ಸಿಎಂ ಸಿನಿ ಮಾತು

ರಾಜಕೀಯ ಮತ್ತು ಸಿನಿಮಾ ಕ್ಷೇತ್ರದಲ್ಲಿ ಅನುಭವ ಪಡೆದವರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ. ಮೂಲತಃ ನಿರ್ವಪಕರಾದ ಅವರು, ನಂತರ ರಾಜಕೀಯದಲ್ಲೇ ಹೆಚ್ಚು ಬಿಜಿಯಾದರು. ಕೆಲ ವರ್ಷಗಳ ನಂತರ ‘ಜಾಗ್ವಾರ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಮರಳಿದ್ದ ಅವರು, ಇದೀಗ ‘ಸೀತಾರಾಮ ಕಲ್ಯಾಣ’ ನಿರ್ವಿುಸುತ್ತಿದ್ದಾರೆ. ಪುತ್ರ ನಿಖಿಲ್​ಕುಮಾರ್ ನಟನೆಯ ಮೂರನೇ ಚಿತ್ರ ಇದಾಗಿದ್ದು, ಈ ಸಿನಿಮಾ ಹಾಗೂ ಪ್ರಸ್ತುತ ಕನ್ನಡ ಚಿತ್ರರಂಗದ ಸ್ಥಿತಿಗತಿ ಬಗ್ಗೆ ನಮಸ್ತೆ ಬೆಂಗಳೂರು ಜತೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಪುತ್ರ ನಿಖಿಲ್​ಕುಮಾರ್​ಗಾಗಿ ಎಚ್.ಡಿ. ಕುಮಾರಸ್ವಾಮಿ ಎರಡು ವರ್ಷಗಳ ಹಿಂದೆ ‘ಜಾಗ್ವಾರ್’ ಸಿನಿಮಾ ನಿರ್ವಿುಸಿದ್ದರು. ಅದಾದ ಬಳಿಕ ‘ಕುರುಕ್ಷೇತ್ರ’ದಲ್ಲಿ ಅಭಿಮನ್ಯು ಪಾತ್ರವನ್ನು ನಿಖಿಲ್ ನಿಭಾಯಿಸಿದರು. ಈ ಮಧ್ಯೆ ಹರ್ಷ ನಿರ್ದೇಶಿಸುತ್ತಿರುವ ‘ಸೀತಾರಾಮ ಕಲ್ಯಾಣ’ದಲ್ಲಿ ನಿಖಿಲ್ ಬಣ್ಣ ಹಚ್ಚಿದ್ದಾರೆ. ಕುಮಾರಸ್ವಾಮಿ ಈ ಸಿನಿಮಾದ ನಿರ್ವಪಕರು. ಸದ್ಯ ಅವರು ರಾಜ್ಯದ ಮುಖ್ಯಮಂತ್ರಿ ಆಗಿರುವುದರಿಂದ ಸಾಕಷ್ಟು ಬಿಜಿ ಇದ್ದಾರೆ. ಅದರ ನಡುವೆಯೂ ಹೋಮ್ ಬ್ಯಾನರ್​ನಲ್ಲಿ ಮೂಡಿಬರುತ್ತಿರುವ ‘ಸೀತಾರಾಮ ಕಲ್ಯಾಣ’ದ ಕಡೆಗೆ ಗಮನ ಇಟ್ಟಿದ್ದಾರೆ.

|ಅವಿನಾಶ್ ಜಿ. ರಾಮ್

ಹಳ್ಳಿ ಸೊಗಡಿನ ಸೀತಾರಾಮ..

