ಚಿಕ್ಕೋಡಿ: ವಿವಿ ಕಾಯ್ದೆ ವಾಪಸ್‌ಗೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

ಚಿಕ್ಕೋಡಿ: ಸರ್ಕಾರ 2017ರ ವಿಶ್ವವಿದ್ಯಾಲಯಗಳ ಕಾಯ್ದೆ ವಾಪಸ್ ಪಡೆಯುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಚಿಕ್ಕೋಡಿ ಘಟಕದ ವತಿಯಿಂದ ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದರು.

2017ರ ವಿಶ್ವವಿದ್ಯಾಲಯಗಳ ಕಾಯ್ದೆ ಗೊಂದಲಗಳಿಂದ ಕೂಡಿರುವುದರಿಂದ ಸರ್ಕಾರ ಕೂಡಲೇ ಕಾಯ್ದೆ ವಾಪಸ್ ಪಡೆಯಬೇಕು. ಶಿಕ್ಷಣ ಸಚಿವರು ದಿನಕ್ಕೊಂದು ಹೇಳಿಕೆ ನೀಡದೆ ನಮ್ಮ ರಾಜ್ಯಕ್ಕೆ ಸಮಗ್ರ ಶಿಕ್ಷಣ ನೀತಿ ಜಾರಿಗೆ ತರಲು ಪ್ರಯತ್ನಿಸಬೇಕು. ಶಿಕ್ಷಣ, ಉನ್ನತ ಶಿಕ್ಷಣಕ್ಕೋಸ್ಕರ ಸಾಮಾಜಿಕ ಅಭಿಪ್ರಾಯ ರೂಪಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು ಹಾಗೂ ಮಹಾವಿದ್ಯಾಲಯಗಳಲ್ಲಿ ಶೇ.50 ರಷ್ಟು ಖಾಲಿ ಇರುವ ಆಧ್ಯಾಪಕರು ಹಾಗೂ ಸಿಬ್ಬಂದಿ ನೇಮಕ ಮಾಡಬೇಕು. ರಾಜ್ಯಪಾಲರು ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯ್ದೆ 2017ನ್ನು ಒಪ್ಪಿಗೆ ಕೊಡದೆ ತಿರಸ್ಕಾರ ಮಾಡಬೇಕು ಎಂದು ಮನವಿ ಮಾಡಿದರು.
ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಂಜು ಸಾಜನೆ, ಭಾಗಣ್ಣ ಪಾಟೀಲ, ರಾಹುಲ ಪಾಟೀಲ, ಅಮಿತ ಭಾಗಿ ಸೇರಿ ಎಬಿವಿಪಿ ಕಾರ್ಯಕರ್ತರು ಇದ್ದರು.