು ಬರೆಯಬೇಕು. ಗಣಿತ ವಿಷಯ ಓದಿ ಬರೆಯುವುದು ಕಷ್ಟವಾಗಬಹುದೆಂಬ ಕಾರಣಕ್ಕೆ ಶಿಕ್ಷಣ ಇಲಾಖೆ ಅವರಿಗೆ ಪರ್ಯಾಯವಾಗಿ ಅರ್ಥಶಾಸ್ತ್ರ ವಿಷಯ ಪರೀಕ್ಷೆಗೆ ಅವಕಾಶ ಮಾಡಿದೆ.

ಜಿಲ್ಲೆಯಲ್ಲಿ ಒಟ್ಟು 15 ವಿದ್ಯಾರ್ಥಿಗಳು ನೋಂದಣಿಯಾಗಿದ್ದು, ಅವರೆಲ್ಲರೂ ಪರೀಕ್ಷೆ ಬರೆದರು. ಇವರು ಪರೀಕ್ಷೆ ಬರೆಯಲು ಸಹಾಯಕರನ್ನು ಪಡೆಯಲು ಅವಕಾಶವಿದ್ದು, ದೃಷ್ಟಿ ಇಲ್ಲದವರು ಪ್ರಶ್ನೆಗೆ ಉತ್ತರ ಹೇಳಿದಂತೆ 15 ಸಹಾಯಕರು ಪರೀಕ್ಷೆ ಬರೆದು ನೆರವಾದರು. 8-9ನೇ ತರಗತಿ ಓದುತ್ತಿರುವ ಮಕ್ಕಳು ಇವರಿಗೆ ಸಹಾಯಕರಾಗಿ ಪರೀಕ್ಷೆ ಬರೆದರು.

ನಗರದ ಡಾ. ಜೆ.ಪಿ.ಕೃಷ್ಣೇಗೌಡ ಅವರು ನಡೆಸುವ ಆಶಾ ಕಿರಣ ಅಂಧ ಮಕ್ಕಳ ಶಾಲೆಯಲ್ಲಿ ಈ 15 ವಿದ್ಯಾರ್ಥಿಗಳೂ ಓದುತ್ತಿದ್ದಾರೆ.