ಸಿಬಿಐ, ಐಬಿ ಮತ್ತು ದೆಹಲಿ ಪೊಲೀಸ್​ ಮುಖ್ಯಸ್ಥರಿಗೆ ಸುಪ್ರೀಂಕೋರ್ಟ್​ಗೆ ಬರುವಂತೆ ಸೂಚನೆ

ನವದೆಹಲಿ: ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​ ಅವರನ್ನು ಲೈಂಗಿಕ ಕಿರುಕುಳದ ಸುಳ್ಳು ಆರೋಪದಲ್ಲಿ ಸಿಲುಕಿಸಲು ಪಿತೂರಿ ನಡೆದಿದೆ ಎಂದು ಹೇಳಿ ವಕೀಲ ಉತ್ಸವ್​ ಭೈನ್ಸ್​ ಮುಚ್ಚಿದ ಲಕೋಟೆಯಲ್ಲಿ ಪ್ರಮಾಣಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನ 3 ಗಂಟೆಗೆ ಸುಪ್ರೀಂಕೋರ್ಟ್​ಗೆ ಬರುವಂತೆ ಸಿಬಿಐ, ಐಬಿ ಮತ್ತು ದೆಹಲಿ ಪೊಲೀಸರಿಗೆ ಸುಪ್ರೀಂಕೋರ್ಟ್​ ಸೂಚಿಸಿದೆ.

ಪ್ರಕರಣದ ಕುರಿತು ತನಿಖೆ ನಡೆಸುವಂತೆ ಸಿಬಿಐ, ಐಬಿ ಮತ್ತು ದೆಹಲಿ ಪೊಲೀಸರಿಗೆ ಸುಪ್ರೀಂಕೋರ್ಟ್​ ಸೂಚಿಸುವ ಸಾಧ್ಯತೆ ಕಡಿಮೆ ಎಂದು ಈಗಾಗಲೆ ಸುಪ್ರೀಂಕೋರ್ಟ್​ ಸ್ಪಷ್ಟಪಡಿಸಿದೆ.

ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​ ಅವರ ವಿರುದ್ಧ ಸುಳ್ಳು ಆರೋಪ ಮಾಡುವ ಜತೆಗೆ, ಇದನ್ನು ಆಧಾರವಾಗಿಟ್ಟುಕೊಂಡು ಸುಪ್ರೀಂಕೋರ್ಟ್​ನ ಇತರೆ ನ್ಯಾಯಮೂರ್ತಿಗಳನ್ನು ಬೆದರಿಸಲು ಕೆಲವರು ಪಿತೂರಿ ನಡೆಸಿದ್ದಾರೆ ಎಂದು ಉತ್ಸವ್​ ಭೈನ್ಸ್​ ಹೇಳಿದ್ದರು. ಇದು ಪಿತೂರಿ ಎಂಬ ಕಾರಣದಿಂದಾಗಿ ಸುಪ್ರೀಂಕೋರ್ಟ್​ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ.

ನ್ಯಾಯಾಂಗ ವ್ಯವಸ್ಥೆ ದೃಷ್ಟಿಯಿಂದ ಇದು ತುಂಬಾ ಗಂಭೀರವಾದ ಘಟನೆ. ಒಂದು ವೇಳೆ ಇದು ಸತ್ಯವಾಗಿದ್ದರೆ, ಭಾರಿ ಅನಾಹುತವೇ ಸೃಷ್ಟಿಯಾಗುತ್ತದೆ ಎಂದು ನ್ಯಾಯಮೂರ್ತಿ ಅರುಣ್​ ಮಿಶ್ರಾ ಹೇಳಿದರು. ಇದಕ್ಕೂ ಮುನ್ನ ಉತ್ಸವ್​ ಭೈನ್ಸ್​ ಕೋರ್ಟ್​ಗೆ ಸಲ್ಲಿಸಿದ್ದ ಪ್ರಮಾಣಪತ್ರವನ್ನು ಅವರು ಓದಿದ್ದರು ಎನ್ನಲಾಗಿದೆ.
ಕೋರ್ಟ್​ನ ವೆಬ್​ಸೈಟ್​ನಲ್ಲಿ ನ್ಯಾಯಾಲಯದ ಆದೇಶವನ್ನು ಪ್ರಕಟಿಸುವಾಗ ಅದನ್ನು ತಿದ್ದಿದ ಆರೋಪದಲ್ಲಿ ಮಾನವ್​ ಶರ್ಮ ಮತ್ತು ತಪನ್​ ಕುಮಾರ್​ ಚಕ್ರವರ್ತಿ ಎಂಬ ಇಬ್ಬರು ಕ್ಲರ್ಕ್​ಗಳನ್ನು ಕೆಲಸದಿಂದ ಕಿತ್ತೊಗೆಯಲು ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​ ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸರಿಗೆ ಒಪ್ಪಿಸಿದ್ದರು.

ಪ್ರಭಾವಿಗಳು ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಅವರನ್ನು ಬೆದರಿಸುತ್ತಿರುವುದು ಇದೇ ಮೊದಲೇನಲ್ಲ. ಆದರೆ, ಹಿಂದಿನವರು ಯಾರೂ ಕೂಡ ಈ ವಿಷಯದ ಬಗ್ಗೆ ತುಟಿ ಬಿಚ್ಚಲು ಪ್ರಯತ್ನಿಸಿರಲಿಲ್ಲ ಎಂದು ಭೈನ್ಸ್​ ತಮ್ಮ ಪ್ರಮಾಣಪತ್ರದಲ್ಲಿ ಹೇಳಿದ್ದಾರೆ ಎನ್ನಲಾಗಿದೆ.

ಸಿಸಿ ಕ್ಯಾಮರಾ ದೃಶ್ಯಾವಳಿ ಇದೆ
ತಾವು ಸುಪ್ರೀಂಕೋರ್ಟ್​ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿರುವ ಎಲ್ಲ ಅಂಶಗಳಿಗೂ ಪೂರಕವಾಗಿ ಸಿಸಿ ಕ್ಯಾಮರಾ ಸಾಕ್ಷ್ಯವಿದೆ. ಅದನ್ನು ಕೋರ್ಟ್​ಗೆ ಸಲ್ಲಿಸಲಿದ್ದೇನೆ. ಸಿಜೆಐ ಅವರನ್ನು ಸಿಲುಕಿಸಲು ಪ್ರಯತ್ನಿಸಿದವರು ತುಂಬಾ ಪ್ರಭಾವಿಗಳಾಗಿದ್ದಾರೆ ಎಂದು ಉತ್ಸವ್​ ಭೈನ್ಸ್​ ಹೇಳಿದ್ದಾರೆ. (ಏಜೆನ್ಸೀಸ್​)