ಪ್ರಯಾಗ್‌ರಾಜ್ ಕುಂಭಮೇಳ ಹಿನ್ನೆಲೆ ತಾತ್ಕಾಲಿಕ ಬಂದ್ ಮತ್ತಷ್ಟು ಗಾಡಿಗಳ ಓಡಾಟಕ್ಕೆ ಬೇಡಿಕೆ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಡುವೆ ಸಂಚರಿಸುತ್ತಿದ್ದ ರೈಲ್ವೆ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ಕುಂಭ ಮೇಳಕ್ಕೆ ನಿಯೋಜನೆ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಕಂಟೋನ್ಮೆಂಟ್ ಮಾರ್ಗದಲ್ಲಿ ಸಂಚರಿಸುತ್ತಿದ್ದ ರೈಲು ಸೇವೆ ಜ.20 ರಿಂದ ಲಭ್ಯವಿರುವುದಿಲ್ಲ ಎಂದು ಸಹಾಯಕ ರೈಲ್ವೆ ಸಾರಿಗೆ ವ್ಯವಸ್ಥಾಪಕ ಬಿ.ಎಲ್.ಶಿವಕುಮಾರ್ ತಿಳಿಸಿದ್ದಾರೆ.
06531 ಸಂಖ್ಯೆಯ ರೈಲು ಬೆಂಗಳೂರು ವಲಯದಿಂದ ಬೆಳಗ್ಗೆ 5.10ಕ್ಕೆ ಬಿಟ್ಟು ಬೆಳಗ್ಗೆ 6.55ಕ್ಕೆ ಚಿಕ್ಕಬಳ್ಳಾಪುರ, ಇದೇ ರೈಲು (ಸಂಖ್ಯೆ 06535) ಬೆಳಗ್ಗೆ 8.20ಕ್ಕೆ ಚಿಕ್ಕಬಳ್ಳಾಪುರ ಬಿಟ್ಟು ಬೆಂಗಳೂರು ವಲಯಕ್ಕೆ ಬೆಳಗ್ಗೆ 10.40ಕ್ಕೆ, 06536 ಸಂಖ್ಯೆಯ ರೈಲು ಮಧ್ಯಾಹ್ನ 12.20ಕ್ಕೆ ಬೆಂಗಳೂರು ವಲಯ ಬಿಟ್ಟು ಚಿಕ್ಕಬಳ್ಳಾಪುರಕ್ಕೆ ಮಧ್ಯಾಹ್ನ 1.40ಕ್ಕೆ, 06537 ಸಂಖ್ಯೆಯ ರೈಲು ಚಿಕ್ಕಬಳ್ಳಾಪುರದಿಂದ 2ಕ್ಕೆ ಬಿಟ್ಟು ಬೆಂಗಳೂರು ವಲಯಕ್ಕೆ ಮಧ್ಯಾಹ್ನ 3.15ಕ್ಕೆ, 06538 ಸಂಖ್ಯೆಯ ರೈಲು ಸಂಜೆ 4ಕ್ಕೆ ಬೆಂಗಳೂರು ವಲಯ ಬಿಟ್ಟು ಚಿಕ್ಕಬಳ್ಳಾಪುರಕ್ಕೆ ಸಂಜೆ 6ಕ್ಕೆ, 06532 ಸಂಖ್ಯೆಯ ರೈಲು ರಾತ್ರಿ 6.30ಕ್ಕೆ ಬಿಟ್ಟು ಬೆಂಗಳೂರು ವಲಯವನ್ನು ರಾತ್ರಿ 9 ಕ್ಕೆ ಸೇರುತ್ತಿತ್ತು.
