ಅಸಮರ್ಪಕ ಮಳೆ ನಡುವೆಯೂ ಚಿಕ್ಕಮಗಳೂರಲ್ಲಿ ಕಾಫಿ ಬೆಳೆ ಉತ್ತಮ

ಚಿಕ್ಕಮಗಳೂರು: ಕಾಫಿ ಬೆಳೆಗೆ ಈ ಬಾರಿ ರೇವತಿ ಮಳೆ ಅಷ್ಟು ಸಮರ್ಪಕವಾಗಿ ದೊರೆತಿಲ್ಲವಾದರೂ ಬಹುತೇಕ ತೋಟಗಳಲ್ಲಿ ಕಾಫಿ ಹೂವು ಅರಳಲು ಅಂತಹ ತೊಡಕೇನೂ ಆಗಿಲ್ಲ. ಸ್ವತಃ ಕಾಫಿ ಮಂಡಳಿಯೇ ಪರಿಸ್ಥಿತಿ ಅವಲೋಕಿಸಿ ಈ ತೀರ್ವನಕ್ಕೆ ಬಂದಿದೆ.

ಜಿಲ್ಲೆಯನ್ನು ಕಾಫಿ ಮಂಡಳಿ ಮೂರು ವಿಭಾಗಗಳಾಗಿ ಪ್ರತ್ಯೇಕಿಸಿ ಮಳೆಯ ಸಾಧಕ-ಬಾಧಕಗಳ ಬಗ್ಗೆ ಲೆಕ್ಕಾಚಾರ ನಡೆಸಲಾಗಿದೆ. ಈ ವರ್ಷ ಜನವರಿಯಿಂದ ಇದುವರೆಗೆ ಬಿದ್ದಿರುವ ಮಳೆ ಕಳೆದ ವರ್ಷಕ್ಕಿಂತ ಕಡಿಮೆಯಾಗಿದ್ದರೂ ಸಾಕಷ್ಟು ಕಡೆ ಸಕಾಲಿಕವಾಗಿ ಬಿದ್ದಿದ್ದರಿಂದ ಕಾಫಿ ಬೆಳೆಗೆ ಅನುಕೂಲವಾಗಿಯೇ ಇದೆ ಎನ್ನಲಾಗಿದೆ.

ಚಿಕ್ಕಮಗಳೂರು ವಲಯದಲ್ಲಿ ಈ ವರ್ಷ ಬಿದ್ದಿರುವ ಸರಾಸರಿ ಮಳೆ 21.6 ಮಿಮೀ ಆಗಿದ್ದು, ಕಳೆದ ವರ್ಷಕ್ಕಿಂತ ಶೇ. 58ರಷ್ಟು ಕಡಿಮೆ ಪ್ರಮಾಣದಲ್ಲಿ ಬಿದ್ದಿದೆ. ಈ ಅವಧಿಯಲ್ಲಿ ಚಿಕ್ಕಮಗಳೂರು ಸುತ್ತಮುತ್ತ 80 ಮಿಮೀ ಮಳೆಯಾಗಿದ್ದರೆ, ಪೂರ್ವಗಿರಿಯಲ್ಲಿ ಈ ವರ್ಷ ಇದೇ ಅವಧಿಯಲ್ಲಿ 40 ಮಿಮೀ ಮಳೆ ಬಂದಿದ್ದು, ಕಳೆದ ವರ್ಷಕ್ಕಿಂತ ಮಳೆ ಕಡಿಮೆಯಾಗಿದೆ. ಮೇಲುಗಿರಿಯಲ್ಲಿ 92 ಮಿಮೀ ಮಳೆಯಾಗಿದ್ದರೆ, ಮಲ್ಲಂದೂರು ಸುತ್ತಮುತ್ತ 112 ಮಿಮೀ ಸುರಿದಿದೆ ಎಂದು ತಿಳಿದು ಬಂದಿದೆ.

ಆಲ್ದೂರು ಸುತ್ತಮುತ್ತ 50 ಮಿಮೀ, ಮೂಡಿಗೆರೆ ಸುತ್ತಮುತ್ತ ಸರಾಸರಿ 30 ಮಿಮೀ ಮಳೆ ಇದುವರೆಗೆ ಬಂದಿದ್ದರೆ, ಗೋಣಿಬೀಡು ಸುತ್ತಮುತ್ತ ಸರಾಸರಿ 30 ಮಿಮೀ ಮಳೆ ಬಂದಿದೆ. ಕಳಸ ವಲಯದಲ್ಲಿ 63 ಮಿಮೀ ಮಳೆ ಆಗಿದ್ದರೆ, ಕೊಪ್ಪ ವಲಯದಲ್ಲಿ 42 ಮಿಮೀ ಮತ್ತು ಬಾಳೆಹೊನ್ನೂರು ಸುತ್ತಮುತ್ತ 40 ಮಿಮೀ ಮಳೆ ಬಿದ್ದಿದೆ.

ಕಾಫಿ ತೋಟಗಳಲ್ಲಿ ಬೆಳೆಗಾರರು ಸಾಮೂಹಿಕ ಕೃಷಿ ಪದ್ಧತಿಗಳನ್ನು ಉತ್ತಮವಾಗಿ ಅನುಸರಿಸುತ್ತಿದ್ದು, ಕೀಟಗಳ ಹಾವಳಿ ಮತ್ತು ರೋಗ ಕಡಿಮೆಯಾಗಿದೆ. ಅರೇಬಿಕಾ ಕಾಫಿಗೆ ಬಿಳಿಕಾಂಡ ಕೊರಕದ ಹಾವಳಿ ಕಡಿಮೆ ಇದ್ದು, ಬೆಳೆಗಾರರು ಸೂಕ್ತ ಸಲಹೆಗಳನ್ನು ಅನುಸರಿಸುವಂತೆ ಕಾಫಿ ಮಂಡಳಿ ತಿಳಿಸಿದೆ.

ಈಗಾಗಲೆ ಬಿಳಿಕಾಂಡ ಕೊರಕದ ಹಾವಳಿಗೆ ತುತ್ತಾಗಿರುವ ಗಿಡಗಳನ್ನು ಗುರುತಿಸಿ ಅವುಗಳನ್ನು ತೆರವುಗೊಳಿಸಿ ಸುಟ್ಟು ಹಾಕಲು ಸೂಚಿಸಲಾಗಿದೆ. ಕಾಫಿ ಬೆರ್ರಿ ಬೋರರ್ ಕಾಯಿ ಕೊರಕದ ಹಾವಳಿ ಸಹ ಈ ಬಾರಿ ತೀವ್ರವಾಗಿಲ್ಲ. ಅದು ಕಂಡು ಬಂದಿರುವ ತೋಟಗಳಲ್ಲಿ ಬ್ರೋಕಾ ಬಲೆಗಳನ್ನು ಇಡಲು ಸಲಹೆ ನೀಡಲಾಗಿದೆ.