ಚಿಕ್ಕೋಡಿ ಜಿಲ್ಲೆ ರಚನೆಗೆ ಆಗ್ರಹ

ಚಿಕ್ಕೋಡಿ: ಭೂಸ್ವಾಧೀನ ಕಾಯ್ದೆ ರದ್ದತಿ, ಕೃಷ್ಣಾ ನದಿ ನೀರು ಒಡಂಬಡಿಕೆ, ಕರಗಾಂವ, ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ ಜಾರಿ, ಚಿಕ್ಕೋಡಿ ಕಂದಾಯ ಜಿಲ್ಲೆ ಘೋಷಣೆ ಸೇರಿ ಹಲವು ಬೇಡಿಕೆ ಈಡೇರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಚಿಕ್ಕೋಡಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಉಪವಿಭಾಗಾಧಿಕಾರಿ ಸೋಮನಾಥ ಗೆಣ್ಣೂರ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನಾಕಾರರ ಉದ್ದೇಶಿಸಿ ಮಾತನಾಡಿದ ರಾಜ್ಯ ರೈತ ಸಂಘದ ವಕ್ತಾರ ತ್ಯಾಗರಾಜ ಕದಂ, ಪದೇ ಪದೆ ರಾಜ್ಯ ಸರ್ಕಾರ ಉತ್ತರ ಕರ್ನಾಟಕದ ಬಗ್ಗೆ ತಾತ್ಸಾರ ಮನೋಭಾವ ತೋರುತ್ತಿದ್ದು, ರೈತರ ವಿಷಯದಲ್ಲಿ ಇದೇ ಧೋರಣೆ ಮುಂದುವರಿಸಿದರೆ ಉತ್ತರ ಕರ್ನಾಟಕ ಪ್ರತ್ಯೇಕತೆ ಅನಿವಾರ್ಯವಾದೀತು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ರೈತ ಸಂಘಟನೆಗಳು ಸಾಕಷ್ಟು ಪ್ರತಿಭಟನೆ ಮಾಡಿಕೊಂಡು ಬಂದಿದ್ದರೂ 30 ವರ್ಷಗಳಿಂದ ರೈತರ ಬೇಡಿಕೆಗಳನ್ನು ಪೂರೈಸಲು ರಾಜ್ಯ ಸರ್ಕಾರ ವಿಫಲವಾಗಿದೆ. ಅಲ್ಲದೆ ಕೇಂದ್ರ ಸರ್ಕಾರ ಜಾರಿಗೆ ತಂದ ಭೂಸ್ವಾಧೀನ ಕಾಯ್ದೆಯಿಂದ ರೈತರಿಗೆ ನಷ್ಟವಾಗಲಿರುವ ಬಗ್ಗೆ ವಿರೋಧ ಪಕ್ಷಗಳೇ ಈ ಯೋಜನೆ ರದ್ದುಗೊಳಿಸಿದ್ದವು. ಆದರೆ ಅದೇ ರೈತ ವಿರೋಧಿ ನೀತಿಯನ್ನು ರಾಜ್ಯ ಸರ್ಕಾರ ಜಾರಿಗೊಳಿಸುವ ಮೂಲಕ ರೈತರ ಮರಣ ಶಾಸನ ಬರೆಯಲು ಮುಂದಾಗಿದೆ ಎಂದು ರೈತ ಮುಖಂಡರು ಕಿಡಿ ಕಾರಿದರು.

