ಗ್ರಾಮಾಂತರಕ್ಕೆ ಪ್ರತ್ಯೇಕ ಬಸ್ ನಿಲ್ದಾಣ ಸ್ಥಾಪನೆ

ಚಿಕ್ಕಮಗಳೂರು: ನಗರ ಸಾರಿಗೆ ಸಂಸ್ಥೆ ಬಸ್ ನಿಲ್ದಾಣವನ್ನು ನಗರಕ್ಕೆ ಸೀಮಿತಗೊಳಿಸಿ ಗ್ರಾಮಾಂತರ ಬಸ್ ನಿಲ್ದಾಣವನ್ನು ಪ್ರತ್ಯೇಕವಾಗಿ ನಿರ್ವಿುಸುವ ಚಿಂತನೆಯಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು. ನಗರದ ಬಸ್ ನಿಲ್ದಾಣಕ್ಕೆ ಭಾನುವಾರ ಭೇಟಿ ನೀಡಿದ ಸಂದರ್ಭ ಸುದ್ದಿಗಾರರ ಜತೆ ಮಾತನಾಡಿದ ಅವರು, ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಅಂದಾಜು 10 ಎಕರೆ ಭೂಮಿ ಅವಶ್ಯವಿದೆ. ನಿಲ್ದಾಣದ ಜತೆಗೆ ಡಿಪೋ ಹಾಗೂ ವರ್ಕ್​ಶಾಪ್ ನಿರ್ವಿುಸುವ ಉದ್ದೇಶವಿದೆ ಎಂದರು.

ಚಿಕ್ಕಮಗಳೂರು ನಗರ ವಿಸ್ತಾರವಾಗಿದೆ. ಇಂದಿನ ಜನಸಂಖ್ಯೆಗೆ ಇದು ಸಾಕಾಗದು. ಅಲ್ಲದೆ ಈಗಿನ ಬಸ್ ನಿಲ್ದಾಣವನ್ನು ಪಕ್ಕದಲ್ಲಿರುವ ಹಳೇ ಜೈಲು ಜಾಗಕ್ಕೆ ವಿಸ್ತರಿಸುವ ಪ್ರಸ್ತಾವನೆ ಇದೆ. ಪ್ರಸ್ತುತ ಸಾರಿಗೆ ಸಂಸ್ಥೆ ನಷ್ಟದಲ್ಲಿರುವುದರಿಂದ ಬಸ್ ನಿಲ್ದಾಣದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ವಿುಸಿ ಅದರಿಂದ ಸಂಪನ್ಮೂಲ ಕ್ರೋಡೀಕರಣ ಸಾಧ್ಯವೇ ಎಂಬ ಬಗ್ಗೆ ಚಿಂತನೆ ನಡೆದಿದೆ ಎಂದು ತಿಳಿಸಿದರು.

ಸಾರಿಗೆ ಬಸ್​ಗಳನ್ನು ಕೆಳ ಮತ್ತು ಮಧ್ಯಮ ವರ್ಗದ ಜನ ಹೆಚ್ಚಾಗಿ ಬಳಸುತ್ತಾರೆ. ಶ್ರೀಮಂತರು ಸ್ವಂತ ವಾಹನಗಳನ್ನು ಬಳಸುತ್ತಾರೆ. ಗ್ರಾಮಗಳ ಪ್ರಯಾಣಿಕರಿಗೆ ಕಡಿಮೆ ಬೆಲೆಗೆ ಹೆಚ್ಚು ಸೌಕರ್ಯ ನೀಡುವುದು ನಮ್ಮ ಗುರಿ. ಹೀಗಾಗಿ ನಮ್ಮ ಬಸ್ ನಿಲ್ದಾಣಗಳನ್ನು ಈಗಿನ ಸ್ಥಿತಿಯಲ್ಲಿ ಬಿಡಬಾರದು. ರಾಷ್ಟ್ರೀಯ ಗುಣಮಟ್ಟಕ್ಕೆ ಅಭಿವೃದ್ಧಿ ಪಡಿಸಬೇಕಾದ ಅಗತ್ಯವಿದೆ ಎಂದರು.

ಕೆಲ ರಾಜಹಂಸ ಬಸ್​ಗಳು ಕಳಪೆಯಾಗಿವೆ. ಕೆಟ್ಟು ನಿಲ್ಲುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಇಂತಹ ದೂರುಗಳ ಸಂಬಂಧ ಬೆಂಗಳೂರಲ್ಲಿ ಪ್ರತ್ಯೇಕವಾಗಿ ಕಾಲ್ ಸೆಂಟರ್ ತೆರೆಯಲಾಗಿದೆ. ಪ್ರಯಾಣಿಕರು ಎಲ್ಲಿಂದ ಬೇಕಾದರೂ ಇಂತಹ ಬಸ್​ಗಳ ಸಮಸ್ಯೆ ಬಗ್ಗೆ ಗಮನ ಸೆಳೆಯಬಹುದು. ಅದನ್ನು ಬದಲಾವಣೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ದತ್ತಪೀಠಕ್ಕೆ ಬಸ್ ಬಿಡಿ: ಮುಳ್ಳಯ್ಯನಗಿರಿ ತಪ್ಪಲು ರಕ್ಷಣಾ ವೇದಿಕೆ ಸಂಚಾಲಕ ಕೆ.ಎಸ್.ಗುರುವೇಶ್ ಸಚಿವರನ್ನು ಭೇಟಿ ಮಾಡಿ ದತ್ತಪೀಠಕ್ಕೆ ಸರ್ಕಾರಿ ಮಿನಿ ಬಸ್​ಗಳ ವ್ಯವಸ್ಥೆ ಕಲ್ಪಿಸುವಂತೆ ಕೋರಿ ಮನವಿ ಸಲ್ಲಿಸಿದರು. ಸಾರಿಗೆ ಸಂಸ್ಥೆಯ ಬಸ್​ಗಳನ್ನು ಕಲ್ಪಿಸದಿರುವುದರಿಂದ ಈ ಭಾಗದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ನಿತ್ಯ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ಗಮನ ಸೆಳೆದರು.