ಪಿಸಿಎಆರ್​ಡಿ ಬ್ಯಾಂಕ್​ಗೆ ಈಶ್ವರಹಳ್ಳಿ ಮಹೇಶ್ ಅಧ್ಯಕ್ಷ

ಚಿಕ್ಕಮಗಳೂರು: ಪ್ರಾಥಮಿಕ ಸಹಕಾರ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾಗಿ ತಾಪಂ ಮಾಜಿ ಅಧ್ಯಕ್ಷ ಈಶ್ವರಹಳ್ಳಿ ಮಹೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಿಕಟಪೂರ್ವ ಅಧ್ಯಕ್ಷ ಕೋಟೆ ರಂಗನಾಥ್ ಅವರ ರಾಜೀನಾಮೆಯಿಂದ ತೆರೆವಾದ ಸ್ಥಾನಕ್ಕೆ ರತ್ನಗಿರಿ ರಸ್ತೆಯಲ್ಲಿರುವ ಬ್ಯಾಂಕ್ ಆವರಣದಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಈಶ್ವರಹಳ್ಳಿ ಮಹೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಭಿನಂದನೆ ಸ್ವೀಕರಿಸಿ ಅಧ್ಯಕ್ಷ ಈ.ಆರ್.ಮಹೇಶ್ ಮಾತನಾಡಿ, ಬ್ಯಾಂಕ್​ನ ನೂತನ ಕಟ್ಟಡ ನಿರ್ವಣಕ್ಕೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿಯ ಎಲ್ಲ ಜನಪ್ರತಿನಿಧಿಗಳಿಂದ ಅನುದಾನ ತಂದು ಕಟ್ಟಡ ಪೂರ್ಣಗೊಳಿಸಲು ನಿಮ್ಮೆಲ್ಲರ ಸಹಕಾರ ಅಗತ್ಯವಿದೆ. ಸಾಲ ಪಡೆದ ರೈತರು ಸರಿಯಾದ ಸಮಯದಲ್ಲಿ ಮರುಪಾವತಿ ಮಾಡಿದಾಗ ಮಾತ್ರ ಇತರ ಸಂಕಷ್ಟದಲ್ಲಿರುವ ರೈತರಿಗೆ ಸಾಲ ನೀಡಲು ಅನುಕೂಲವಾಗುತ್ತದೆ ಎಂದು ಹೇಳಿದರು.

ನಿಕಟಪೂರ್ವ ಅಧ್ಯಕ್ಷ ಕೋಟೆ ರಂಗನಾಥ್ ಮಾತನಾಡಿ, ರಾಜ್ಯ ಸರ್ಕಾರ ರೈತರ ಸಾಲಮನ್ನಾ ಘೊಷಣೆ ಮಾಡಿರುವುದರಿಂದ ಸಾಲ ಕಟ್ಟಲು ಕೆಲವರು ಹಿಂಜರಿಯುತ್ತಿದ್ದಾರೆ. ಆದರೆ ಸಾಲಮನ್ನಾದ ಹಣ ನಮ್ಮ ಬ್ಯಾಂಕ್​ಗೆ ಇದೂವರೆಗೂ ಬಂದಿಲ್ಲ ಎಂದರು.

ಜಿಪಂ ಸದಸ್ಯ ಬಿ.ಜೆ.ಸೋಮಶೇಖರ್ ಮಾತನಾಡಿ, ಒಂದು ಸಹಕಾರ ಬ್ಯಾಂಕ್​ನ್ನು ಸಮರ್ಪಕವಾಗಿ ಮುನ್ನೆಡೆಸುವುದು ಸುಲಭದ ಮಾತಲ್ಲ. ನಿರ್ದೇಶಕರು, ಅಧಿಕಾರಿ ಸಿಬ್ಬಂದಿ ಹಾಗೂ ಜಿಲ್ಲೆ ರೈತರ ಸಹಕಾರವೂ ಪ್ರಮುಖವಾಗಿದೆ. ಎಲ್ಲರೂ ಒಗ್ಗೂಡಿ ಪರಸ್ಪರ ಸಹಕಾರ ಮನೋಭಾವದಿಂದ ಸಾಗಿದಾಗ ಮಾತ್ರ ಯಶಸ್ಸು ಸಾಧ್ಯ ಎಂದರು.