ಪತಿ ಐದಡಿ, ಪತ್ನಿ ಮೂರಡಿ!

ಚಿಕ್ಕಮಗಳೂರು: ‘ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯ’ ಎಂಬಂತೆ ಮದುವೆ ಎನ್ನುವುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆಂಬುದು ವಾಡಿಕೆ ಮಾತು. ಇದು ಅಕ್ಷರಶಃ ಸತ್ಯ ಎನ್ನುವುದಕ್ಕೆ ಇಲ್ಲಿದೆ ಸಾಕ್ಷಿ. ವ್ಯಕ್ತಿಯೊಬ್ಬರು ಅಂಗವಿಕಲ ಯುವತಿಯನ್ನು ಮನ ಮೆಚ್ಚಿ ಮಡದಿಯಾಗಿ ಸ್ವೀಕರಿಸಿದ್ದಾರೆ.

ಅಂಗವಿಕಲರೆಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಬಾಳು ಕೊಟ್ಟರೆ ಅಂಗವಿಕಲೆಗೇ ಎಂಬ ದೃಢ ನಿಶ್ಚಯ ಮಾಡಿದ ಈಶ್ವರ್ ಕೊನೆಗೂ ತನ್ನ ಇಚ್ಛೆಯಂತೆ ಅಂಗವಿಕಲೆಯನ್ನೇ ಪ್ರೀತಿಸಿ ವಿವಾಹವಾಗಿದ್ದಾರೆ.

ಈಶ್ವರ್ ಎಂಬುವರು ವರ್ಷದ ಹಿಂದೆ ಅಂಗವಿಕಲ ಯುವತಿ ಶಿವಮ್ಮ ಅವರನ್ನು ಪ್ರೀತಿಸಿ ವರಿಸಿದ್ದಾರೆ. ಈ ಪ್ರೀತಿ, ಪ್ರೇಮ, ದಾಂಪತ್ಯಗೀತೆ ಸಾಮಾನ್ಯ. ಆದರೆ ಈ ಜೋಡಿಯ ವಿಶೇಷತೆಯೇ ಬೇರೆ. ಇವರು ಐದಡಿ, ಆಕೆ ಮೂರಡಿ. ಹೀಗಿದ್ದರೂ ಅವರ ಪ್ರೀತಿ ಫಲಿಸಿದೆ. ಅರಸೀಕೆರೆಯಲ್ಲಿದ್ದ ಈ ಯುವತಿಯನ್ನು ಆಗೊಮ್ಮೆ-ಈಗೊಮ್ಮೆ ನೋಡುತ್ತಿದ್ದ ಈಶ್ವರ್​ಗೆ ಪ್ರೇಮಾಂಕುರವಾಗಿದೆ. ಅದೇ ಸಂದರ್ಭಕ್ಕೆ ಸ್ನೇಹಿತರ ಮಧ್ಯಸ್ಥಿಕೆಯಿಂದ ಮದುವೆ ಯೋಗ ಕೂಡಿಬಂತು.

ನಗರ ಹೊರವಲಯದ ಮನೆಯಲ್ಲಿ ವಾಸ್ತವ್ಯ ಹೂಡಿರುವ ಈಶ್ವರ್​ಗೆ ಇರುವಷ್ಟು ದಿನ ಇರಿ ಎಂದು ಸ್ನೇಹಿತ ಮಂಜುನಾಥ್ ಆಸರೆ ನೀಡಿದ್ದಾರೆ. ಗಾರೆ ಕೆಲಸ ಮಾಡುವ ಈಶ್ವರ್ ಬದುಕಿನಲ್ಲಿ ಅಂಗವಿಕಲೆಗೆ ಬಾಳು ಕೊಡಬೇಕೆನ್ನುವ ಉದಾತ್ತ ಚಿಂತನೆ ಜತೆಗೆ ಛಲ ಇರಿಸಿಕೊಂಡು ಬದುಕು ನಡೆಸುತ್ತಿರುವುದು ವಿಶೇಷ. ನಗರ ಸಂಚಾರದ ವೇಳೆ ಈಶ್ವರ್ ಪತ್ನಿಯನ್ನು ಎತ್ತಿಕೊಂಡೇ ರಸ್ತೆ ದಾಟುತ್ತಾರೆ. ಜಾತಿ ಬೇರೆ ಬೇರೆಯಾದ್ರೂ ಒಂದುಮಾಡಿದ ಪ್ರೀತಿಯಲ್ಲಿ ಮಿಂದು ಮದುವೆಯಾಗಿದ್ದು ಮಾತ್ರ ಅನ್ಯಧರ್ಮದ ಚರ್ಚ್​ನಲ್ಲಿ ಎಂಬುದು ವಿಶೇಷ.