ಮುಂದುವರಿದ ವರುಣನ ಅಬ್ಬರ: ಹಾಸನದ ದೇವಸ್ಥಾನಕ್ಕೆ ನುಗ್ಗಿದ ನೀರು

<< ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚಾರ ಸ್ಥಗಿತ, ಹಲವು ರೈಲು ಸಂಚಾರ ಸ್ಥಗಿತ >>

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಅಬ್ಬರ ದಿನೇ ದಿನೇ ಜೋರಾಗುತ್ತಿದ್ದು, ಹಲವೆಡೆ ಬಿರುಸಿನ ಮಳೆಯಾಗುತ್ತಿದೆ. ಇತ್ತ ಚಿಕ್ಕಮಗಳೂರು ಹಾಗೂ ಹಾಸನದಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಭಾರಿ ಮಳೆಗೆ ಸಕಲೇಶಪುರದ ಹೊಳೆಮಲ್ಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ನೀರು ನುಗ್ಗಿದೆ. 10 ವರ್ಷಗಳ ಹಿಂದೆ ದೇಗುಲಕ್ಕೆ ನೀರು ನುಗ್ಗಿತ್ತು ಎನ್ನಲಾಗಿದೆ. ಹಾಗೆಯೇ ಭಾರಿ ಮಳೆಯಿಂದ ಹೇಮಾವತಿ ನದಿ ಬಿರುಸಾಗಿ ಹರಿಯುತ್ತಿದ್ದು, ಒಳ ಹರಿವು 15 ಸಾವಿರ ಕ್ಯೂಸೆಕ್ ತಲುಪಿದೆ. ಅರಕಲಗೂಡಿನ ಬೇಕರಿ ಗೋಡೆಯೊಂದು ಕುಸಿದು ಬಿದ್ದಿದೆ. ರಸ್ತೆಯಲ್ಲಿ ಮಳೆ ನೀರು ನಿಂತುಕೊಂಡಿದ್ದು ವಾಹನ ಸವಾರರು ಪರದಾಡುವ ಸ್ಥಿತಿ ಬಂದೊರಗಿದೆ.

ಹಳಿ ಮೇಲೆ ಗುಡ್ಡ ಕುಸಿತ
ಸಕಲೇಶಪುರ ಸುಬ್ರಮಣ್ಯ ನಡುವೆ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದಿರುವ ಕಾರಣ ಯಶವಂತಪುರದಿಂದ ಕಾರವಾರಕ್ಕೆ ಹೊರಟಿದ್ದ ರೈಲನ್ನು ತಡೆ ಹಿಡಿಯಲಾಗಿದೆ. ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಮಾಡುತ್ತಿರುವ ರೈಲ್ವೆ ಇಲಾಖೆ ಅಧಿಕಾರಿಗಳು ಬಸ್​ನಲ್ಲಿ ಸಂಚರಿಸುವಂತೆ ಮನವಿ ಮಾಡಿದ್ದಾರೆ.

ಚಾರ್ಮಾಡಿ ಘಾಟ್​ನಲ್ಲಿಯೂ​ ಭಾರಿ ಮಳೆಯಿಂದ ವಾಹನ ಸಂಚಾರ ಸ್ಥಗಿತಗೊಂಡಿದ್ದು,‘ವಿಜಯವಾಣಿ’ ವರದಿಗೆ ಎಚ್ಚೆತ್ತು ತಹಸೀಲ್ದಾರ್ ಸ್ಥಳಕ್ಕೆ ದೌಡಾಯಿಸಿ ಕ್ರಮಕೈಗೊಂಡಿದ್ದಾರೆ.

ಬಿಸಿಲಿನ ಮಧ್ಯೆಯೂ ಕಲಬುರಗಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಜನರ ಮೊಗದಲ್ಲಿ ಸಂತಸ ಮೂಡಿಸಿದೆ.

ಕರಾವಳಿಯಲ್ಲೂ ಅಬ್ಬರ
ಕರಾವಳಿಯಲ್ಲಿಯೂ ಮಳೆ ಅಬ್ಬರಿಸಿದ್ದು, ಮಂಗಳೂರು-ಬೆಂಗಳೂರು ರೈಲು ಸಂಚಾರ ಸ್ಥಗಿತಗೊಂಡಿದೆ. ಹಾಸನ ಮಂಗಳೂರು ಹಳಿ ಮಾರ್ಗದಲ್ಲಿ ಎಡಕುಮೇರಿ ಗುಡ್ಡ ಸಹಿತ ಮೂರು ಕಡೆ ಮಣ್ಣು ಕುಸಿತವಾಗಿದೆ. ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಟಿಕೆಟ್ ಹಣ ಮರಳಿಸಿದೆ.

ತುಂಬಿದ ಭದ್ರೆ
ಚಿಕ್ಕಮಗಳೂರಿನ ಕುದುರೆಮುಖ ಸುತ್ತ ಮುತ್ತ ಮಳೆ ಹಿನ್ನೆಲೆಯಲ್ಲಿ ಭದ್ರ ನದಿ ಹರಿವು ಹೆಚ್ಚಳವಾಗಿದೆ. ನೆಲಮಟ್ಟದಿಂದ 40 ಅಡಿ ಎತ್ತರದಲ್ಲಿ ಭದ್ರ ನದಿ ಹರಿಯುತ್ತಿದ್ದು, ಕಳಸ ಹೆಬ್ಬಾಳ ಸೇತುವೆಯ ಮೇಲೆಯೂ ನೀರು ಹರಿಯುತ್ತಿದೆ. ಆದರೂ ವಾಹನ ಸವಾರರು ಸೇತುವೆ ಮೇಲೆ ಸಂಚಾರಿಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

 

 

 

 

 

 

 

 

 

Leave a Reply

Your email address will not be published. Required fields are marked *