ಮುಖ್ಯಮಂತ್ರಿ ಶೋ ಕೊಡಲು ಭತ್ತ ನಾಟಿ, ಕಟಾವು ಮಾಡುತ್ತಿದ್ದಾರೆ: ಬಿಎಸ್​ವೈ ವಾಗ್ದಾಳಿ

ಬೆಳಗಾವಿ: ಭತ್ತ ನಾಟಿ, ಕಟಾವು ಮಾಡುವುದು ಮುಖ್ಯಮಂತ್ರಿ ಕೆಲಸವಲ್ಲ. ಕುಮಾರಸ್ವಾಮಿಯವರು ಶೋ ಕೊಡಲು ಇದನ್ನೆಲ್ಲ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದ ಸಮಗ್ರ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿ ಗಮನ ಕೊಡುತ್ತಿಲ್ಲ. ಮಂಡ್ಯ, ರಾಮನಗರ, ಹಾಸನ ಜಿಲ್ಲೆಗಳಿಗೆ ಮಾತ್ರ ಸೀಮಿತರಾಗಿದ್ದಾರೆ. ಭತ್ತ ನಾಟಿ, ಕಟಾವು ಮಾಡಿದರೆ ಜನರಿಗೆ ಏನೂ ಉಪಯೋಗ ಆಗುವುದಿಲ್ಲ ಎಂದು ಟೀಕಿಸಿದರು.
ಉತ್ತರ ಕರ್ನಾಟಕದ ಅಭಿವೃದ್ಧಿಯನ್ನು ಸಿಎಂ ಸಂಪೂರ್ಣ ಕಡೆಗಣಿಸಿದ್ದಾರೆ. ಮಂಡ್ಯದಲ್ಲಿ ಅಪಘಾತದಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡಿದ್ದಾರೆ. ಆದರೆ ಗೋಕಾಕ್ ತಾಲೂಕಿನ ಯರಗಟ್ಟೆ ಬಳಿ ಅಪಘಾತದಲ್ಲಿ ಮಹಿಳೆಯರು ಮೃತಪಟ್ಟಿದ್ದು ಅವರ ಕುಟುಂಬಕ್ಕೆ ಏನೂ ನೀಡಿಲ್ಲ. ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಇದನ್ನೆಲ್ಲ ನಾಳೆಯಿಂದ ಪ್ರಾರಂಭವಾಗುವ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ ಎಂದರು.

ರೈತರು ಸರ್ಕಾರದ ವಿರುದ್ಧ ನಿಂತರೆ ಸರ್ಕಾರ ಉಳಿಯುವುದಿಲ್ಲ. ಬಿಜೆಪಿ 5 ತಂಡಗಳನ್ನು ರಚಿಸಿಕೊಂಡು ರಾಜ್ಯದಲ್ಲಿ ಬರ ಅಧ್ಯಯನ ನಡೆಸಿದೆ. ಆದರೆ ನಮ್ಮ ಬರ ಪ್ರವಾಸದ ಬಗ್ಗೆ ಸಿಎಂ ಲಘುವಾಗಿ ಮಾತನಾಡಿದ್ದಾರೆ. ರೈತ ವಿರೋಧಿ ಸರ್ಕಾರದ ವಿರುದ್ಧ 1 ಲಕ್ಷ ಜನರನ್ನು ಸೇರಿಸಿ ಸಮಾವೇಶ ಮಾಡುತ್ತೇವೆ ಎಂದು ಹೇಳಿದರು.