ಯಾವನೋ ಯಶ್​, ಜೆಡಿಎಸ್​ನ್ನು ಕಳ್ಳರ ಪಕ್ಷ ಎನ್ನುತ್ತಾನೆ, ನಮ್ಮಂತಹ ನಿರ್ಮಾಪಕರಿಲ್ಲದಿದ್ದರೆ ಇವರೆಲ್ಲ ಎಲ್ಲಿ ಬದುಕುತ್ತಾರೆ: ಸಿಎಂ ಆಕ್ರೋಶ

ಮಂಡ್ಯ: ಇಂದು ಕೆ.ಆರ್​.ಪೇಟೆಯಲ್ಲಿ ಪುತ್ರ ನಿಖಿಲ್​ ಪರ ಪ್ರಚಾರ ನಡೆಸಿದ ಮುಖ್ಯಮಂತ್ರಿ ಎಚ್​. ಡಿ.ಕುಮಾರಸ್ವಾಮಿ ನಟ ಯಶ್​ ಹಾಗೂ ಸುಮಲತಾ ಅಂಬರೀಷ್​ ವಿರುದ್ಧ ಹರಿಹಾಯ್ದರು.

ಯಾವನೋ ಯಶ್​ ಅಂತೆ, ನಮ್ಮ ಪಕ್ಷವನ್ನು ಕಳ್ಳರ ಪಕ್ಷ ಎನ್ನುತ್ತಾನೆ. ಯಾರು ಏನೇ ಹೇಳಿದರೂ ಅದನ್ನೆಲ್ಲ ಕೇಳಿಕೊಂಡು ನಮ್ಮ ಕಾರ್ಯಕರ್ತರು ಸುಮ್ಮನಿದ್ದಾರೆ. ಅವರು ಸುಮ್ಮನೆ ಇರುವುದು ನನ್ನ ಬಗ್ಗೆ ತಪ್ಪು ಸಂದೇಶ ಹೋಗುತ್ತದೆ ಎಂಬ ಕಾರಣಕ್ಕೆ ಎಂದು ಹೇಳಿದರು.

ಈಗ ಸಿನಿಮಾದವರು ಬಂದು ಮಂಡ್ಯದ ಜನರ ಸ್ವಾಭಿಮಾನದ ಬಗ್ಗೆ ಮಾತನಾಡುತ್ತಾರೆ. ರೈತರು ಆತ್ಮಹತ್ಯೆ ಮಾಡಿಕೊಂಡು ತಾಯಂದಿರು ಕಣ್ಣೀರು ಹಾಕುವಾಗ ಯಾವ ನಟರು ಬಂದಿದ್ದರು. ನಾನೂ ಕೂಡ ಚಿತ್ರ ನಿರ್ಮಾಪಕನಾಗಿದ್ದವನು. ನನ್ನಂತಹ ನಿರ್ಮಾಪಕ ಇಲ್ಲದಿದ್ದರೆ ಇವರೆಲ್ಲ ಎಲ್ಲಿ ಬದುಕುತ್ತಾರೆ? ಪರದೆಯ ಮೇಲೆ ಕಾಣುವುದು ಸತ್ಯವಲ್ಲ. ನಿಮ್ಮ ಜೀವನದಲ್ಲಿ ನಡೆಯುವುದೇ ಸತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನು ಇಲ್ಲಿಯವರೆಗೆ ಬಾಯಿ ಮುಚ್ಚಿಕೊಂಡಿದ್ದೆ. ಈಗಲೇ ನಾನು ಎಂಪಿ ಆಗಿದ್ದೇನೆ ಎಂದು ನಿಮ್ಮ ತಲೆಯಲ್ಲಿ ತುಂಬಿಬಿಟ್ಟಿದ್ದಾರೆ. ಮಾಧ್ಯಮದವರೂ ಸಹ ಕುಮಾರಸ್ವಾಮಿ ಸರ್ಕಾರ ಬೀಳಿಸಲು ಪಣತೊಟ್ಟಿದ್ದಾರೆ. ನಾನು ಇರುವುದು ಮಾಧ್ಯಮದವರಿಂದ ಅಲ್ಲ, ಜನರಿಂದ. ನಾನು ಜನರಿಗೆ ಹೆದರುತ್ತೇನೆ ಹೊರತು ಮಾಧ್ಯಮಕ್ಕೆ ಅಲ್ಲ ಎಂದು ಕಿಡಿಕಾರಿದರು.

ನಾನು ಮುಖ್ಯಮಂತ್ರಿ ಆದ ದಿನದಿಂದ ಒಂದು ದಿನವೂ ನೆಮ್ಮದಿಯಾಗಿ ಆಡಳಿತ ಮಾಡಲು ಬಿಟ್ಟಿಲ್ಲ. ಅಂಬರೀಷ್​ ಅವರನ್ನು ಮೊದಲು ಎಂಪಿ ಮಾಡಿದ್ದು ಜನತಾ ಪಕ್ಷ. ನಂತರ ಕಾಂಗ್ರೆಸ್​ಗೆ ಹೋದರು. ನಾನು ಅವರಿಗೇನು ಸಹಾಯ ಮಾಡಿದ್ದೇನೆ. ನನಗೆ ಅವರು ಏನು ಮಾಡಿದ್ದಾರೆ ಎಂಬುದನ್ನು ಮಾತನಾಡುವುದು ಬೇಡ. ಅಂಬರೀಷ್​ ನಿಧನರಾದಾಗ ನನ್ನ ಮಗ ನನಗೆ ತಿಳಿಸಿದ. ಆಸ್ಪತ್ರೆಗೆ ಹೋದಾಗ ಇಂದು ಚುನಾವಣೆ ನಡೆಸಲು ಬಂದವರು ಯಾರೂ ಅಲ್ಲಿ ಇರಲಿಲ್ಲ. ನಂತರ ಅವರು ವಾಸ ಮಾಡುತ್ತಿದ್ದ ಮನೆಗೆ ಪಾರ್ಥಿವ ಶರೀರ ತೆಗೆದುಕೊಂಡು ಹೋಗಲು ಸಹಾಯ ಮಾಡಿದೆ. ಈಗ ಆ ತಾಯಿಯನ್ನೇ ಕೇಳುತ್ತೇನೆ ಸ್ವಲ್ಪವಾದರೂ ಸೌಜನ್ಯ ಇದೆಯಾ ಎಂದು ಪ್ರಶ್ನಿಸಿದರು.

Leave a Reply

Your email address will not be published. Required fields are marked *