ಕರಾವಳಿಗೆ ಕೊಂಚ ತೃಪ್ತಿ

ಮಂಗಳೂರು: ಕಳೆದ ವರ್ಷ ಚೊಚ್ಚಲ ಬಜೆಟ್‌ನಲ್ಲಿ ಕರಾವಳಿ ಭಾಗವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ಮಂಡಿಸಿದ ಆಯವ್ಯಯದಲ್ಲಿ ಕರಾವಳಿ ಭಾಗದ ಜನತೆಯನ್ನೂ ತೃಪ್ತಿಪಡಿಸುವ ಪ್ರಯತ್ನ ಮಾಡಿದ್ದಾರೆ.

ಭತ್ತ ಬೆಳೆಗಾರರು, ಹೈನುಗಾರರು ಮತ್ತು ಮೀನುಗಾರರನ್ನು ಗಮನದಲ್ಲಿರಿಸಿ ಕೆಲವು ಯೋಜನೆಗಳನ್ನು ಪ್ರಕಟಿಸಿದ್ದರೂ, ಅಡಕೆ ಬೆಳೆಗಾರರಿಗೆ ಯಾವುದೇ ಯೋಜನೆ ಪ್ರಕಟಿಸಿಲ್ಲ. ಅಡಕೆ ಮಂಡಳಿ ರಚಿಸುವ ಪ್ರಸ್ತಾವನೆಗೂ ಸರ್ಕಾರ ಆದ್ಯತೆ ನೀಡಿಲ್ಲ. ಜಿಲ್ಲೆಯ ಐಟಿ ಉದ್ಯಮ, ಸಣ್ಣ ನೀರಾವರಿ, ಪ್ರವಾಸೋದ್ಯಮ, ಕ್ರೀಡೆ, ಕೈಗಾರಿಕಾ ಕ್ಷೇತ್ರಗಳಿಗೂ ವಿಶೇಷ ಕೊಡುಗೆ ನೀಡಿಲ್ಲ.

ಭತ್ತ ಬೆಳೆಯಲು ಪ್ರೇರಣೆ: ಕರಾವಳಿ ಭಾಗದ ಜನತೆ ಭತ್ತದ ಬೆಳೆಯಿಂದ ವಿಮುಖರಾಗುತ್ತಿರುವುದನ್ನು ಗಮನದಲ್ಲಿರಿಸಿ ಸರ್ಕಾರ ಕರಾವಳಿ ಮತ್ತು ಮಲೆನಾಡು ಭಾಗದ ರೈತರಿಗೆ ಭತ್ತ ಬೆಳೆಯಲು ಪ್ರೇರಣೆ ನೀಡಿದೆ. ಹೆಕ್ಟೇರ್‌ಗೆ 7500 ರೂ. ಪ್ರೋತ್ಸಾಹಧನ ನೀಡಲು ಬಜೆಟ್‌ನಲ್ಲಿ 5 ಕೋಟಿ ರೂ. ಕಾಯ್ದಿರಿಸಿದೆ. ಹಾಲು ಉತ್ಪಾದಕರ ಪ್ರೋತ್ಸಾಹ ಧನ 5ರೂ.ನಿಂದ 6 ರೂ.ಗೆ ಹೆಚ್ಚಳ ಮಾಡಿರುವುದು ಕರಾವಳಿಯ ಹೈನುಗಾರರಿಗೆ ವರದಾನವಾಗಿದೆ.

ಮನಪಾಕ್ಕೆ 125 ಕೋಟಿ ರೂ: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಗೆ ಯಾವುದೇ ವಿಶೇಷ ಅನುದಾನ ಬಂದಿರಲಿಲ್ಲ. ಈಗ ಮೈತ್ರಿ ಸರ್ಕಾರ 125 ಕೋಟಿ ರೂ. ಅನುದಾನ ಘೋಷಿಸಿದೆ. ಸಂಪೂರ್ಣ ಸೊರಗಿದ ಸ್ಥಿತಿಯಲ್ಲಿದ್ದ ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೂ 30 ಕೋಟಿ ರೂ. ಅನುದಾನದಲ್ಲಿ ಕ್ರಿಯಾ ಯೋಜನೆ ಕೈಗೆತ್ತಿಕೊಳ್ಳುವಂತೆ ಬಜೆಟ್‌ನಲ್ಲಿ ತಿಳಿಸಲಾಗಿದೆ.

ಮೆಟ್ರೊ- ಹೆಲ್ತ್ ಕಾರಿಡಾರ್: ಬೆಂಗಳೂರು ಮಾದರಿಯಲ್ಲಿ ಮೆಟ್ರೊ ರೈಲು ಕನಸು ಕಾಣುತ್ತಿದ್ದ ಮಂಗಳೂರಿನ ಜನತೆಗೆ ಬಜೆಟ್‌ನಲ್ಲಿ ಸಿಹಿ ಸುದ್ದಿ. ನಗರದಲ್ಲಿ ಮೆಟ್ರೋ ರೈಲು ಯೋಜನೆ ಬಗ್ಗೆ ಪೂರ್ವ ಕಾರ್ಯ ಸಾಧ್ಯತಾ ವರದಿ ತಯಾರಿಕೆ ಪರಿಶೀಲನೆ ಘೋಷಿಸಲಾಗಿದೆ. ಮಂಗಳೂರಿನಲ್ಲಿ ಕರ್ನಾಟಕ ಜ್ಞಾನ-ಆರೋಗ್ಯ ಸಮೃದ್ಧಿ ಪರಿಧಿ (ಹೆಲ್ತ್ ಕಾರಿಡಾರ್)ಯನ್ನು ಮಣಿಪಾಲದಿಂದ ಕೊಣಾಜೆವರೆಗೆ ಅಭಿವೃದ್ಧಿಪಡಿಸುವ ಬಗ್ಗೆ ಕಾರ್ಯ ಸಾಧ್ಯತಾ ವರದಿ ತಯಾರಿಸಲು ಕ್ರಮವಹಿಸುವುದಾಗಿ ಬಜೆಟ್‌ನಲ್ಲಿ ತಿಳಿಸಲಾಗಿದೆ.

ಮಠಗಳಿಗೆ ಅನುದಾನ: ಗುರುಪುರ ವಜ್ರದೇಹಿ ಮಠ, ಮಾಣಿಲ ಶ್ರೀಧಾಮ, ಕನ್ಯಾಡಿಯ ಗುರುಮಠಕ್ಕೆ ತಲಾ 1ಕೋಟಿ ರೂ. ಅನುದಾನ ಘೋಷಿಸಿದೆ. ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆಗೆ 200 ಕೋಟಿ ರೂ. ಅನುದಾನ ಪ್ರಕಟಿಸಿದ್ದು ಕರಾವಳಿಯ ಕ್ರೈಸ್ತರಿಗೆ ಸಂತಸ ತಂದಿದೆ.

ಕರಾವಳಿಗೇನೇನು ಕೊಡುಗೆ?: ಮಹಿಳೆಯರಲ್ಲಿ ಅತೀ ಹೆಚ್ಚು ಕಂಡುಬರುವ ಸ್ತನ ಕ್ಯಾನ್ಸರ್ ಸಮಸ್ಯೆಯನ್ನು ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಗುಣಪಡಿಸುವ ಸಲುವಾಗಿ ಮಂಗಳೂರಿನಲ್ಲಿ ಡಿಜಿಟಲ್ ಸ್ತನರೇಖನ (ಮೆಮೊಗ್ರಾಫಿ) ವ್ಯವಸ್ಥೆ ಮತ್ತು ಸ್ಕಾೃನಿಂಗ್ ವ್ಯವಸ್ಥೆ ಅಳವಡಿಕೆ. ಪಣಂಬೂರು ಮತ್ತು ಸಸಿಹಿತು ್ಲ ಕಡಲ ತೀರದ ಪ್ರವಾಸೋದ್ಯಮ ಅಭಿವೃದ್ಧಿಗೆ 7 ಕೋಟಿ ರೂ. ಅನುದಾನ. ತುಳು ಮತ್ತು ಕೊಂಕಣಿ ಭಾಷಾ ಚಲನಚಿತ್ರ ಪ್ರೋತ್ಸಾಹಿಸಲು 1 ಕೋಟಿ ರೂ. ಅನುದಾನ ಕರಾವಳಿಗೆ ನೀಡಿದ ಕೊಡುಗೆ, ಕಂದಾಯ ಇಲಾಖೆ ಡ್ರೋನ್‌ಗಳ ಮೂಲಕ ರೀ-ಸರ್ವೇ ಕಾರ್ಯ ನಡೆಸಲು ಆಯ್ಕೆ ಮಾಡಿದ ಜಿಲ್ಲೆಗಳ ಪೈಕಿ ದ.ಕ ಒಂದು, ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಶಾಲಾ ಸಂಪರ್ಕ ಸೇತು ಯೋಜನೆಯಡಿ 1,317 ಸಂಖ್ಯೆಯ ಕಿರು ಸೇತುವೆಗಳನ್ನು ಪೂರ್ಣಗೊಳಿಸಲು ಕ್ರಮ.