‘ಜಾಗ್ವಾರ್’ ಚಿತ್ರ ನೋಡಿದ ಅನೇಕರು ಕುಮಾರಸ್ವಾಮಿ ಅವರಿಗೆ ಕರೆಮಾಡಿ, ‘ನಿಮ್ಮ ಹಿಂದಿನ ಸಿನಿಮಾಗಳಾದ ‘ಚಂದ್ರಚಕೋರಿ’, ‘ಸೂರ್ಯವಂಶ’ದಲ್ಲಿ ಇದ್ದಂತಹ ಹಾಡುಗಳು ಇರಬೇಕಿತ್ತು’ ಎಂದು ಹೇಳಿದ್ದರಂತೆ. ಅದೇ ಕಾರಣಕ್ಕಾಗಿ ಅಂತಹ ಅಂಶಗಳನ್ನು ಇಟ್ಟುಕೊಂಡು ಈಗ ‘ಸೀತಾರಾಮ ಕಲ್ಯಾಣ’ ಮಾಡಿದ್ದಾರಂತೆ ಅವರು. ‘ಅದಕ್ಕಾಗಿಯೇ ಚಿತ್ರತಂಡದ ಜತೆ ಹಲವಾರು ಸುತ್ತಿನ ಮಾತುಕತೆ ಮಾಡಿದ್ದೇವೆ. ಈ ಬಾರಿ ಹಳ್ಳಿ ಸೊಗಡು ಇರುವಂತಹ ಕಥೆ ಆಯ್ದುಕೊಂಡಿದ್ದೇವೆ. ಜತೆಗೆ ನಗರ ಪ್ರದೇಶದ ಟಚ್ ಕೂಡ ಇರಲಿದೆ. ರಾಜಕೀಯದಲ್ಲಿ ನಾನು ಸಾಕಷ್ಟು ಬಿಜಿ ಇದ್ದೇನೆ. ಆದರೆ, ರಾತ್ರಿ ಎಷ್ಟು ಹೊತ್ತಾದರೂ, ಅಂದಿನ ಚಿತ್ರೀಕರಣ ಏನಾಗಿದೆ ಎಂಬುದನ್ನೂ ನೋಡಿಯೇ ಮಲಗುತ್ತೇನೆ’ ಎಂಬುದು ಕುಮಾರಸ್ವಾಮಿ ಮಾತು.

ಕಲ್ಯಾಣದಲ್ಲಿ ಕನ್ನಡಿಗರೇ ಹೆಚ್ಚು

‘ಜಾಗ್ವಾರ್’ ಚಿತ್ರದಲ್ಲಿ ಕನ್ನಡಕ್ಕಿಂತ ತೆಲುಗು ಕಲಾವಿದರೇ ಜಾಸ್ತಿ ಇದ್ದರು. ಆ ಬಗ್ಗೆ ಕೆಲ ಟೀಕೆಗಳು ಕೇಳಿಬಂದಿದ್ದವು. ಅದು ಕುಮಾರಸ್ವಾಮಿ ಅವರ ಗಮನಕ್ಕೂ ಬಂದಿತ್ತು. ಆದರೆ, ‘ಸೀತಾರಾಮ ಕಲ್ಯಾಣ’ದಲ್ಲಿ ನಟಿಸುವ ಬಹುತೇಕ ಕಲಾವಿದರು ಕನ್ನಡದವರೇ ಎನ್ನುವುದು ವಿಶೇಷ. ‘ನಮ್ಮ ಚಿತ್ರದಲ್ಲಿ ಕನ್ನಡದ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ. ನಾನು ನಿರ್ವಪಕನಾಗಿದ್ದರೂ, ಸಂಪೂರ್ಣ ಜವಾಬ್ದಾರಿಯನ್ನು ನಿಖಿಲ್ ವಹಿಸಿಕೊಂಡಿದ್ದಾನೆ. ನಿಖಿಲ್- ರಚಿತಾ ರಾಮ್ ಕಾಂಬಿನೇಷನ್ ಪ್ರೇಕ್ಷಕರಿಗೆ ಇಷ್ಟವಾಗಲಿದೆ. ‘ಜಾಗ್ವಾರ್’ಗೆ ಖರ್ಚು ಮಾಡಿದಂತೆ ಇಲ್ಲಿ ಹೆಚ್ಚು ದುಡ್ಡು ಖರ್ಚು ಮಾಡುತ್ತಿಲ್ಲ. ಆದರೆ, ಅದಕ್ಕಿಂತಲೂ ಶ್ರೀಮಂತವಾಗಿ ಈ ಸಿನಿಮಾವನ್ನು ತೆರೆಗೆ ತರಲಿದ್ದೇವೆ’ ಎನ್ನುವ ಕುಮಾರಸ್ವಾಮಿ, ಇದು ಯಾವುದೇ ಸಿನಿಮಾ ರಿಮೇಕ್ ಅಲ್ಲ ಎಂದು ಸ್ಪಷ್ಟಪಡಿಸುತ್ತಾರೆ. ಬಹುಶಃ ಇದೇ ತೆಲುಗಿಗೆ ರಿಮೇಕ್ ಆಗಬಹುದು ಎಂಬ ಭರವಸೆಯೂ ಅವರಿಗಿದೆ.

