ರನ್ ವೇ ವಿಸ್ತರಣೆ ತ್ವರಿತಕ್ಕೆ ಸೂಚನೆ

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರನ್ ವೇ ವಿಸ್ತರಣೆ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಚುರುಕುಗೊಳಿಸುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಸೂಚಿಸಿದ್ದಾರೆ.

ಶುಕ್ರವಾರ ನಗರದ ವಿವಿಧೆಡೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿ ರನ್‌ವೇ ವಿಸ್ತರಣೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಇಲ್ಲಿನ ದೀರ್ಘಕಾಲದ ಬೇಡಿಕೆ. ಈ ನಿಟ್ಟಿನಲ್ಲಿ ಸಿದ್ಧತಾ ಕಾಮಗಾರಿ ನಡೆಯುತ್ತಿರುವುದು ಶ್ಲಾಘನೀಯ. ರಾಜ್ಯ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ತಿಳಿಸಿದರು.

ಪಡೀಲ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ ಭೇಟಿ ನೀಡಿ ಕಾಮಗಾರಿಗಳನ್ನು ವೀಕ್ಷಿಸಿದ ವಿಜಯ ಭಾಸ್ಕರ್, ಕಾಮಗಾರಿಯ ಗುಣಮಟ್ಟ ಕಾಯ್ದುಕೊಂಡು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಸ್ವಂತ ಕಟ್ಟಡ ಹೊಂದಿಲ್ಲದ ಎಲ್ಲ ಜಿಲ್ಲಾ ಮಟ್ಟದ ಸರ್ಕಾರಿ ಕಚೇರಿಗಳನ್ನು ಇಲ್ಲಿಗೆ ವರ್ಗಾಯಿಸಬೇಕು ಎಂದು ಸೂಚಿಸಿದರು. ಬಳಿಕ ಸುರತ್ಕಲ್ಗೆ ಭೇಟಿ ನೂತನ ಮಾರುಕಟ್ಟೆ ಸಂಕೀರ್ಣ ಪರಿಶೀಲಿಸಿದರು.

ಸುರತ್ಕಲ್ ಮಧ್ಯಪದವಿನಲ್ಲಿರುವ ಪರಿಶಿಷ್ಟ ವರ್ಗಗಳ ಕೇಂದ್ರೀಯ ಮಾದರಿ ವಸತಿ ಶಾಲೆಗೆ ಭೇಟಿ ನೀಡಿ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು.

ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಅಪರ ಜಿಲ್ಲಾಧಿಕಾರಿ ಕುಮಾರ್, ಮಂಗಳೂರು ಸಹಾಯಕ ಆಯುಕ್ತ ರವಿಚಂದ್ರ ನಾಯ್ಕ, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಮಂಗಳೂರು ವಿಮಾನ ನಿಲ್ದಾಣ ನಿರ್ದೇಶಕ ವಿ.ವಿ.ರಾವ್, ಎನ್‌ಎಂಪಿಟಿ ಮುಖ್ಯ ಭದ್ರತಾ ಅಧಿಕಾರಿ ಶ್ರೀಕೃಷ್ಣ, ಕಾರ್ಯದರ್ಶಿ ಬಿಜು ವಾರಿಯರ್ ಉಪಸ್ಥಿತರಿದ್ದರು.

ಕಾಫಿ ರಫ್ತು ಹೆಚ್ಚಿಸಲು ಒತ್ತು: ಹಡಗುಗಳಲ್ಲಿ ಆಗಮಿಸುವ ವಿದೇಶಿ ಪ್ರಯಾಣಿಕರನ್ನು ಆಕರ್ಷಿಸಲು ರಾಜ್ಯದ ಸಂಸ್ಕೃತಿ, ಕಲೆ ಪರಿಚಯಿಸುವ ಬಗ್ಗೆ ಪ್ರವಾಸೋದ್ಯಮ ಇಲಾಖೆ ಮೂಲಕ ಯೋಜನೆ ಹಾಕಿಕೊಳ್ಳಲಾಗುವುದು. ಬಂದರಿನಿಂದ ರಾಜ್ಯದ ಕಾಫಿ ರಫ್ತು ಹೆಚ್ಚಿಸಲು ಒತ್ತು ನೀಡಬೇಕು. ಬಂದರು ಅಭಿವೃದ್ಧಿಗೆ ರಾಜ್ಯ ಸರ್ಕಾರ ಅಗತ್ಯ ಮೂಲಸೌಕರ್ಯ ಒದಗಿಸಲಿದೆ ಎಂದು ನವಮಂಗಳೂರು ಬಂದರಿನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯ ಕಾರ್ಯದರ್ಶಿ ತಿಳಿಸಿದರು. ಶಿರಾಡಿ ಘಾಟಿ ರಸ್ತೆ ಎನ್‌ಎಂಪಿಟಿಗೆ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಅಭಿವೃದ್ಧಿಯನ್ನು ತ್ವರಿತಗೊಳಿಸುವಂತೆ ಎನ್‌ಎಂಪಿಟಿ ಅಧಿಕಾರಿಗಳು ಮನವಿ ಮಾಡಿದರು.

ವಿಮಾನ ನಿಲ್ದಾಣದಿಂದ ಸರ್ಕಾರಿ ಬಸ್: ವಿಮಾನ ನಿಲ್ದಾಣದಿಂದ ನಗರ ಮತ್ತು ಜಿಲ್ಲೆಯ ವಿವಿಧ ಭಾಗಗಳಿಗೆ ಸರ್ಕಾರಿ ಬಸ್ ಬಸ್ ಸಂಚಾರ ಆರಂಭಿಸಲು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬೆಂಗಳೂರು ವಿಮಾನ ನಿಲ್ದಾಣದಿಂದ ವಿವಿಧ ಭಾಗಗಳಿಗೆ ಆರಂಭಿಸಿದ ಬಿಎಂಟಿಸಿ ಬಸ್ ಸಂಚಾರ ಯಶಸ್ವಿಯಾಗಿದೆ. ಇದೇ ರೀತಿ ಇಲ್ಲೂ ಅಳವಡಿಸಿಕೊಳ್ಳಬೇಕು. ಈಗಾಗಲೇ ಮಂಗಳೂರು ವಿಮಾನ ನಿಲ್ದಾಣ- ಮಣಿಪಾಲ ಸಂಚಾರಕ್ಕೆ ಅನುಮತಿ ಸಿಕ್ಕಿರುವುದರಿಂದ ಶೀಘ್ರವೇ ಸಂಚಾರ ಆರಂಭಿಸುವಂತೆ ನಿರ್ದೇಶನ ನೀಡಿದರು. ಮುಖ್ಯ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದರು.