ಚಿಕ್ಕಜಾಜೂರಲ್ಲಿ ಗರುಡಗಂಬ ಪ್ರತಿಷ್ಠಾಪನೆ

ಚಿಕ್ಕಜಾಜೂರು: ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಗರುಡಗಂಬ ಹಾಗೂ ಪಾದಗಟ್ಟೆ ಪ್ರತಿಷ್ಠಾಪನೆ ಕಾರ್ಯ ಜರುಗಿತು.

22 ಅಡಿ ಎತ್ತರದ ಗರುಡಗಂಭ ಮತ್ತು ಪಾದಗಟ್ಟೆ ಪ್ರತಿಷ್ಠಾಪನೆ ಬೆಂಗಳೂರಿನ ಶ್ರೀನಿವಾಸಿ ಗುರೂಜಿ ನೇತೃತ್ವದ ತಂಡ ನೆರವೇರಿಸಿತು.

ದೇವಸ್ಥಾನದಲ್ಲಿ ನವಗ್ರಹ, ಸುದರ್ಶನ ಹಾಗೂ ವಾಸ್ತು ಹೋಮ, ಪೂರ್ಣಾಹುತಿ ಸೇರಿ ವಿವಿಧ ಧಾರ್ಮಿಕ ಕಾರ್ಯಗಳು ಉಮಾಶಂಕರ್ ಶರ್ಮ ತಂಡದಿಂದ ಜರುಗಿತು.

ಸಂಜೆ ಕಳಸವನ್ನು ಬೆಳ್ಳಿ ರಥದಲ್ಲಿ ಇರಿಸಿ ಉತ್ಸವ ನಡೆಸಿದರು. ಅರಸನಘಟ್ಟದ ಬಸವೇಶ್ವರಸ್ವಾಮಿ, ಪಾಡಿಗಟ್ಟೆ ವೆಂಕಟೇಶ್ವರಸ್ವಾಮಿ, ಹನುಮನಹಳ್ಳಿ ಮಸಿಯಮ್ಮ, ಚಿಕ್ಕಂದವಾಡಿ ಓಬಳೇಶ್ವರಸ್ವಾಮಿ, ಕೇಶವಪುರದ ಕೆಂಚಾಂಬಾದೇವಿ, ಗುಂಜಿಗನೂರು ಆಂಜನೇಯಸ್ವಾಮಿ, ವೀರಭದ್ರಸ್ವಾಮಿ, ಬನಶಂಕರಿದೇವಿ ಉತ್ಸವಮೂರ್ತಿಗಳ ಮೆರವಣಿಗೆ ನಡೆಯಿತು.

ಮೆರವಣಿಗೆಯಲ್ಲಿ ಕುಂಭ ಕಳಸ ಹೊತ್ತ 101 ಮಹಿಳೆಯರು, ಚಂಡಿವಾದ್ಯ, ನಾಸಿಕ್‌ಡೂಲ್, ವೀರಗಾಸೆ, ತಮಟೆ, ಉರುಮೆ, ಡೊಳ್ಳು, ನಾದಸ್ವರ, ಬೊಂಬೆ ಕುಣಿತ ತಂಡಗಳು ಭಾಗವಹಿಸಿದ್ದವು.

ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯದ ಖ್ಯಾತ ಚಲನಚಿತ್ರ ನಟರು, ಗಾಯಕರು, ಹಾಸ್ಯ ಕಲಾವಿದರು, ನೃತ್ಯಪಟುಗಳಿಂದ ಮನರಂಜನೆ ಕಾರ್ಯಕ್ರಮ ನಡೆಯಿತು.