ರೈತ ಆತ್ಮಹತ್ಯೆ: ವೈಯಕ್ತಿಕವಾಗಿ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಚಿವ ಪುಟ್ಟರಾಜು

ಮಂಡ್ಯ: ಮುಖ್ಯಮಂತ್ರಿಗಳ ಹೆಸರನ್ನು ಬರೆದಿಟ್ಟು ವಿಷ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಹಟ್ಟಿ ಗ್ರಾಮಸ್ಥರ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಗರಂ ಆಗಿದ್ದಾರೆ.

ಮೃತ ದೇಹವನ್ನು ಆಸ್ಪತ್ರೆ ರವಾನಿಸಲು ನಿರಾಕರಿಸುತ್ತಿದ್ದ ಗ್ರಾಮಸ್ಥರ ಮನವೊಲಿಸಲು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅವರು, 15 ಲಕ್ಷ ಪರಿಹಾರ ಕೇಳುತ್ತಿದ್ದೀರಾ? ಸರ್ಕಾರದ ನಿಯಮಾವಳಿಯಂತೆ ಪರಿಹಾರ ಕೊಡುತ್ತೇವೆ ಎಂದು ಗರಂ ಆಗಿದ್ದಾರೆ.

ಈ ಹಿಂದೆ ಮಂಡ್ಯಕ್ಕೆ ರಾಹುಲ್ ಗಾಂಧಿ, ಸಿದ್ದರಾಮಯ್ಯ ಬಂದ ದಿನವೇ ಸಣಬದಕೊಪ್ಪಲು ಎನ್ನುವ ಗ್ರಾಮದಲ್ಲಿ ರೈತನ ಆತ್ಮಹತ್ಯೆ ಆಗಿತ್ತು. ಆ ರೈತ ಕುಟುಂಬಕ್ಕೆ ರಾಹುಲ್ ಗಾಂಧಿ ಚೆಕ್ ಕೊಟ್ಟು ಹೋಗಿದ್ದರು. ಆದರೆ, ಅದು ಹಣವೇ ಆಗಲಿಲ್ಲ. ನಾವು ಹಾಗೆ ಮಾಡಲ್ಲ. ಸರ್ಕಾರ ಪರಿಹಾರ ಕೊಡಲಿಲ್ಲ ಅಂದರೆ ನಾನೇ ಕೊಡುತ್ತೇನೆ ಎಂದು ಹೇಳಿದರು.

ಪುಟ್ಟರಾಜು ವಿರುದ್ಧ ಅಸಮಾಧಾನಗೊಂಡ ಗ್ರಾಮಸ್ಥರು ಮತ್ತು ಪುಟ್ಟರಾಜು ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಸ್ಥಳದಲ್ಲೇ ಪರಿಹಾರ ಘೋಷಿಸಿ, ಮಂಡ್ಯಕ್ಕೆ ಬರುತ್ತಿರುವ ಸಿಎಂ ಇಲ್ಲಿಗೂ ಬರಲಿ ಎಂದು ಪಟ್ಟು ಹಿಡಿದರು.

5 ಲಕ್ಷ ವೈಯಕ್ತಿಕ ಪರಿಹಾರ ಘೋಷಣೆ

ಇದಾದ ಬಳಿಕ ರೈತನ ಇಬ್ಬರು ಮಕ್ಕಳಿಗೆ ತಲಾ ಎರಡೂವರೆ ಲಕ್ಷ ವೈಯಕ್ತಿಕ ಹಣ ಕೊಡುವುದಾಗಿ ಸಚಿವ ಪುಟ್ಟರಾಜು ಭರವಸೆ ನೀಡಿ ಗ್ರಾಮಸ್ಥರ ಮನವೊಲಿಸಿದರು.

ಸರ್ಕಾರದಿಂದ 5 ಲಕ್ಷ ಮತ್ತು ವೈಯಕ್ತಿಕವಾಗಿ 5 ಲಕ್ಷ ಪರಿಹಾರವನ್ನು ಪುಟ್ಟರಾಜು ಘೋಷಿಸಿದ ಬಳಿಕ ಮೃತ ದೇಹದ ಪಂಚನಾಮೆಗೆ ಗ್ರಾಮಸ್ಥರು ಒಪ್ಪಿಗೆ ಸೂಚಿಸಿದರು.