ರಾಮನಗರದಲ್ಲಿ ಮೊದಲ ಟೀಸರ್

ಕುಮಾರಸ್ವಾಮಿ ಅವರ ಕಾರ್ಯಕ್ಷೇತ್ರ ರಾಮನಗರ. ಆ ಜಿಲ್ಲೆಯಲ್ಲಿ ಅವರ ಅಪಾರ ಅಭಿಮಾನಿಗಳಿದ್ದಾರೆ. ವಿಶೇಷವೆಂದರೆ, ಜು. 31ರಂದು ರಾಮನಗರದಲ್ಲಿ ನಡೆಯುವ ಕರಗ ಉತ್ಸವದಲ್ಲಿ ‘ಸೀತಾರಾಮ ಕಲ್ಯಾಣ’ದ ಮೊದಲ ಟೀಸರ್ ಬಿಡುಗಡೆಯಾಗಲಿದೆ. ಆ ಉತ್ಸವ ದಲ್ಲಿ ಅಂದಾಜು 1 ಲಕ್ಷ ಜನ ಭಾಗವಹಿಸಲಿದ್ದಾರಂತೆ.

ಪೋಸ್ಟರ್ ನೋಡಿ ಭವಿಷ್ಯ ಹೇಳ್ತೀನಿ..

ರಾಜಕೀಯಕ್ಕೆ ಎಂಟ್ರಿ ನೀಡುವುದಕ್ಕೂ ಮುನ್ನ ಕುಮಾರಸ್ವಾಮಿ ಸಿನಿಮಾ ಪ್ರದರ್ಶಕ, ವಿತರಕರಾಗಿದ್ದರು. ಆನಂತರ ನಿರ್ವಪಕರೂ ಆದರು. ಈಗ ರಾಜಕೀಯದಲ್ಲಿ ಇದ್ದರೂ ಸಿನಿಮಾಕ್ಷೇತ್ರದಲ್ಲಿ ಏನಾಗುತ್ತಿದೆ ಎಂಬ ಅರಿವು ಅವರಿಗೆ ಸದಾ ಇರುತ್ತದೆಯಂತೆ. ‘ಸಿನಿಮಾ ಕ್ಷೇತ್ರದತ್ತ ನನ್ನ ಗಮನ ಯಾವಾಗಲೂ ಇರುತ್ತದೆ. ಬರೀ ಸಿನಿಮಾದ ಪೋಸ್ಟರ್, ಸ್ಟಿಲ್ಸ್ ನೋಡಿಯೇ ಅದರ ಭವಿಷ್ಯ ಏನಾಗಲಿದೆ ಎಂಬುದನ್ನು ಹೇಳಬಲ್ಲೆ. ಅಂಥದ್ದೊಂದು ಕಾಮನ್ ಸೆನ್ಸ್ ದೇವರು ನನಗೆ ನೀಡಿದ್ದಾನೆ. ಬಹುತೇಕ ನಾನು ಹೇಳಿದ ಹಾಗೇ ಆಗಿದೆ’ ಎನ್ನುತ್ತಾರವರು.

