ವಿದ್ಯುತ್ ತಂತಿ ತಾಗಿ ಕಾಡೆಮ್ಮೆ ಸಾವು

ಚಿಕ್ಕಮಗಳೂರು: ಕೊಪ್ಪ ತಾಲೂಕು ಬಸಿರಿಕಟ್ಟೆ ಬಳಿ ವಿದ್ಯುತ್ ತಂತಿ ತಾಗಿ ಕಾಡೆಮ್ಮೆಯೊಂದು ಶನಿವಾರ ಮುಂಜಾನೆ ಮೃತಪಟ್ಟಿದೆ. ಬಸಿರಿಕಟ್ಟೆಯಿಂದ ಬರಕಲಕಟ್ಟೆಗೆ ಹೋಗುವ ದಾರಿಯ ಗುಡ್ಡಪ್ರದೇಶದಲ್ಲಿ ನೆಲಕ್ಕೆ ತಾಗುವಂತೆ ಹಾದುಹೋಗಿರುವ ತಂತಿ ತಾಗಿ ಕಾಡೆಮ್ಮೆ ಮೃತಪಟ್ಟಿದೆ.

ರಸ್ತೆ ಬದಿಯ ದಿಬ್ಬದ ಮೇಲೆ ಮೇಯುತ್ತಿದ್ದ ಕಾಡೆಮ್ಮೆಗೆ ವಿದ್ಯುತ್ ತಂತಿ ತಾಗಿದೆ. ವಿದ್ಯುತ್ ತಗುಲಿ ಅದು ಕೆಳಗಿರುವ ರಸ್ತೆಗೆ ಬಿದ್ದಿದೆ. ಕಾಡೆಮ್ಮೆ ಕೆಳಗೆ ಬಿದ್ದಿರುವ ಗುರುತು ಸಹ ಅಲ್ಲಿದೆ.

ಬಸರಿಕಟ್ಟೆ, ಅತ್ತಿಕೂಡಿಗೆ ಭಾಗದ ಕಾಡಿನ ಪ್ರದೇಶದಲ್ಲಿ ಹಲವು ಕಡೆ ವಿದ್ಯುತ್ ಕಂಬಗಳ ತಂತಿಗಳು ನೆಲಕ್ಕೆ ತಾಗುವಂತಿವೆ. ಅನೇಕರು ತೋಟ ಮಾಡಿರುವುದರಿಂದ ಅಡಕೆ, ಕಾಫಿ ಗಿಡದ ನೆರಳಿಗೆ ಬೆಳೆಸಿದ ಮರಗಳು ತಾಗುತ್ತಿವೆ. ಪ್ರಾಣಾಪಾಯ ಇರುವ ಕಡೆ ವಿದ್ಯುತ್ ತಂತಿ ಮಾರ್ಗ ಬದಲಿಸುವಂತೆ ಮನವಿ ಮಾಡಿದರೂ ಮೆಸ್ಕಾಂ ನಿರ್ಲಕ್ಷ್ಯ ಮಾಡುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಭಾಗದ ಹಲವು ಕಡೆ ಹಲವು ರ್ವಗಳ ಹಿಂದೆ ನೆಟ್ಟ ಕಂಬಗಳು ಹಾಗೇ ಇವೆ. ಇವುಗಳು ಜೋತು ಬಿದ್ದು, ನೆಲಕ್ಕೆ ತಾಗುವಂತಿವೆ. ಇಂಥ ಕಡೆ ಜನರು ನಡೆದಾಡಿದರೆ ವಿದ್ಯುತ್ ತಂತಿ ತಗುಲುತ್ತದೆ.