ಅಮೃತಮಹಲ್ ಕಾವಲ್ ಭೂಮಿ ಒತ್ತುವರಿ

ಚಿಕ್ಕಮಗಳೂರು: ಬಾಸೂರು ಅಮೃತಮಹಲ್ ಕಾವಲ್ ಕೃಷಿ ಭೂಮಿಯಾಗಿ ಪರಿವರ್ತನೆಯಾದರೂ ಅರಣ್ಯ ಹಾಗೂ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ ಎಂದು ಪರಿಸರ ಕಾರ್ಯಕರ್ತರಾದ ಭದ್ರಾ ವೈಲ್ಡ್​ಲೈಫ್ ಕನ್ಸರ್​ವೇಷನ್ ಟ್ರಸ್ಟ್ ಮುಖ್ಯಸ್ಥ ಡಿ.ವಿ. ಗಿರೀಶ್, ಪರಿಸರಾಸಕ್ತ ಜಿ. ವೀರೇಶ್ ದೂರಿದ್ದಾರೆ.

ಬಾಸೂರು ಕಾವಲ್ ಅಮೃತ್​ವುಹಲ್ ಗೋತಳಿಗಳಿಗೆ ಮೀಸಲಾದ ಹುಲ್ಲುಗಾವಲು ಪ್ರದೇಶ. ಇದನ್ನು ರಕ್ಷಿಸುವ ಹಿನ್ನೆಲೆಯಲ್ಲಿ ಅವುಗಳನ್ನು ಸರ್ಕಾರ ಸಮುದಾಯ ಸಂರಕ್ಷಣಾ ಮೀಸಲು ಪ್ರದೇಶವಾಗಿ ಸರ್ಕಾರವೇ ಘೊಷಿಸಿದೆ ಎಂದು ಹೇಳಿದ್ದಾರೆ.

ಆದರೆ ಪ್ರತೀ ವರ್ಷ ಮುಂಗಾರು ಆರಂಭಕ್ಕೆ ಇಲ್ಲಿ ನೇಮಿಸಿರುವ ಕೆಲವು ಕಾವಲುಗಾರರು ಈ ಪ್ರದೇಶದ ರಕ್ಷಣೆ ನೆಪದಲ್ಲಿ ಈರುಳ್ಳಿ ಬೆಳೆಯಲು ಮುಂದಾಗುತ್ತಾರೆ. ಇದನ್ನು ನಿರ್ಬಂಧಿಸಬೇಕೆಂದು ಪರಿಸರಾಸಕ್ತರು, ಪಶುಸಂಗೋಪನೆ ಮತ್ತು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಅದನ್ನು ಒತ್ತುವರಿ ಮಾಡಿ ಕೃಷಿ ಭೂಮಿಯಾಗಿ ಮಾರ್ಪಡಿಸುವ ಕಾರ್ಯ ನಡೆಯುತ್ತಿದೆ ಎಂದು ದೂರಿದ್ದಾರೆ.

ಹಿಂದೆ ಕಾವಲುಗಾರರಿಗೆ ಎರಡು ಎಕರೆ ಹುಲ್ಲುಗಾವಲಿನಲ್ಲಿ ಆಹಾರ ಬೆಳೆಗಳಾದ ರಾಗಿ ಸೇರಿ ತೃಣ ಧಾನ್ಯಗಳನ್ನು ಬೆಳೆದುಕೊಳ್ಳಲು ಅವಕಾಶ ನೀಡಲಾಗುತ್ತಿತ್ತು. ಧಾನ್ಯಗಳನ್ನು ಬೆಳೆದ ನಂತರ ಅವುಗಳನ್ನು ತೆಗೆದುಕೊಂಡು ಹುಲ್ಲನ್ನು ಅಮೃತಮಹಲ್ ರಾಸುಗಳಿಗೆ ಉಪಯೋಗಿಸಿಕೊಳ್ಳಲು ಬಿಡುವ ವ್ಯವಸ್ಥೆ ಇತ್ತು ಎಂದು ತಿಳಿಸಿದ್ದಾರೆ.

ಕೇದಿಗೆರೆ ಸಮೀಪದ ಈ ವಿಶಾಲ ಹುಲ್ಲುಗಾವಲಿನಲ್ಲಿ ಅರಣ್ಯ ಚಟುವಟಿಕೆಗೆ ಅವಕಾಶ ನೀಡದೆ ಕಾವಲುಗಾರರಿಗೆ ತಿಂಗಳಿಗೆ ವೇತನ ನಿಗದಿ ಮಾಡಿ ಈ ಕಾವಲನ್ನು ಅದರ ಮೂಲ ರೂಪದಲ್ಲಿಯೇ ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.