ಧಾರವಾಡ ಹೊಸ ಬಸ್ ನಿಲ್ದಾಣವರೆಗೆ ಚಿಗರಿ

ಧಾರವಾಡ: ಧಾರವಾಡ ಮಿತ್ರ ಸಮಾಜದವರೆಗೆ ಮಾತ್ರ ಸಂಚರಿಸುತ್ತಿದ್ದ ಬಿಆರ್​ಟಿಸ್ ‘ಚಿಗರಿ’ ಬಸ್​ಗಳ ಸೇವೆಯನ್ನು ಶುಕ್ರವಾರದಿಂದ ಇಲ್ಲಿನ ಹೊಸ ಬಸ್ ನಿಲ್ದಾಣದಿಂದ ಪ್ರಾರಂಭಿಸಲಾಗಿದೆ.  ಹೊಸ ಬಸ್ ನಿಲ್ದಾಣದಿಂದ ತಡೆರಹಿತ ಸೇರಿ ಒಟ್ಟು 10 ಬಸ್​ಗಳ ಸಂಚಾರ ಪ್ರಾರಂಭ ವಾಗಿದ್ದು, ಬಿಆರ್​ಟಿಎಸ್ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಚಾಲನೆ ನೀಡಿದರು.

ನಂತರ ಮಾತನಾಡಿ, ಈಗಾಗಲೇ ಅವಳಿನಗರ ಮಧ್ಯೆ 45 ಬಸ್​ಗಳು ಸಂಚರಿಸುತ್ತಿವೆ. ಹೊಸ ಬಸ್ ನಿಲ್ದಾಣದಿಂದ 10 ಬಸ್​ಗಳ ಸಂಚಾರ ಪ್ರಾರಂಭಿಸಲಾಗಿದೆ. ಇದರಿಂದ 55 ಬಸ್​ಗಳ ಸಂಚಾರ ಪ್ರಾರಂಭವಾಗಿದ್ದು, ಜ. 1ರೊಳಗೆ 100 ಬಸ್​ಗಳ ಸೇವೆ ಪ್ರಾರಂಭಿಸುವ ಗುರಿ ಹೊಂದಲಾಗಿದೆ. ಬಿಆರ್​ಟಿಎಸ್ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದ್ದು, ಅಲ್ಲಲ್ಲಿ ಫುಟ್​ಪಾತ್ ಕಾಮಗಾರಿ ಮಾತ್ರ ಬಾಕಿ ಉಳಿದಿವೆ. ಸಿಗ್ನಲ್​ಗಳು ಸದ್ಯ ಯಥಾ ಪ್ರಕಾರ ನಡೆಯಲಿವೆ. ಮುಂದಿನ ದಿನಗಳಲ್ಲಿ ಅವುಗಳನ್ನು ಬದಲಾಯಿಸಿ ಬೇರೆ ವ್ಯವಸ್ಥೆ ಮಾಡಲಾಗುವುದು. ಇದಲ್ಲದೆ ಟೋಲ್​ನಾಕಾ ಬಳಿಯ ಒಳಚರಂಡಿ ಸಮಸ್ಯೆ ಹಾಗೂ ಇತರ ಕಾಮಗಾರಿ ಪರಿಶೀಲಿಸಿ ಸಮಸ್ಯೆ ಪರಿಹರಿಸಲಾಗುವುದು ಎಂದರು.

ಅಧಿಕೃತವಾಗಿ ಯೋಜನೆಯನ್ನು ಉದ್ಘಾಟಿಸಲು ನಾವು ಸಿದ್ಧರಾಗಿದ್ದೇವೆ. ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸರ್ಕಾರದ ಆದೇಶ ಬಂದ ನಂತರದಲ್ಲಿ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.

ಬಿಆರ್​ಟಿಎಸ್ ಡಿಜಿಎಂ ಬಸವರಾಜ ಕೇರಿ, ಕೆಎಸ್​ಆರ್​ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶೀನಯ್ಯ, ಬಿಆರ್​ಟಿಎಸ್ ಅಧಿಕಾರಿಗಳಾದ ಗಣೇಶ ರಾಠೋಡ, ಶ್ರೀಧರ ಟಿ.ಎಲ್, ವಿವೇಕಾನಂದ, ಅಶೋಕ ಪಾಟೀಲ, ಶಾಂತಪ್ಪ, ಸಿಬ್ಬಂದಿ, ಇತರರು ಇದ್ದರು.