ವಿರೋಧವಿದ್ದರೂ ಎತ್ತಿನಹೊಳೆಗೆ ಅನುದಾನ: ಎತ್ತಿನಹೊಳೆ ಯೋಜನೆಗೆ ಕರಾವಳಿಯಲ್ಲಿ ಪ್ರಬಲ ವಿರೋಧ ವ್ಯಕ್ತವಾಗಿದ್ದರೂ, ಹಿಂದಿನ ಸರ್ಕಾರ ಜಾರಿಗೊಳಿಸಲು ನಿರ್ಧರಿಸಿತ್ತು. ಈಗ ಮೈತ್ರಿ ಸರ್ಕಾರ ಎತ್ತಿನಹೊಳೆ ಯೋಜನೆಗೆ ಪೂರಕವಾಗಿ ಭರಪೂರ ಅನುದಾನ ಘೋಷಿಸಿದೆ.

ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ 15 ಕೋಟಿ ರೂ. ವೆಚ್ಚದಲ್ಲಿ ಹಾಸನದ ಅರಸೀಕೆರೆ ತಾಲೂಕಿನ ಕೆರೆಗಳ ಅಭಿವೃದ್ಧಿಗೆ 15 ಕೋಟಿ ರೂ., ಯೋಜನೆ ವ್ಯಾಪ್ತಿಯ ರಸ್ತೆಗಳ ಅಭಿವೃದ್ದಿಗೆ 60 ಕೋಟಿ ರೂ., ಸಕಲೇಶಪುರಕ್ಕೆ ನೀರು ಒದಗಿಸಲು 12 ಕೋಟಿ ರೂ., ಉದ್ದೇಶಿತ ಭೈರಗೊಂಡ್ಲು ಜಲಾಶಯ ಮುಳುಗಡೆ ಸಂತ್ರಸ್ತರಿಗೆ 15 ಕೋಟಿ ರೂ. ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಮೀನುಗಾರಿಕಾ ಕ್ಷೇತ್ರಕ್ಕೆ ಏನು ಕೊಡುಗೆ?: ಮೀನುಗಾರಿಕೆ ದೋಣಿಗಳಿಗೆ ಇಸ್ರೋ ಅಧಿಕೃತಗೊಳಿಸಿರುವ ಡಿಎಟಿ ಉಪಕರಣ ಅಳವಡಿಸಲು ಶೇ.50ರಷು ್ಟಸಹಾಯಧನ, 3 ಕೋಟಿ ರೂ. ಅನುದಾನ, ಒಳನಾಡು ಮತು ್ತ ಹಿನ್ನೀರು ಜಲಸಂಪನ್ಮೂಲದಲ್ಲಿ ಸಿಗಡಿ ಮತ್ತು ಮೀನು ಕೃಷಿಗೆ ಪ್ರೋತ್ಸಾಹ. 400 ಘಟಕಗಳಿಗೆ ಸಹಾಯಧನ ನೀಡಲು 2 ಕೋಟಿ ರೂ. ಅನುದಾನ, ಮತ್ಸಾೃಶ್ರಯ ಯೋಜನೆ ಮುಂದುವರಿಕೆ. ಪ್ರಗತಿಯಲ್ಲಿರುವ 2500 ಮನೆಗಳನ್ನು ಪೂರ್ಣಗೊಳಿಸಲು ಕ್ರಮ, ಡೀಸೆಲ್ ಮತ್ತು ಸೀಮೆಎಣ್ಣೆ ಪಾಸ್‌ಬುಕ್ ಪಡೆದಿರುವ ದೋಣಿಗಳಿಗೆ ಸಬ್ಸಿಡಿ ನೀಡಲು 148.5 ಕೋಟಿ ರೂ. ಅನುದಾನ ಬಜೆಟ್‌ನಲ್ಲಿ ಮೀನುಗಾರಿಕಾ ಕ್ಷೇತ್ರಕ್ಕೆ ನೀಡಿದ ಕೊಡುಗೆೆ. ನಾಟಿ ಕೋಳಿ ಸಾಕಾಣಿಕೆಗೆ ಪ್ರೋತ್ಸಾಹ ಮತ್ತು ಕಲ್ಪವೃಕ್ಷ ಕಾಯಕ ಸಮಗ್ರ ತೆಂಗಿನ ನಾರಿನ ನೀತಿ ಜಾರಿ ಕರಾವಳಿ ಜನತೆಗೆ ಲಾಭ ತರಬಹುದಾದ ಇತರ ಯೋಜನೆಗಳಾಗಿವೆ.