ತಾತ್ಕಾಲಿಕ ಸ್ಥಗಿತ
ಕಳೆದ ಲೋಕಸಭಾ ಚುನಾವಣೆಯ ಮೊದಲು ರೈಲ್ವೆ ಸೇವೆ ಸೌಲಭ್ಯವನ್ನು ಒದಗಿಸಿದ್ದು ರಾಜಧಾನಿಯಿಂದ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೂ ಬರುತ್ತಿದ್ದ ರೈಲುಗಳ ಓಡಾಟವನ್ನು ಚಿಕ್ಕಬಳ್ಳಾಪುರದವರೆಗೂ ವಿಸ್ತರಿಸಲಾಗಿತ್ತು. ಇದರಿಂದ ಈ ಭಾಗದಲ್ಲಿ ಬೆಂಗಳೂರಿಗೆ ಕಡಿಮೆ ದರದಲ್ಲಿ ಪಯಣಿಸಲು ಪ್ರಯಾಣಿಕರಿಗೆ ಅನುಕೂಲವಾಗಿದ್ದು ಈಗ ಭಾನುವಾರ ರಜಾ ದಿನ ಹೊರತುಪಡಿಸಿ ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಶಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ ಮತ್ತು ಕೋಲಾರದ ನಡುವೆ ಎರಡು ರೈಲುಗಳು ಸಂಚರಿಸುತ್ತಿವೆ. ಬೆಳಗ್ಗೆ ಒಂದು ರೈಲು ಕೋಲಾರ ಮತ್ತು ಮತ್ತೊಂದು ರೈಲು ಬೆಂಗಳೂರಿನಿಂದ ಓಡಾಡುತ್ತಿವೆ.
ರೈಲ್ವೆ ಸೇವೆಯ ನಿರೀಕ್ಷೆ
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವ ಚಿಕ್ಕಬಳ್ಳಾಪುರ ಭಾಗಕ್ಕೆ ರೈಲ್ವೆ ಸೌಕರ್ಯಗಳ ಹೆಚ್ಚಳದ ಅಗತ್ಯ ಇದೆ. ಈಗಾಗಲೇ ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ನಗರ ಮಾರ್ಗವಾಗಿ 1.10 ಕೋಟಿ ರೂ. ವೆಚ್ಚದಲ್ಲಿ ನೂತನ ಹಳಿ ನಿರ್ಮಾಣದ ಅಂತಿಮ ಸರ್ವೇ ಕಾರ್ಯವನ್ನು ಕೇಂದ್ರ ರೈಲ್ವೆ ಇಲಾಖೆ ಕೈಗೊಂಡಿದೆ. ಇದರ ಅನುಮೋದಿತ ವರದಿ ಇನ್ನೂ ಹೊರಬರಬೇಕಾಗಿದೆ. ಮತ್ತೊಂದೆಡೆ ಚಿಕ್ಕಬಳ್ಳಾಪುರ- ಬಾಗೇಪಲ್ಲಿ-ಪುಟ್ಟಪರ್ತಿ, ಚಿಕ್ಕಬಳ್ಳಾಪುರ, ಚಿಂತಾಮಣಿ ಮತ್ತು ಮದನಪಲ್ಲಿ ರೈಲು ಸಂಚಾರ ಪ್ರಾರಂಭವು ಈ ಭಾಗದ ಪ್ರಮುಖ ಬೇಡಿಕೆಯಾಗಿದೆ.
ಈ ಭಾಗದಿಂದ ಜನರು ಉದ್ಯೋಗಕ್ಕಾಗಿ ಬೆಂಗಳೂರು, ಯಲಹಂಕ ಸೇರಿದಂತೆ ವಿವಿಧ ಭಾಗಗಳಿಗೆ ಪ್ರಯಾಣಿಸುತ್ತಿರುತ್ತಾರೆ. ರಾಜಧಾನಿಯಲ್ಲಿನ ಕಚೇರಿಗಳಲ್ಲಿ ಕೆಲಸ, ಆಸ್ಪತ್ರೆ ಸೇವೆ ನಾನಾ ಕಾರಣಗಳಿಗೆ ಪ್ರಯಾಣಿಸಲು ತುಂಬಾ ಕಡಿಮೆ ದರದ ರೈಲ್ವೆ ಸೇವೆಯನ್ನು ನೆಚ್ಚಿಕೊಳ್ಳಲಾಗಿದೆ. ಕೇವಲ 20 ರೂ.ಗೆ ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ತೆರಳಬಹುದು. ಇನ್ನು ಬಸ್‌ಗಳಲ್ಲಿ ಟಿಕೆಟ್ ಶುಲ್ಕ ದುಬಾರಿ. ಇದಕ್ಕೆ ರೈಲುಗಳ ಸಂಚಾರ ವ್ಯವಸ್ಥೆಯನ್ನು ಒದಗಿಸುವುದರ ಬಗ್ಗೆ ಒತ್ತಾಯಗಳು ಕೇಳಿ ಬರುತ್ತಿವೆ.