ಸ್ತ್ರೀಯರಿಗೆ ಸಮಾನತೆ ತಂದುಕೊಟ್ಟ ಮೊದಲ ಪ್ರವರ್ತಕ ಬಸವಣ್ಣ

ಚಿಕ್ಕಮಗಳೂರು: ಸಮಾನತೆ, ಸಹೋದರತ್ವ ಮತ್ತು ಸಹೃದಯಗಳೆಂಬ ತತ್ವವನ್ನು ಬೋಧಿಸಿದ್ದಾರೆ. ಅವುಗಳನ್ನು ಇಂದು ಸರಿಯಾಗಿ ಅರ್ಥೈಸಿಕೊಂಡು ನಡೆದರೆ ವ್ಯವಸ್ಥೆಗೆ ಹೊಸ ಆಯಾಮ ನೀಡಲು ಸಾಧ್ಯ. ಸ್ತ್ರೀಯರಿಗೆ ಸಮಾನತೆ ತಂದುಕೊಟ್ಟ ಮೊದಲ ಪ್ರವರ್ತಕ ಬಸವಣ್ಣ. ಈ ಕಾರಣಕ್ಕೆ ಅವರು ಸಾರ್ವಕಾಲಿಕ ಪ್ರಾತಃಸ್ಮರಣೀಯ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಹುಲ್ಲಳ್ಳಿ ತಿಳಿಸಿದರು.

ಜಿಲ್ಲಾಡಳಿತದಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಯಾವುದೇ ಧರ್ಮದ ಮೂಲ ದಯೆ. ಕರುಣೆ ಇಲ್ಲವಾದಲ್ಲಿ ಧರ್ಮ ಎಂದು ಅನ್ನಿಸಿಕೊಳ್ಳುವುದಿಲ್ಲ. ದಯೆಯೇ ಧರ್ಮದ ಮೂಲವಯ್ಯ ಎನ್ನುವ ಅಪೂರ್ವ ನುಡಿಗಟ್ಟುಗಳ ಮೂಲಕ ಜಾಗೃತಿ ಮೂಡಿಸಿದವರು ಬಸವಣ್ಣ. ಧರ್ಮಕ್ಕೆ ಹೊಸ ಆಯಾಮ ತಂದುಕೊಟ್ಟರು ಎಂದರು.

ಬಸವಣ್ಣ ಹೆಸರಷ್ಟೇ ಅಲ್ಲ. ಅದೊಂದು ಶಕ್ತಿ. ಅದ್ಭುತ ವ್ಯಕ್ತಿತ್ವ. ಅವರ ಆದರ್ಶ ಎಲ್ಲರಿಗೂ ದಾರಿದೀಪವಾಗಬೇಕು. ಅವರ ತತ್ವಗಳನ್ನು ಅಳವಡಿಸಿಕೊಂಡರೇ ಮಾತ್ರ ಅವರ ಅನುಯಾಯಿಗಳಾಗಲು ಸಾಧ್ಯ ಎಂದರು.

ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಜಿಪಂ ಸಿಇಒ ಎಸ್.ಅಶ್ವಥಿ ಮತ್ತಿತರರು ಬಸವಣ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಸಿ.ರಮೇಶ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಂಜುನಾಥ್, ಡಿಎಸ್​ಎಸ್ ಮುಖಂಡ ಕೆ.ಟಿ.ರಾಧಾಕೃಷ್ಣ, ಸಾಹಿತಿ ರವೀಶ್ ಕ್ಯಾತನಬೀಡು, ಕಸಾಪ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್ ಇತರರಿದ್ದರು.