ಉಡಾಫೆ ಮುಖ್ಯಮಂತ್ರಿ ಎಂದ ವಿಷ್ಣುವರ್ಧನ್​ ಅಳಿಯ; ಪದ ಬಳಕೆಯಲ್ಲಿ ಗಾಂಭೀರ್ಯವಿರಲಿ ಎಂದ ಸಿಎಂ

ಹಾಸನ: ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ವಿಷ್ಣುವರ್ಧನ್​ ಸ್ಮಾರಕ ನಿರ್ಮಿಸಲಿ ಎಂಬ ಅನಿರುದ್ಧ ಹೇಳಿಕೆಗೆ ಮುಖ್ಯಮಂತ್ರಿ ಎಚ್​. ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದು, ಪದ ಬಳಕೆ ಮಾಡಬೇಕಾದರೆ ಅದರ ಗಾಂಭೀರ್ಯ ಅರಿಯಬೇಕು ಎಂದಿದ್ದಾರೆ.

ಮಾಧ್ಯಮದವರ ಜತೆ ಮಾತನಾಡಿ, ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ ವಿಷ್ಣುವರ್ಧನ್​ ಅವರಿಗೆ ಕೊಡುಗೆ ಕೊಟ್ಟಿದ್ದೇವೆ. ನಾವು ಕೊಟ್ಟಿರುವ ಗೌರವಕ್ಕೆ ನೀವು ಕೃತಜ್ಞತೆ ಸಲ್ಲಿಸಬೇಕು ಎಂದು ಹೇಳಿದ್ದಾರೆ.

ವಿಷ್ಣುವರ್ಧನ್​ ನಿಧನರಾದಾಗ ನಾನು ಅಧಿಕಾರದಲ್ಲಿ ಇರಲಿಲ್ಲ. ಆದರೂ ಅವರ ಪಾರ್ಥಿವ ಶರೀರದ ಅಂತ್ಯ ಕಾರ್ಯ ಎಲ್ಲಿ ಮಾಡುತ್ತೀರಿ ಎಂದು ಭಾರತಿ ವಿಷ್ಣುವರ್ಧನ್ ಅವರನ್ನು ಕೇಳಿದ್ದೆ. ಕಂಠೀರವ ಸ್ಟುಡಿಯೋದಲ್ಲೇ ಮಾಡಿ ಎಂದೂ ಕೂಡ ಹೇಳಿದ್ದೆ. ಅಲ್ಲದೆ, ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆಗೆ ಅವಕಾಶ ಮಾಡಿಕೊಡುವಂತೆ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ದೂರವಾಣಿ ಕರೆ ಮಾಡಿ ಮನವಿಯನ್ನೂ ಮಾಡಿದ್ದೆ. ಆದರೆ, ಈಗ ವಿಷ್ಣುವರ್ಧನ್​ ಅಳಿಯ ಅನಿರುದ್ಧ್​ ಅವರು, ಸರ್ಕಾರಕ್ಕೆ ಮರ್ಯಾದೆ ಇದೆಯಾ ಎಂದು ಕೇಳುತ್ತಾರೆ. ನನಗೆ ಉಡಾಫೆ ಮುಖ್ಯಮಂತ್ರಿ ಎನ್ನುತ್ತಾರೆ. ಇದೆಲ್ಲ ನನಗೆ ತುಂಬ ನೋವು ತಂದಿದೆ ಎಂದು ಹೇಳಿದರು.

ಮುಖ್ಯಮಂತ್ರಿ ನಮಗೆ ಸಮಯ ಕೊಡಲಿಲ್ಲ. ನಾಲ್ಕು ಗಂಟೆ ಕಾದರೂ ಅವರು ಸಿಗಲಿಲ್ಲ ಎಂದು ಅನಿರುದ್ಧ್​ ಹೇಳಿದ್ದಾರೆ. ನಮ್ಮ ಮೇಲೆ ದಬ್ಬಾಳಿಕೆ ಮಾಡಿದರೆ ಆಗುವುದಿಲ್ಲ. ನಮ್ಮದು ಶಾಂತಿಪ್ರಿಯ ಸಂಸ್ಕೃತಿ. ದೌಲತ್ತು ತೋರಿಸಬೇಡಿ ಎಂದರು.