ಚುನಾವಣಾ ಆಯೋಗದ ವಿರುದ್ಧ ದೀದಿ ಕಿಡಿ: ಪಕ್ಷಪಾತ ನಿರ್ಧಾರ ಪ್ರಶ್ನಿಸಿ ಪತ್ರ ಬರೆದ ಮಮತಾ ಬ್ಯಾನರ್ಜಿ

ಕೋಲ್ಕತ: ಪಶ್ಚಿಮ ಬಂಗಾಳದ ನಾಲ್ವರು ಪೊಲೀಸ್​ ಅಧಿಕಾರಿಗಳನ್ನು ಚುನಾವಣಾ ಆಯೋಗ ವರ್ಗಾವಣೆ ಮಾಡಿದ್ದರಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದೊಂದು ಪಕ್ಷಪಾತಿ ನಿರ್ಧಾರ. ಚುನಾವಣಾ ಆಯೋಗ ಬಿಜೆಪಿ ಪರ ಒಲವು ಹೊಂದಿದ್ದು, ಆ ಪಕ್ಷ ಹೇಳಿದಂತೆ ಕೇಳುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ, ಪಕ್ಷಪಾತೀ ನಿರ್ಧಾರವನ್ನು ಪ್ರಶ್ನಿಸಿ ಚುನಾವಣಾ ಆಯೋಗಕ್ಕೆ ಶನಿವಾರ ಪತ್ರವನ್ನೂ ಬರೆದಿದ್ದಾರೆ.

ಚುನಾವಣಾ ಆಯೋಗ ಪ್ರಜಾಪ್ರಭುತ್ವ ಉಳಿಸಲು ಯಾವುದೇ ಪ್ರಯತ್ನ ನಡೆಸುತ್ತಿಲ್ಲ. ನಾಲ್ವರು ಹಿರಿಯ ಪೊಲೀಸ್​ ಅಧಿಕಾರಿಗಳ ವರ್ಗಾವಣೆ ಆದೇಶದ ವಿರುದ್ಧ ಪ್ರತಿಭಟನೆ ನಡೆಸುವ ನಿಟ್ಟಿನಲ್ಲಿ ಈ ಪತ್ರವನ್ನು ಚುನಾವಣಾ ಆಯೋಗಕ್ಕೆ ಬರೆಯುವ ಪರಿಸ್ಥಿತಿ ಬಂದಿರುವುದು ದುರದೃಷ್ಟಕರ ಎಂದ ಅವರು, ಆ ಪತ್ರದ ಪ್ರತಿಯನ್ನು ಮಾಧ್ಯಮಗಳಿಗೆ ನೀಡಿದ್ದಾರೆ.

ಆಯೋಗದ ಈ ನಿರ್ಧಾರ ನಿರಂಕುಶ, ಪಕ್ಷಪಾತೀಯವಾಗಿದೆ ಮತ್ತು ಯಾರೋ ಹೇಳಿಕೊಟ್ಟು ಮಾಡಿಸಿದ್ದು ಎಂದು ಮೇಲ್ನೋಟಕ್ಕೆ ಕಾಣಿಸುತ್ತದೆ. ಇದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಆಜ್ಞೆಯನ್ನು ಪಾಲಿಸುತ್ತಿದೆ ಎಂಬುದರಲ್ಲಿ ಸಂಶಯವಿಲ್ಲ ಎಂದಿದ್ದಾರೆ.

ಇತ್ತೀಚೆಗಷ್ಟೇ ಕೋಲ್ಕತ ಮತ್ತು ಬಿಧಾನ್ನಗರ್​ ಕಮೀಷನರ್​ ಸೇರಿ ನಾಲ್ವರು ಪೊಲೀಸ್​ ಅಧಿಕಾರಿಗಳನ್ನು ಚುನಾವಣಾ ಆಯೋಗ ವರ್ಗಾವಣೆ ಮಾಡಿತ್ತು. ಅಲ್ಲದೆ ಚುನಾವಣೆಗೆ ಸಂಬಂಧಪಟ್ಟ ಕರ್ತವ್ಯದಿಂದ ಬಿಡುಗಡೆ ಮಾಡಿತ್ತು.

Leave a Reply

Your email address will not be published. Required fields are marked *