ಅದ್ದೂರಿ ಚಿತ್ರನಗರಿ

ಈ ರಾಜ್ಯ ಬಾರಿ ಬಜೆಟ್​ನಲ್ಲಿ ಕನ್ನಡ ಚಿತ್ರರಂಗಕ್ಕಾಗಿ ಪ್ರತ್ಯೇಕ ಹಣ ಮೀಸಲಿಟ್ಟಿದ್ದಾರೆ ಕುಮಾರಸ್ವಾಮಿ. ಖಾಸಗಿ ಸಹಭಾಗಿತ್ವದ ಮೂಲಕ ರಾಮನಗರದಲ್ಲಿ ಚಿತ್ರನಗರಿ ನಿರ್ಮಾಣ ಮಾಡುವುದಕ್ಕೆ ಸಜ್ಜಾಗಿದ್ದಾರೆ. ‘ಈಗಾಗಲೇ ಬೇರೆ ಬೇರೆ ದೇಶದಿಂದ ಬಂಡವಾಳ ಹೂಡುವವರು ಮುಂದೆ ಬಂದಿದಾರೆ. ಚಿತ್ರನಗರಿ ನಿರ್ವಣಕ್ಕೆ 30ರಿಂದ 50 ಸಾವಿರ ಕೋಟಿ ರೂ. ಹೂಡಿಕೆ ಮಾಡಬೇಕು ಎಂಬ ಉದ್ದೇಶ ಇದೆ. ಖಾಸಗಿ ಸಹಭಾಗಿತ್ವದಲ್ಲಿ ಅದು ಆಗಲಿದೆ. ಸದ್ಯದಲ್ಲೇ ಕನ್ನಡ ಚಿತ್ರರಂಗದ ಪ್ರಮುಖರ ಸಭೆ ಕರೆಯಲಿದ್ದೇನೆ. 5-6 ಸಾವಿರ ಎಕರೆಯಲ್ಲಿ ದೊಡ್ಡ ಮಟ್ಟದಲ್ಲಿ ಇದರ ನಿರ್ಮಾಣ ಮಾಡಬೇಕು ಎಂಬ ಉದ್ದೇಶ ಇದೆ. ಸಿನಿಮಾದ ಎಲ್ಲ ಕೆಲಸಗಳು ಅಲ್ಲಿ ನಡೆಯಬೇಕು. ಅದರಿಂದ 1 ಲಕ್ಷ ಹುದ್ದೆ ಸೃಷ್ಟಿಯಾಗಬೇಕು ಎಂಬ ದೊಡ್ಡ ಯೋಚನೆ ನನ್ನದು. ಸರ್ಕಾರದಿಂದ ಅದಕ್ಕಾಗಿ 100 ಕೋಟಿ ರೂ. ಇಟ್ಟಿದ್ದೇನೆ’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ ಸಿಎಂ.

