ಕಸ್ತೂರಿ ರಂಗನ್ ವರದಿ ವಿರುದ್ಧ ಕೋರ್ಟ್​ಗೆ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಲಿ

ಚಿಕ್ಕಮಗಳೂರು: ಮಲೆನಾಡ ಜನರ ಹಿತ ಕಡೆಗಣಿಸಿ ಬಹುರಾಷ್ಟ್ರೀಯ ಕಂಪನಿಗಳ ಆಣತಿಯಂತೆ ಸಿದ್ಧಗೊಂಡಿರುವ ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರ ಅನುಷ್ಠಾನ ಮಾಡಬಾರದು ಎಂದು ಕುದುರೆಮುಖ ಮೂಲನಿವಾಸಿಗಳು ಮತ್ತು ಸುತ್ತಮುತ್ತಲ ಗ್ರಾಮಸ್ಥರ ಹಿತರಕ್ಷಣಾ ವೇದಿಕೆ ಸಂಚಾಲಕ ಕಲ್ಕುಳಿ ವಿಠಲ್ ಹೆಗ್ಡೆ ಆಗ್ರಹಿಸಿದರು.

ಸುಪ್ರೀಂ ಕೋರ್ಟ್ ಹಸಿರುಪೀಠ ಕಸ್ತೂರಿ ರಂಗನ್ ವರದಿಯನ್ನು ಆರು ತಿಂಗಳೊಳಗೆ ಜಾರಿಗೊಳಿಸುವಂತೆ ನಿರ್ದೇಶಿಸಿದೆ. ಆದರೆ ಸೂಕ್ತ ಆಧಾರಗಳೊಂದಿಗೆ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ವರದಿ ಸಿದ್ಧಪಡಿಸಿದವರಿಗೆ ಮಲೆನಾಡ ಜನಜೀವನದ ಅರಿವಿಲ್ಲ. ಮಲೆನಾಡನ್ನು ಆಕಾಶದಿಂದ ನೋಡಿದ ಕಸ್ತೂರಿ ರಂಗನ್ ಈ ವರದಿ ತಯಾರು ಮಾಡಿದ್ದಾರೆ. ಈ ವರದಿ ಆಧರಿಸಿ ಸುಪ್ರೀಂ ಕೋರ್ಟ್ ಹಸಿರುಪೀಠ ಅನುಷ್ಠಾನ ಮಾಡುವಂತೆ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ವರದಿ ಅನುಷ್ಠಾನ ಮಾಡಿದರೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂದು ಎಚ್ಚರಿಸಿದರು.

ಕುದುರೆಮುಖದಲ್ಲಿ ಗಣಿಗಾರಿಕೆ ಸ್ಥಗಿತವಾದ ನಂತರ ನೂರಾರು ಕಾರ್ವಿುಕ ಕುಟುಂಬಗಳು ಅತಂತ್ರವಾಗಿವೆ. ಇಲ್ಲಿ 3,500 ಎಕರೆ ಕಂದಾಯ ಭೂಮಿಯಿದೆ. ಈ ಪೈಕಿ 1,657 ಎಕರೆಯಲ್ಲಿ ಹುಬ್ಬಳ್ಳಿ-ಅಂಕೋಲ ರೈಲು ಮಾರ್ಗಕ್ಕೆ ಪರಿಹಾರವಾಗಿ ಅರಣ್ಯ ಬೆಳೆಸಲು ನೀಡಲು ನಿರ್ಧರಿಸಲಾಗಿದೆ. ಇದನ್ನು ಬೇರೆ ಜಿಲ್ಲೆಗೆ ಕೊಡುವ ಮೊದಲು ಇಲ್ಲಿನ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳ ಅಭಿಪ್ರಾಯ ಕೇಳಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕುದುರೆಮುಖ ಗಣಿಗಾರಿಕೆ ಕಂದಾಯ ಜಮೀನು ಈ ಜಿಲ್ಲೆಯಲ್ಲಿರುವ ಸಂತ್ರಸ್ತರಿಗೆ ವಿನಿಯೋಗವಾಗಬೇಕು. ಹುಬ್ಬಳ್ಳಿ-ಅಂಕೋಲ ರೈಲು ಮಾರ್ಗ ಬಳಕೆಯಾದ ಜಾಗಕ್ಕೆ ಪರ್ಯಾಯವಾಗಿ ಉತ್ತರ ಕರ್ನಾಟಕದ ಭೂಮಿ ನೀಡಬೇಕು. ಗಣಿಗಾರಿಕೆ ಪ್ರದೇಶದ ಕಟ್ಟಡಗಳನ್ನು ತೆರವು ಮಾಡಬಾರದು. ಈ ಜಾಗದಲ್ಲಿ ಅತ್ಯುತ್ತಮ ವಿಶ್ವವಿದ್ಯಾಲಯ, ಶಾಲಾಕಾಲೇಜು ಸ್ಥಾಪಿಸಿ ಅಧ್ಯಯನ ಕೇಂದ್ರ ಮಾಡಬೇಕು ಎಂದು ಹೇಳಿದರು.

ಪ್ರಾಯೋಜಕ ಹೋರಾಟಗಾರರು:

ಪರಿಸರ ಹೋರಾಟಗಾರರಲ್ಲಿ ಎರಡು ವಿಧವಿದ್ದು, ಬಹುರಾಷ್ಟ್ರೀಯ ಕಂಪನಿಗಳ ಸಿಎಸ್​ಆರ್ ಹಣದಿಂದ ಕೆಲವರು ಪರಿಸರ ಹೋರಾಟ ಮಾಡುತ್ತಿದ್ದು, ಅಂಥವರು ಈ ಜಿಲ್ಲೆಯಲ್ಲಿದ್ದಾರೆ ಎಂದು ಪರಿಸರ ಹೋರಾಟಗಾರ ಕಲ್ಕುಳ್ಳಿ ವಿಠಲ್ ಹೆಗಡೆ ದೂರಿದರು. ಬಹುರಾಷ್ಟ್ರೀಯ ಕಂಪನಿಗಳ ಸಾಮಾಜಿಕ ಚಟುವಟಿಕೆಗೆ ಇಂತಿಷ್ಟು ಹಣ ಮೀಸಲಿಡಬೇಕು. ಇಂಥ ಹಣದ ಲಾಭ ಪಡೆದು ಕೆಲ ಹೋರಾಟಗಾರರು ವರದಿ ಜಾರಿಯಾಗಬೇಕೆಂದು ವಾದಿಸುತ್ತಿದ್ದಾರೆ ಎಂದರು.

ಕಸ್ತೂರಿ ರಂಗನ್ ವರದಿ ಪ್ರಕಾರ ಮಲೆನಾಡಿನ ಜನ ಯಾವುದೆ ಕೆಲಸ ಮಾಡಲು ಪರಿಸರ ಹಾಗೂ ಅರಣ್ಯ ಇಲಾಖೆ ಅನುಮತಿ ಪಡೆಯಬೇಕು. ಕೃಷಿಗೆ ಯಾವುದೆ ರಾಸಾಯನಿಕ ಬಳಸುವಂತಿಲ್ಲ. ಫಾರಂ ನಂ. 50, 53 ಹಾಗೂ 94 ಸಿ ಅರ್ಜಿ ಸಲ್ಲಿಸಿದ ಸಾವಿರಾರು ಮಲೆನಾಡಿಗರು ಅತಂತ್ರರಾಗುವರು.

| ಕಲ್ಕುಳಿ ವಿಠ್ಠಲ್ ಹೆಗ್ಡೆ, ಪರಿಸರ ಹೋರಾಟಗಾರ