ರಾಜ್ಯ ಅತಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯನ್ನು ವಿಭಜಿಸಿ ಚಿಕ್ಕೋಡಿ ಜಿಲ್ಲೆ ರಚನೆ ಮಾಡುವಂತೆ 3 ದಶಕಗಳಿಂದ ಹೋರಾಟ ನಡೆಸಲಾಗುತ್ತಿದ್ದರೂ ಸರ್ಕಾರ ಜಿಲ್ಲೆ ರಚನೆಗೆ ಮಾತ್ರ ಮುಂದಾಗುತ್ತಿಲ್ಲ. ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಚಿಕ್ಕೋಡಿ ಜಿಲ್ಲೆಗೆ ಪಣ ತೊಟ್ಟಿದ್ದರು. ಈಗ ಅವರಿಗೆ ಅವಕಾಶ ಒದಗಿಬಂದಿದೆ. ತಕ್ಷಣಕ್ಕೆ ಪಕ್ಷ ಭೇದ ಮರೆತು ಈ ಭಾಗದ ಜನಪ್ರತಿನಿಧಿಗಳು ಚಿಕ್ಕೋಡಿ ಜಿಲ್ಲಾ ರಚನೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ತಹಸೀಲ್ದಾರ್ ಡಾ. ಸಂತೋಷಕುಮಾರ ಬಿರಾದಾರ, ಲಕ್ಷ್ಮಣ ಹೊಸಟ್ಟಿ, ಶಂಕರ ಪಡೇದ, ಸತ್ತಿಗೌಡ ಪಾಟೀಲ, ಶಿವಾನಂದ ಬ್ಯಾಳಿ, ರಾಮಚಂದ್ರ ಹೊಳೆವ್ವಗೋಳ, ಮದುಕರ ಮಜಲಟ್ಟಿ, ರವಿ ಬಾಗವಾನ, ಮಂಜುನಾಥ ಪಾಟೀಲ, ಅಮೂಲ ನಾವಿ, ಮಹಾಂತೇಶ ನಾವಿ, ಸದಾಶಿವ ಪಾಟೀಲ, ಸುರೇಶ ಪಾಟೀಲ ಉಪಸ್ಥಿತರಿದ್ದರು.

ಪ್ರತ್ಯೇಕ ರಾಜ್ಯವಾದೀತು ಎಚ್ಚರ ಕಾವೇರಿ ಹೋರಾಟದಲ್ಲಿ ಸಕ್ರಿಯವಾಗಿರುವ ರಾಜ್ಯ ಸರ್ಕಾರ ಕೃಷ್ಣಾ ನದಿ ನೀರಿನ ಸಮಸ್ಯೆ ಬಂದಾಗ ತನಗೇನೂ ಸಂಬಂಧವಿಲ್ಲ ಎನ್ನುವಂತೆ ವರ್ತಿಸುವ ಮೂಲಕ ರಾಜ್ಯದ ಜನರಲ್ಲಿ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಎಂಬ ಭಾವನೆ ಬಿತ್ತುವ ಕೆಲಸ ಮಾಡುತ್ತಿದೆ.

ಉತ್ತರ ಕರ್ನಾಟಕದ ಜೀವನಾಡಿ ಆಗಿರುವ ಕೃಷ್ಣಾ ನದಿ ಬರಿದಾದ ಬಗ್ಗೆ ಆಡಳಿತ ಹಾಗೂ ವಿರೋಧ ಪಕ್ಷಗಳು ಕಾಟಾಚಾರಕ್ಕೆ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿ, ನಿಯೋಗ ಕೊಂಡೋಯ್ದು ಪ್ರಚಾರ ಪಡೆದುಕೊಂಡಿವೆಯೇ ಹೊರತು ಕೃಷ್ಣಾ ನದಿ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ.

ಇನ್ನಾದರೂ ಆಡಳಿತ ಹಾಗೂ ಪ್ರತಿಪಕ್ಷಗಳ ನಾಯಕರು ತಮ್ಮ ಪ್ರತಿಷ್ಠೆ ಬದಿಗಿಟ್ಟು ಜನರ-ಜಾನುವಾರುಗಳ ನೀರಿನ ಸಮಸ್ಯೆ ಪರಿಹರಿಸಲು ಮುಂದಾಗಬೇಕು. ಇಲ್ಲದಿದ್ದರೆ ರೈತ ಸಂಘಟನೆಗಳು ಉತ್ತರ ಕರ್ನಾಟಕ ಪ್ರತ್ಯೇಕತೆಗೆ ಜನಾಂದೋಲನ ನಡೆಸಕಾದೀತು ಎಚ್ಚರಿಕೆ ನೀಡಿದರು. ಜನರ ಬೇಡಿಕೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು.

Leave a Reply

Your email address will not be published. Required fields are marked *