ಸರ್ಕಾರ ನಡೆಸಲು ಇಂಧನ ತೆರಿಗೆ ಹೆಚ್ಚಳ!

<< ಸುಂಕ ಹೆಚ್ಚಿಸಿದ್ದನ್ನು ಸಮರ್ಥಿಸಿಕೊಂಡ ಎಚ್​ಡಿಕೆ >>

ಹುಬ್ಬಳ್ಳಿ/ರಾಯಚೂರು: ‘ತೈಲ ಬೆಲೆ ಹೆಚ್ಚಾದಾಗ ರಾಜ್ಯದ ತೆರಿಗೆ ಕಡಿಮೆ ಮಾಡಲಾಗಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೀಗ ಕಚ್ಚಾತೈಲ ಬೆಲೆ ಕಡಿಮೆಯಾಗಿದೆ. ಹಾಗಾಗಿ, ಆಗ ಕಡಿಮೆ ಮಾಡಿದ್ದನ್ನು ಈಗ ಹೆಚ್ಚಿಸಲಾಗಿದೆ. ಹೊಸದಾಗಿ ಯಾವುದೇ ತೆರಿಗೆ ವಿಧಿಸಿಲ್ಲ. ನಾವೂ ಸರ್ಕಾರ ನಡೆಸಬೇಕಲ್ಲ.’

ಇದು, ಪೆಟ್ರೋಲ್-ಡೀಸೆಲ್ ಮೇಲೆ ರಾಜ್ಯ ಸುಂಕ ಹೆಚ್ಚಳ ಮಾಡಿದ್ದಕ್ಕೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಮರ್ಥನೆ.

ಮೊದಲು 2 ರೂ. ಕಡಿಮೆ ಮಾಡಿದ್ದೆವು. ಈಗ 1.84 ರೂ. ಹೆಚ್ಚಳ ಮಾಡಿದ್ದೇವೆ. ದೆಹಲಿಗಿಂತ ಸ್ವಲ್ಪ ಹೆಚ್ಚಿಗೆ ತೆರಿಗೆ ವಿಧಿಸಲಾಗಿದೆ. ಆದರೆ, ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ತೆರಿಗೆ ವಿಧಿಸಿರುವುದು ಬಹಳ ಕಡಿಮೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಜ್ಯ ಸಾರಿಗೆ ಸಂಸ್ಥೆ ತುಂಬಾ ನಷ್ಟದಲ್ಲಿದ್ದು, ಪ್ರಯಾಣದರ ಹೆಚ್ಚಳ ಮಾಡಬೇಕೆನ್ನುವ ಬೇಡಿಕೆ ಇದೆ. ಈ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.

ಡೈವರ್ಟ್ ಮಾಡುತ್ತಿಲ್ಲ: ರೈತರ ಸಾಲಮನ್ನಾ ಮಾಡಲು ಯಾವುದೇ ಇಲಾಖೆಯ ಆದಾಯವನ್ನು ಡೈವರ್ಟ್ ಮಾಡುತ್ತಿಲ್ಲ. ಸಾಲಮನ್ನಾ ಮಾಡಲೆಂದೇ ರಾಷ್ಟ್ರೀಕೃತ ಬ್ಯಾಂಕ್​ಗಳಿಗಾಗಿ 6500 ಕೋಟಿ ರೂ. ಹಾಗೂ ಸಹಕಾರಿ ಬ್ಯಾಂಕ್​ಗಳಿಗಾಗಿ (2ನೇ ಹಂತ) 2,500 ಕೋಟಿ ರೂ. ಮೀಸಲಿಟ್ಟಿದ್ದೇವೆ ಎಂದರು.

ನಿಗಮ ಪಟ್ಟಿ ನಾಳೆ: ವಿವಿಧ ನಿಗಮ- ಮಂಡಳಿಗಳ ನೇಮಕಕ್ಕೆ ಸಂಬಂಧಿಸಿದಂತೆ ಸೋಮವಾರ ಅಂತಿಮ ‘ಮೈತ್ರಿಪಟ್ಟಿ’ ಬಿಡುಗಡೆಯಾಗಲಿದೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಮೊದಲೇನು ಒಪ್ಪಂದ ಮಾಡಿಕೊಳ್ಳಲಾಗಿತ್ತೋ ಅಂತೆಯೇ ನಡೆಯುತ್ತಿದೆ ಎಂದರು.

ಫೆಬ್ರವರಿಯಲ್ಲೇ ಬಜೆಟ್: ರಾಜ್ಯ ಲೋಕಸಭಾ ಚುನಾವಣೆ ಘೊಷಣೆಯಾದಲ್ಲಿ ನೀತಿ ಸಂಹಿತೆಯಿಂದಾಗಿ ಸಮಸ್ಯೆ ಆಗಬಾರದೆಂಬ ಕಾರಣಕ್ಕೆ ಫೆಬ್ರವರಿಯಲ್ಲೇ ರಾಜ್ಯ ಬಜೆಟ್ ಮಂಡನೆ ಮಾಡಲಾಗುವುದು ಸಿಎಂ ಹೇಳಿದರು.

ಮೈತ್ರಿ ಸರ್ಕಾರದ ವಿರುದ್ಧ ಷಾ ಕಿಡಿ

ನವದೆಹಲಿ: ತೈಲ ದರ ಇಳಿಮುಖವಾಗುವ ಮೂಲಕ ವಾಹನ ಸವಾರರಿಗೆ ತುಸು ನಿರಾಳ ಉಂಟಾಗುತ್ತಿರುವ ಹೊತ್ತಿನಲ್ಲಿ ಪೆಟ್ರೋಲ್, ಡೀಸೆಲ್ ಮೇಲೆ ಕರ್ನಾಟಕದ ಸಮ್ಮಿಶ್ರ ಸರ್ಕಾರ ಸುಂಕ ಏರಿರುವುದಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕಿಡಿಕಾರಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಭ್ರಷ್ಟಾಚಾರ, ದುರಾಡಳಿತಕ್ಕೆ ಶ್ರೀಸಾಮಾನ್ಯರು ಬೆಲೆ ತೆರಬೇಕೇನು ಎಂದು ಪ್ರಶ್ನಿಸಿದ್ದಾರೆ.

ಸಚಿವ ಪುಟ್ಟರಂಗಶೆಟ್ಟಿ ಆಪ್ತನ ಬಳಿ ಹಣ ಜಪ್ತಿಗೆ ಸಂಬಂಧಿಸಿದಂತೆ ನನಗೆ ಇದುವರೆಗೂ ಸಂಪೂರ್ಣ ಮಾಹಿತಿ ಸಿಕ್ಕಿಲ್ಲ. ಮಾಹಿತಿ ಪಡೆದು ಮುಂದೇನು ಮಾಡಬೇಕು ಎಂಬ ಬಗ್ಗೆ ತೀರ್ವನಿಸುತ್ತೇವೆ. ಪ್ರಕರಣದಲ್ಲಿ ನಾನು ಯಾವುದೇ ಕಾರಣಕ್ಕೂ ಪ್ರಭಾವ ಬೀರಲ್ಲ.

| ಎಚ್.ಡಿ. ಕುಮಾರಸ್ವಾಮಿಮ ಮುಖ್ಯಮಂತ್ರಿ