ಚಿಕ್ಕೋಡಿ: ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ವಿತರಿಸಿ

ಚಿಕ್ಕೋಡಿ: ಸರ್ಕಾರ ಶಾಲಾ-ಕಾಲೇಜಿನಲ್ಲಿ ಕಲಿಯುತ್ತಿರುವ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್‌ಪಾಸ್ ನೀಡುವಂತೆ ಆಗ್ರಹಿಸಿ ಎಬಿವಿಪಿ ವಿದ್ಯಾರ್ಥಿ ಘಟಕದ ಸಹಯೋಗದಲ್ಲಿ ಗುರುವಾರ ಚಿಕ್ಕೋಡಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಚಿಕ್ಕೋಡಿ ಪಟ್ಟಣದ ಬಸವ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು. ಎಬಿವಿಪಿ ತಾಲೂಕು ಸಂಚಾಲಕ ಮಲ್ಲಿಕಾರ್ಜುನ ಈಟಿ ಮಾತನಾಡಿ, ರಾಜ್ಯ ಸರ್ಕಾರ ಕಳೆದ ಬಜೆಟ್‌ನಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ, ಈವರೆಗೆ ಉಚಿತ ಬಸ್‌ಪಾಸ್ ನೀಡಿಲ್ಲ.

ರಾಜ್ಯದಲ್ಲಿ ಬರಗಾಲ ಎದುರಾಗಿದ್ದರಿಂದ ವಿದಾರ್ಥಿಗಳು ಶುಲ್ಕ ಕಟ್ಟಲು ಪರದಾಡುವಂತಾಗಿದೆ. ಹಾಗಾಗಿ ರಾಜ್ಯ ಸರ್ಕಾರ ಕೂಡಲೇ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಖಾಸಗಿ ಕಾಲೇಜುಗಳ ಡೊನೇಷನ್ ಹಾವಳಿಯಿಂದಾಗಿ ಬಹಳಷ್ಟು ವಿದ್ಯಾರ್ಥಿಗಳು ಶಾಲಾ ಶುಲ್ಕ ಭರಿಸಲಾಗದೇ ಪರದಾಡುವಂತಾಗಿದೆ. ಅದಕ್ಕಾಗಿ ಸರ್ಕಾರ ವಿದ್ಯಾರ್ಥಿಗಳ ನೆರವಿಗೆ ಬರಬೇಕು ಎಂದು ಎಬಿವಿಪಿ ವಿದ್ಯಾರ್ಥಿ ಘಟಕದ ಸದಸ್ಯರು ಒತ್ತಾಯಿಸಿದರು.

ರಮೇಶ ಕಾಳನ್ನವರ, ಮಹಾದೇವ ಬಾನಿ, ಹಾಲಪ್ಪ ಮಾದಪ್ಪಗೋಳ, ಲಕ್ಷ್ಮಣ ಖಗ್ಗನ್ನವರ, ಪ್ರವೀಣ ಮಾಳಿ, ಅಕ್ಷಯ, ವಿನಾಯಕ,ಪ್ರಶಾಂತ ಹುಕ್ಕೇರಿ, ಸುಧಾಕರ ಪಾಟೀಲ ಹಾಗೂ ನೂರಾರು ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *