ಪಿಯುಸಿ ಮಾಡಿ ಎಂಎ ಪ್ರಮಾಣಪತ್ರ ಕೇಳಿದರೆ ಸಿಗುತ್ತಾ?

ಚಿಕ್ಕಬಳ್ಳಾಪುರ: ಪಿಯುಸಿ ಮಾಡಿ ಎಂಎ, ಡಿಗ್ರಿ ಪ್ರಮಾಣಪತ್ರ ಬೇಕೆಂದರೆ ಸಿಗುತ್ತದಾ? ಪ್ರಮಾಣಪತ್ರ ಬೇಕು ಅಂದರೆ ಅದಕ್ಕಾಗಿ ಓದಬೇಕಾಗುತ್ತದೆ ಎಂದು ಶಾಸಕ‌ ಕೆ.ಸುಧಾಕರ್​​ಗೆ ನೂತನ ಕೃಷಿ ಸಚಿವ ಎನ್​.ಎಚ್.ಶಿವಶಂಕರರೆಡ್ಡಿ ಟಾಂಗ್ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಡ್ಡದಾರಿಯ ರಾಜಕಾರಣ ಬಹಳ ದಿನ ಉಳಿಯುವುದಿಲ್ಲ. ನಿನ್ನೆ ಮೊನ್ನೆ ಬಂದವರಿಗೆ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ. ಅವರು ಎಲ್ಲಿಂದ ಬಂದವರು ಅಂತ ಮೊದಲು ಆತ್ಮಾವಲೋಕನ‌ ಮಾಡಿಕೊಳ್ಳಲಿ. ರಾಜಕಾರಣದಲ್ಲಿ ಆಸೆ ಇರಬೇಕು, ದುರಾಸೆ ಇರಬಾರದು ಎಂದರು ಸುಧಾಕರ್​ ವಿರುದ್ಧ ವಾಗ್ದಾಳಿ ನಡೆಸಿದರು.

ಅಧಿಕಾರ ಬೇಗ ಸಿಗಬೇಕು ಎಂಬ ಆತುರ ಇರಬಾರದು. ಹಣಬಲದಿಂದ ರಾಜಕಾರಣ ಮಾಡಿದರೆ ಏನಾಗುತ್ತೆ ಎಂಬುದು ಗೊತ್ತಿರುವ ವಿಷಯ. ಡೋಂಗಿ ರಾಜಕಾರಣ ಬಹಳ ದಿನ ಉಳಿಯಲು ಸಾಧ್ಯವಿಲ್ಲ. ನಾನು 5 ಬಾರಿ ಶಾಸಕನಾಗಿದ್ದೇನೆ. ಹಾಗಾಗಿ ಸಚಿವ ಸ್ಥಾನ ನೀಡಿದ್ದಾರೆ. ಇವರಿಂದ ನಾನು ಪಾಠ ಕಲಿಯಬೇಕಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.

ಚಿಕ್ಕಬಳ್ಳಾಪುರದ ಶಾಸಕ ಕೆ.ಸುಧಾಕರ್​ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ, ಸಚಿವ ಸ್ಥಾನ ಪಡೆದವರು ಪಕ್ಷದ ವಿರೋಧಿ ಎಂಬ ಹೇಳಿಕೆ ಕೊಟ್ಟಿದ್ದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *