More

  ಚಿಗುರಿದ ಬರ್ಮುಡಾ ಮೆಕ್ಸಿಕನ್ ಗ್ರಾಸ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರಿಗೆ ತೋಟಗಾರಿಕೆ ಇಲಾಖೆ ನೆರವಿನ ಹಸ್ತ

  ಶಿವರಾಜ ಎಂ. ಬೆಂಗಳೂರು
  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಲವು ಕಡೆಗಳಲ್ಲಿ ಬರ್ಮುಡಾ ಮೆಕ್ಸಿಕನ್ ಗ್ರಾಸ್ (ವಿನ್ಯಾಸದ ಹುಲ್ಲು) ಬೆಳೆಯಲು ರೈತರು ಉತ್ಸುಕತೆ ತೋರುತ್ತಿದ್ದಾರೆ.

  ಹೌದು! ರಾಗಿ, ದ್ರಾಕ್ಷಿ ಮತ್ತಿತರ ಬೆಳೆಗಳಿಗೆ ಪರ‌್ಯಾಯವಾಗಿ ಈಗ ಬರ್ಮುಡಾ ಮೆಕ್ಸಿಕನ್ ಗ್ರಾಸ್ ಬೆಳೆಯೂ ಮುಂಚೂಣಿಗೆ ಬರುತ್ತಿದೆ. ಎಕರೆಗಟ್ಟಲೆ ಜಮೀನಿನಲ್ಲಿ ಅಚ್ಚ ಹಸಿರಿನ ಮೆಕ್ಸಿಕನ್ ಗ್ರಾಸ್ ಬೆಳೆ ಬೆಳೆಯಲಾಗುತ್ತಿದ್ದು, ಪ್ರಮುಖ ತೋಟಗಾರಿಕೆ ಬೆಳೆಯಾಗಿಯೂ ಗುರುತಿಸಿಕೊಳ್ಳುತ್ತಿದೆ.

  ಲಾಭದಾಯಕ ಉದ್ದಿಮೆ: ವರ್ಷಕ್ಕೆ ಎರಡರಿಂದ ಮೂರು ಬಾರಿ ಬೆಳೆಯಲು ಅವಕಾಶವಿದ್ದು, ಸುಮಾರು 1 ಎಕರೆ ಜಮೀನಿನಲ್ಲಿ ವರ್ಷಕ್ಕೆ ಸುಮಾರು 2 ಲಕ್ಷ ರೂ. ಲಾಭಗಳಿಸಬಹುದು ಎಂಬುದು ರೈತರ ಅಭಿಪ್ರಾಯ. ಕೂಲಿ, ಗೊಬ್ಬರ, ನಿರ್ವಹಣೆ ವೆಚ್ಚ ಕಳೆದರೂ ವರ್ಷಕ್ಕೆ ಲಕ್ಷ ರೂಪಾಯಿ ಲಾಭಕ್ಕೇನೂ ಕೊರತೆ ಇಲ್ಲ ಎಂಬ ಮಾತು ಕೇಳಿಬರುತ್ತಿದೆ.

  ಹನಿ ನೀರಾವರಿ: ಈ ಬೆಳೆಗೆ ಹನಿ ನೀರಾವರಿ ಬಳಕೆ ಸಾಮಾನ್ಯವಾಗಿದೆ. ಇತರ ಬೆಳೆಗಳಂತೆ ನೀರು ಕಟ್ಟುವ ಅವಶ್ಯಕತೆ ಇಲ್ಲ. ಕಡಿಮೆ ನೀರಿನ ಬಳಕೆ ಮೂಲಕ ಹೆಚ್ಚು ಸಲು ಪಡೆಯಬಹುದು ಎಂಬುದು ರೈತರ ಅಭಿಮತವಾಗಿದೆ.

  ಇಂಚಿಗೆ ಬೆಲೆ: ಎಕರೆಗಟ್ಟಲೆ ಹುಲ್ಲು ಬೆಳೆದರೂ ಇದರ ಮಾರಾಟಕ್ಕೆ ಇಂಚನ್ನು ಮಾನದಂಡವಾಗಿ ಬಳಸಲಾಗುತ್ತದೆ. ಇಷ್ಟು ಇಂಚಿಗೆ ಇಂತಿಷ್ಟು ಎಂಬ ಲೆಕ್ಕಾಚಾರದಲ್ಲಿ ಹುಲ್ಲು ಮಾರಾಟವಾಗುತ್ತದೆ. ಗ್ರಾಮಾಂತರ ಜಿಲ್ಲೆಯಿಂದ ಕೇರಳ, ತಮಿಳುನಾಡು ಹಾಗೂ ಆಂಧ್ರ ಪ್ರದೇಶದ ಭಾಗಗಳಿಗೆ ರವಾನೆಯಾಗುತ್ತಿದ್ದು, ಆ ರಾಜ್ಯಗಳಲ್ಲಿ ಗ್ರಾಮಾಂತರ ಜಿಲ್ಲೆಯ ಬರ್ಮುಡಾ ಮೆಕ್ಸಿಕನ್ ಗ್ರಾಸ್‌ಗೆ ಹೆಚ್ಚಿನ ಬೇಡಿಕೆ ಇದೆ ಎನ್ನಲಾಗಿದೆ. ಇದು ಅಲ್ಲದೆ ಈ ಕೃಷಿಯಲ್ಲಿ ಮಹಿಳಾ ಕೂಲಿ ಕಾರ್ಮಿಕರೇ ಹೆಚ್ಚು ತೊಡಗಿಸಿಕೊಂಡಿರುವುದು ವಿಶೇಷ.

