ಕೃಷ್ಣಾ ಹರಿವು ಇಳಿಕೆ, ಸೇತುವೆಗಳು ಸಂಚಾರಕ್ಕೆ ಮುಕ್ತ

ಚಿಕ್ಕೋಡಿ: ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದೆ. ಕೃಷ್ಣಾ ನದಿಗೆ 1.8 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಆಲಮಟ್ಟಿ ಜಲಾಶಯದ ಮೂಲಕ 1.45 ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.
ಕೃಷ್ಣಾ ನದಿಗೆ ಸೇರುವ ನೀರಿನ ಪ್ರಮಾಣಕ್ಕಿಂತ 40 ಸಾವಿರ ಕ್ಯೂಸೆಕ್ ನೀರನ್ನು ಹೊರಗೆ ಬಿಡುತ್ತಿರುವುದರಿಂದ ಕೃಷ್ಣಾ ನದಿ ನೀರಿನ ಮಟ್ಟ ಸುಮಾರು ಎರಡು ಅಡಿಗಳಷ್ಟು ಕಡಿಮೆಯಾಗಿದೆ.

ಚಿಕ್ಕೋಡಿ ತಾಲೂಕಿನಲ್ಲಿರುವ ಕೆಳಹಂತದ 8ರ ಪೈಕಿ 4 ಸೇತುವೆಗಳು ಸಂಚಾರಕ್ಕೆ ತೆರೆದುಕೊಂಡಿವೆ.
ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 87,751 ಸಾವಿರ ಕ್ಯೂಸೆಕ್ ಮತ್ತು ದೂಧಗಂಗಾ ನದಿಯಿಂದ 21 ಸಾವಿರ ಕ್ಯೂಸೆಕ್ ಸೇರಿ ಕೃಷ್ಣಾ ನದಿಗೆ ಗುರುವಾರ ಬೆಳಗ್ಗೆ ವರೆಗೆ 1.08 ಲಕ್ಷ ಕ್ಯೂಸೆಕ್ ನೀರು ಬರುತ್ತಿದೆ. ಹಿಪ್ಪರಗಿಯಿಂದ 1.17 ಲಕ್ಷ ಕ್ಯೂಸೆಕ್ ಹಾಗೂ ಆಲಮಟ್ಟಿಯಿಂದ 1.45 ಲಕ್ಷ ಕ್ಯೂಸೆಕ್ ನೀರು ಹರಿ ಬಿಡಲಾಗುತ್ತಿದೆ.