ಸಿಎಂಗೆ ಡೆತ್​ನೋಟ್ ಬರೆದು ರೈತ ಆತ್ಮಹತ್ಯೆ

ಮಂಡ್ಯ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜಿಲ್ಲೆಗೆ ಆಗಮಿಸುವ ದಿನವೇ ರೈತರೊಬ್ಬರು ಸಾಲ ಹಾಗೂ ಅನಾರೋಗ್ಯದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ.

ತಾಲೂಕಿನ ಶಿವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ನಹಟ್ಟಿ ಗ್ರಾಮದ ಜೈಕುಮಾರ್ (43) ಆತ್ಮಹತ್ಯೆಗೆ ಶರಣಾದವರು. ಗುರುವಾರ ರಾತ್ರಿ ಸಿಎಂಗೆ ಡೆತ್​ನೋಟ್ ಬರೆದಿದ್ದು, ‘ಮದುವೆಯಾಗಿ 15 ವರ್ಷ ಆಗಿದ್ದು, ರಕ್ಷಿತಾ (13), ರಾಜೇಶ್ (10) ಚಿಕ್ಕಮಕ್ಕಳಿದ್ದಾರೆ. ನನ್ನ ಭಾಗವಾಗಿ 27 ಗುಂಟೆ ಜಮೀನಿದೆ. ಅಧಿಕ ರಕ್ತದೊತ್ತಡ, ಮಧುಮೇಹದಿಂದ ಬಳಲುತ್ತಿದ್ದ ತಾಯಿ ಗೌರಮ್ಮ 2015ರ ಮಾ.15ರಂದು ಆತ್ಮಹತ್ಯೆಗೆ ಶರಣಾದರು. 2015ರ ಆ.2ರಂದು ಅನಾರೋಗ್ಯದಿಂದ ತಂದೆ ಮೃತಪಟ್ಟರು. ಅವರ ಆಸ್ಪತ್ರೆ ಹಾಗೂ ತಿಥಿ ಕಾರ್ಯಕ್ಕೆ 1.5 ರಿಂದ 2 ಲಕ್ಷ ಸಾಲ ಮಾಡಿದ್ದೆ. ಈ ನಡುವೆ ನನಗೆ ಗಂಟಲು ಕ್ಯಾನ್ಸರ್ ಎಂದು ವೈದ್ಯರು ಹೇಳಿದ್ದು, ಚಿಕಿತ್ಸೆಗೆ 3 ಲಕ್ಷ ರೂ. ಖರ್ಚಾಗುತ್ತದೆ ಎಂದು ಹೇಳಿದ್ದಾರೆ. ಬೇಸಾಯಕ್ಕಾಗಿ 80 ಸಾವಿರ ರೂ. ಸಾಲ ಮಾಡಿದ್ದು, ಬೆಳೆಯೂ ಕೈಕೊಟ್ಟಿತು. 4 ವರ್ಷದ ಬರದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನಮ್ಮ ಕುಟುಂಬಕ್ಕೆ ಸಹಾಯ ಮಾಡಿ’ ಎಂದು ಮನವಿ ಮಾಡಿದ್ದಾರೆ.

ಸಚಿವ ಪುಟ್ಟರಾಜು ಗರಂ: ಜೈಕುಮಾರ್ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದು ಪ್ರತಿಭಟನೆಗೆ ಮುಂದಾದರು. ಆಗ ಅಲ್ಲಿಗೆ ಬಂದ ಸಚಿವ ಸಿ.ಎಸ್.ಪುಟ್ಟರಾಜು ಜತೆ ವಾಗ್ವಾದ ನಡೆಯಿತು. ಸರ್ಕಾರದ ನಿಯಮಾವಳಿಯಂತೆ ಪರಿಹಾರ ಕೊಡುತ್ತೇವೆ. ನಾನು ವೈಯಕ್ತಿಕವಾಗಿ ಇಬ್ಬರು ಮಕ್ಕಳಿಗೆ ತಲಾ 2.5 ಲಕ್ಷ ರೂ. ಕೊಡುತ್ತೇನೆ. ಸಿಎಂ ಕಾರ್ಯಕ್ರಮಕ್ಕೆ ತೊಂದರೆ ಕೊಡಬೇಡಿ ಎಂದಾಗ, ಮರಣೋತ್ತರ ಪರೀಕ್ಷೆಗೆ ಗ್ರಾಮಸ್ಥರು ಒಪ್ಪಿದರು.