  ಎಲ್ಲೆಲ್ಲಿ ಬಳಕೆ: ವಿಲ್ಲಾಗಳು, ಶಾಲಾ-ಕಾಲೇಜು, ಉದ್ಯಾನ, ವಸತಿ ಸಮುಚ್ಚಯ, ಆಸ್ಪತ್ರೆ, ಕಂಪನಿ ಸೇರಿ ಕಟ್ಟಡಗಳ ಹೊರಾಂಗಣದಲ್ಲಿ ಕಂಡುಬರುವ ಲಾನ್‌ಗಳಿಗೆ ಬರ್ಮುಡಾ ಮೆಕ್ಸಿಕನ್ ಗ್ರಾಸ್ ಬಳಸಲಾಗುತ್ತಿದೆ. ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಂತಿರುವ ಜಿಲ್ಲೆಯಾದ್ದರಿಂದ ನಗರ ಪ್ರದೇಶದಲ್ಲಿ ಈ ಹುಲ್ಲಿಗೆ ಹೆಚ್ಚಿನ ಬೇಡಿಕೆ ಇದೆ.

  ತೋಟಗಾರಿಕೆ ಇಲಾಖೆ ನೆರವು: ರೈತರಿಗೆ ಲಾಭದಾಯಕ ಉದ್ದಿಮೆಯಾಗುವತ್ತ ಹೆಜ್ಜೆ ಇಟ್ಟಿರುವ ಬರ್ಮುಡಾ ಮೆಕ್ಸಿಕನ್ ಗ್ರಾಸ್ ಬೆಳೆಯಲು ತೋಟಗಾರಿಕೆ ಇಲಾಖೆಯೂ ನೆರವು ನೀಡಲು ಮುಂದಾಗಿದೆ. ಸಲು ಕಟಾವು ಮತ್ತಿತರ ಉಪಕರಣ ನೀಡಲು ಇಲಾಖೆ ಸಿದ್ಧವಿದೆ.
  ಆರ್ಡರ್ ಪಡೆದು ಬೆಳೆದರೆ ಒಳಿತು:
  ಲಾಭದಾಯಕ ಉದ್ದಿಮೆಯಾದರೂ ಬೇಡಿಕೆ ಆಧರಿಸಿ ಹುಲ್ಲು ಬೆಳೆಯುವುದು ಉತ್ತಮ ಎಂಬುದು ತೋಟಗಾರಿಕೆ ಇಲಾಖೆ ಹಿರಿಯ ಅಧಿಕಾರಿಗಳ ಸಲಹೆಯಾಗಿದೆ. ಹುಲ್ಲನ್ನು ಹೆಚ್ಚು ದಿನ ಇಟ್ಟರೆ ಕೆಡುವ ಸಾಧ್ಯತೆ ಇರುತ್ತದೆ. ಇದರಿಂದ ಆರ್ಥಿಕ ನಷ್ಟವುಂಟಾಗುವುದರಿಂದ ಬೇಡಿಕೆ ಆಧರಿಸಿ ಹುಲ್ಲು ಬೆಳೆಯುವತ್ತ ರೈತರು ನಿಗಾವಹಿಸಬೇಕು ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಹಾಂತೇಶ್ ಮುರಗೋಡು ಹೇಳಿದ್ದಾರೆ.

  ದೇವನಹಳ್ಳಿ ತಾಲೂಕು ಕುಂದಾಣ ಹೋಬಳಿ ಬಳಿ ಬರ್ಮುಡಾ ಮೆಕ್ಸಿಕನ್ ಗ್ರಾಸ್ ಬೆಳೆಯಲಾಗುತ್ತಿದೆ. ಇದೊಂದು ಹೊಸ ಪರಿಕಲ್ಪನೆಯಾಗಿದೆ. ರೈತರಿಗೆ ಲಾಭದಾಯಕ ಉದ್ಯಮವೂ ಆಗಿದೆ. ಇದಕ್ಕೆ ತೋಟಗಾರಿಕೆ ಇಲಾಖೆಯಿಂದ ಅಗತ್ಯ ನೆರವು ನೀಡಲಾಗುವುದು.
  ಮಹಾಂತೇಶ್ ಮುರಗೋಡು, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ, ಬೆಂ.ಗ್ರಾಮಾಂತರ

  ಇದೇ ಮೊದಲ ಬಾರಿಗೆ ಈ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದೇವೆ. ಆದಾಯವೂ ಉತ್ತಮವಾಗಿದೆ. ಬೆಂಗಳೂರು ಸೇರಿ ನೆರೆ ರಾಜ್ಯದಿಂದಲೂ ಬೇಡಿಕೆ ಇದೆ. ಹನಿ ನೀರಾವರಿ ಮೂಲಕ ಸಲು ಪಡೆಯಲಾಗುತ್ತಿದೆ.
  ನಾರಾಯಣಸ್ವಾಮಿ, ರೈತ ಕುಂದಾಣ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts