ಪಿಡಬ್ಲ್ಯುಡಿ ಗುತ್ತಿಗೆದಾರನಿಗೆ ಐಟಿ ಶಾಕ್

ಚಿಕ್ಕಮಗಳೂರು: ರಾಜ್ಯಾದ್ಯಂತ ನಡೆದಿರುವ ಆದಾಯ ತೆರಿಗೆ ದಾಳಿ ಚಿಕ್ಕಮಗಳೂರಿನಲ್ಲೂ ಸದ್ದು ಮಾಡಿದ್ದು, ಇಲ್ಲಿನ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರೊಬ್ಬರ ಮನೆ ಮೇಲೂ ದಾಳಿ ಮಾಡಲಾಗಿದೆ.

ಕೋಟೆ ಬಡಾವಣೆಯ ಚನ್ನಾಪುರ ರಸ್ತೆಯಲ್ಲಿರುವ ಒಂದನೇ ದರ್ಜೆ ಗುತ್ತಿಗೆದಾರ ಸಿ.ಎಚ್.ವಿ.ಎನ್.ರೆಡ್ಡಿ ಅವರ ನಿವಾಸದ ಮೇಲೆ ಗುರುವಾರ ಬೆಳಗ್ಗೆ 8 ಗಂಟೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದರು. ಎಂಟು ಜನರಿದ್ದ ತಂಡ ಇನೋವಾ ಕಾರಿನಲ್ಲಿ ಆಗಮಿಸಿ ಎರಡಂತಸ್ತಿನ ಬೃಹತ್ ಮನೆ ಗೇಟ್ ತೆಗೆದಾಗ ರೆಡ್ಡಿ ಮನೆಯೊಳಗಿಂದ ಬಾಗಿಲು ತೆಗೆದು ಹೊರ ಬಂದರು.

ದಾಳಿ ನಡೆಯುವ ಮಾಹಿತಿ ಸ್ಥಳೀಯ ಪೊಲೀಸರಿಗೂ ಇರಲಿಲ್ಲ. ಆದಾಯ ತೆರಿಗೆ ಅಧಿಕಾರಿಗಳು ತಾವೆಂದು ಪರಿಚಯ ಮಾಡಿಕೊಂಡಾಗ ರೆಡ್ಡಿ ಅವರು, ಯಾವುದೇ ಪ್ರತಿರೋಧ ತೋರದೆ ದಾಳಿಗೆ ಸಹಕರಿಸಿದರು. ಮಧ್ಯಾಹ್ನದ ತನಕ ಕಡತ ಹಾಗೂ ಇತರೆ ಬೀರುಗಳನ್ನು ಪರಿಶೀಲನೆ ಮಾಡಿದ ಅಧಿಕಾರಿಗಳು ಕೆಲವು ದಾಖಲೆ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಪ್ರಥಮ ದರ್ಜೆ ಗುತ್ತಿಗೆದಾರರಾಗಿರುವ ರೆಡ್ಡಿ, ಕಡೂರು-ಚಿಕ್ಕಮಗಳೂರು-ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ನಿರ್ವಣದ ಗುತ್ತಿಗೆ ಪಡೆದಿದ್ದು, ಕಾಮಗಾರಿ ಆರಂಭಿಸಿದ್ದಾರೆ. ಕಾಮಗಾರಿ ಮೊತ್ತ 200 ಕೋಟಿ ರೂ. ಆಗಿದೆ.