ಎಸ್ಪಿ ಕಚೇರಿಗೆ ಶಿಫ್ಟ್ ಆಯ್ತು ಧರಣಿ

ಚಿಕ್ಕಮಗಳೂರು/ತರೀಕೆರೆ : ಲಕ್ಕವಳ್ಳಿ ಪೊಲೀಸ್ ಪೇದೆ ಶಿವಣ್ಣ ಅವರ ಮೇಲೆ ಅಜ್ಜಂಪುರ ಪಿಎಸ್​ಐ ರಫೀಕ್ ಹಲ್ಲೆ ನಡೆಸಿದ್ದಾರೆ ಎನ್ನಲಾದ ಪ್ರಕರಣ ಹೈಡ್ರಾಮಾ ತಲುಪಿದ್ದು, ಪೇದೆ ಪತ್ನಿ, ತಾಯಿ ಮತ್ತು ಪುತ್ರ ಎಸ್ಪಿ ಕಚೇರಿ ಬಳಿ ಧರಣಿ ಆರಂಭಿಸಿದ್ದರೆ ತರೀಕೆರೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಶಿವಣ್ಣ ಕೂಡ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಿರಶನ ಆರಂಭಿಸಿದ್ದಾರೆ.

ಅಜ್ಜಂಪುರ ಪಿಎಸ್​ಐ ರಫೀಕ್ ಅವರ ಮೇಲೆ ಎಫ್​ಐಆರ್ ದಾಖಲು ಮಾಡಿ ಸೇವೆಯಿಂದ ಅಮಾನತು ಮಾಡಬೇಕು ಎಂದು ಪಟ್ಟು ಹಿಡಿದಿರುವ ಕುಟುಂಬ, ತರೀಕೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವಣ್ಣ ಅವರಿಗೆ ಏನಾದರೂ ಸಮಸ್ಯೆಯಾದರೆ ಪಿಎಸ್​ಐ ರಫೀಕ್ ಮತ್ತು ಪೊಲೀಸ್ ಇಲಾಖೆಯೇ ಹೊಣೆ ಎಂದು ಎಚ್ಚರಿಕೆ ನೀಡಿದೆ.

ಎಫ್​ಐಆರ್ ದಾಖಲು ಮಾಡಲು ನಿರಾಕರಿಸಿರುವ ಎಸ್ಪಿ ಹರೀಶ್ ಪಾಂಡೆ, ಡಿಎಸ್ಪಿಯಿಂದ ವರದಿ ಪಡೆದ ನಂತರ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಶುಕ್ರವಾರ ಅಜ್ಜಂಪುರ ಠಾಣೆ ಎದುರು ಧರಣಿ ಮಾಡಿದ್ದ ಶಿವಣ್ಣ ಅವರ ಪತ್ನಿ ಆಶಾ, ತಾಯಿ ತಿಮ್ಮಮ್ಮ ತಡರಾತ್ರಿ ಚಿಕ್ಕಮಗಳೂರಿಗೆ ಆಗಮಿಸಿ ಎಸ್ಪಿ ಹರೀಶ್ ಪಾಂಡೆ ಅವರನ್ನು ಭೇಟಿ ಮಾಡಿ ಪಿಎಸ್​ಐ ವಿರುದ್ಧ ಪ್ರಕರಣ ದಾಖಲಿಸಿ ತಮಗೆ ನ್ಯಾಯ ದೊರಕಿಸಲೇಬೇಕೆಂದು ಆಗ್ರಹಿಸಿದರು.

ಪ್ರಕರಣದ ಬಗ್ಗೆ ಪ್ರಾಥಮಿಕ ಹಂತದ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಎಸ್ಪಿ ಹರೀಶ್ ಪಾಂಡೆ, ಕುಟುಂಬಸ್ಥರನ್ನು ಸಮಾಧಾನಪಡಿಸುವ ಪ್ರಯತ್ನ ನಡೆಸಿದರೂ ಪೇದೆಯ ಪತ್ನಿ ಹಾಗೂ ತಾಯಿ ಮಣಿಯಲಿಲ್ಲ. ಕಚೇರಿಯಿಂದ ಹೊರ ಬಂದ ಇಬ್ಬರೂ ಕೂಡಲೇ ಎಫ್​ಐಆರ್ ದಾಖಲಿಸಲೇಬೇಕೆಂದು ಆಗ್ರಹಿಸಿ ಎಸ್ಪಿ ಕಚೇರಿ ಎದುರು ಧರಣಿ ಆರಂಭಿಸಿದರು. ತಮಗೆ ನ್ಯಾಯ ಕೊಡಿಸುವ ತನಕ ಹೋರಾಟ ಮುಂದುವರಿಸುವುದಾಗಿ ತಿಳಿಸಿದರು.

ಡಿವೈಎಸ್ಪಿಯಿಂದ ವರದಿ ಪಡೆದು ಕ್ರಮ: ಲಕ್ಕವಳ್ಳಿ ಠಾಣೆ ಪೊಲೀಸ್ ಪೇದೆ ಶಿವಣ್ಣ ಅವರ ಮೇಲೆ ಅಜ್ಜಂಪುರ ಪಿಎಸ್​ಐ ಹಲ್ಲೆ ಮಾಡಿದ್ದಾರೆ ಎನ್ನಲಾದ ಪ್ರಕರಣದ ಬಗ್ಗೆ ಡಿವೈಎಸ್ಪಿಯಿಂದ ವರದಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಹರೀಶ್ ಪಾಂಡೆ ತಿಳಿಸಿದ್ದಾರೆ. ಪ್ರಕರಣದ ಕುರಿತು ಪ್ರಾಥಮಿಕ ತನಿಖೆ ನಡೆಸಿ ತಪ್ಪು ಯಾರದ್ದೇ ಇದ್ದರೂ ಕಾನೂನು ಕ್ರಮ ಜರುಗಿಸಲಾಗುವುದು. ಕೂಡಲೇ ಪಿಎಸ್​ಐ ವಿರುದ್ಧ ಪ್ರಕರಣ ದಾಖಲಿಸಬೇಕೆನ್ನುವುದು ಸರಿಯಲ್ಲ ಎಂದು ತಿಳಿಸಿದರು.

ಆಸ್ಪತ್ರೆಯಲ್ಲಿ ಪೇದೆ ನಿರಶನ: ಅಜ್ಜಂಪುರ ಪಿಎಸೈ ರಫೀಕ್ ಅವರಿಂದ ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ಲಕ್ಕವಳ್ಳಿ ಪೊಲೀಸ್ ಠಾಣೆ ಪೇದೆ ಶಿವಣ್ಣ ಚಿಕಿತ್ಸೆಗೆ ದಾಖಲಾಗಿರುವ ತರೀಕೆರೆ ಆಸ್ಪತ್ರೆಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ನೀರನ್ನೂ ಕುಡಿಯಲು ನಿರಾಕರಿಸುತ್ತಿದ್ದು, ಮೇಲೆ ಹಲ್ಲೆ ನಡೆಸಿರುವ ಪಿಎಸೈ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಪಟ್ಟು ಹಿಡಿದಿದ್ದಾರೆ.

ಶಿವಣ್ಣ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಎಂದು ಇಲಾಖೆಯ ಅಧಿಕಾರಿಗಳು ವೈದ್ಯರ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಗೊತ್ತಾಗಿದೆ. ಎರಡು ವರ್ಷಗಳ ಹಿಂದೆ ಹರಿಹರಪುರ ಠಾಣೆಯಲ್ಲಿ, 2009ನೇ ವರ್ಷದಲ್ಲಿ ಕುದುರೆಮುಖ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗಲೂ ಇಂತಹದ್ದೇ ಘಟನೆ ನಡೆದಿದ್ದು, ಅಧಿಕಾರಿಗಳ ಷಡ್ಯಂತ್ರಕ್ಕೆ ಸಿಲುಕಿ ಅಮಾನತು ಶಿಕ್ಷೆಗೆ ಗುರಿಯಾಗಿದ್ದರು ಎಂದು ಹೇಳಲಾಗಿದೆ.