ವಿಷ್ಣು ಸ್ಮಾರಕದ ಬಗ್ಗೆ ಭಾರತಿ ಜತೆ ಚರ್ಚೆ

ಡಾ. ವಿಷ್ಣುವರ್ಧನ್ ಅವರ ಸ್ಮಾರಕ ನಿರ್ವಣದ ವಿಷಯ ಮೊದಲಿನಿಂದಲೂ ಚರ್ಚೆಯಲ್ಲಿದೆ. ಈಗ ಮೈಸೂರಿನಲ್ಲಿ ಅದು ನಿರ್ವಣವಾಗಲಿದೆ ಎಂಬ ಮಾಹಿತಿಯೂ ಹೊರಬಿದ್ದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡುವ ಸಿಎಂ, ‘ವಿಷ್ಣು ಅವರು ನಿಧನರಾದಾಗ ಚಿತಾಗಾರದಲ್ಲಿ ಅವರ ಅಂತಿಮ ಸಂಸ್ಕಾರ ನಡೆಸಲು ಎಲ್ಲ ಸಿದ್ಧತೆಗಳು ಆರಂಭವಾಗಿದ್ದವು. ಕನ್ನಡ ಚಿತ್ರರಂಗಕ್ಕೆ ವಿಷ್ಣು ಅವರ ಕೊಡುಗೆ ಚಿಕ್ಕದೇನಲ್ಲ. ಅದಕ್ಕಾಗಿ ಅಭಿಮಾನ್ ಸ್ಟುಡಿಯೋದಲ್ಲಿ ಸಂಸ್ಕಾರ ನಡೆಯಬೇಕು ಎಂದು ಅಂದಿನ ಸರ್ಕಾರಕ್ಕೆ ಒತ್ತಡ ತಂದೆವು. ಅಲ್ಲಿಯೇ ಸ್ಮಾರಕವಾಗಬೇಕು ಎಂಬ ಆಸೆ ವಿಷ್ಣು ಅಭಿಮಾನಿಗಳದ್ದು. ಭಾರತಿ ಅವರಿಗೆ ಮೈಸೂರಿನಲ್ಲಿ ಆಗಬೇಕು ಎಂಬ ಅಭಿಲಾಷೆ ಇದೆ. ಸರ್ಕಾರ ಮನಸ್ಸು ಮಾಡಿದರೆ, ಇಲ್ಲಿರುವ ಜಾಗದ ಸಮಸ್ಯೆಯನ್ನು ಬಗೆಹರಿಸುವುದು ದೊಡ್ಡ ವಿಷಯವೇನಲ್ಲ. ಅಂತಿಮವಾಗಿ ಭಾರತಿ ಅವರೊಂದಿಗೆ ಮಾತನಾಡಿ, ಮುಂದುವರಿಯಲಿದ್ದೇನೆ. ಯಾವುದೇ ಗೊಂದಲಗಳು ಸೃಷ್ಟಿಯಾಗುವುದು ನನಗಿಷ್ಟವಿಲ್ಲ’ ಎನ್ನುತ್ತಾರೆ.

ಸಿಎಂ ‘ಹೆಜ್ಜೆ’ ಕನಸು

‘ಹೆಜ್ಜೆ’ ಕಾದಂಬರಿಯನ್ನು ಸಿನಿಮಾ ಮಾಡಬೇಕೆಂಬ ಅದಮ್ಯ ಬಯಕೆ ಕುಮಾರಸ್ವಾಮಿ ಅವರಿಗಿದೆ. ಈ ಹಿಂದೆಯೂ ಅನೇಕ ಬಾರಿ ಅವರು ಹೇಳಿ ಕೊಂಡಿದ್ದರು. ಅದಕ್ಕೆ ಉತ್ತಮ ಸ್ಕ್ರಿಪ್ಟ್ ಬರೆಯುವವರ ಕೊರತೆಯಿಂದಾಗಿ ಆ ಯೋಜನೆ ಹಾಗೇ ಉಳಿದಿದೆ. ‘ಆ ಕಾದಂಬರಿ ನನಗೆ ಬಹಳ ಇಷ್ಟವಾಗಿತ್ತು. ಆದರೆ, ನನಗೆ ತೃಪ್ತಿ ನೀಡುವಂತಹ ಸ್ಕ್ರಿಪ್ಟ್ ಬರೆಯೋಕೆ ಯಾರಿಂದಲೂ ಆಗಿಲ್ಲ. ಅದಕ್ಕೆ ತುಂಬ ವರ್ಕ್ ಮಾಡಬೇಕು. ಕ್ವಿಟ್ ಇಂಡಿಯಾ ಚಳವಳಿಯಿಂದ ಪ್ರಾರಂಭವಾಗಿ ಮಹಾತ್ಮ ಗಾಂಧಿ ಅವರ ಹತ್ಯೆ ಆಗುವ ತನಕ ಕಥೆ ಇದೆ. ಇದನ್ನು ಮಾಡಿದರೆ ದೊಡ್ಡದಾಗಿ ಮಾಡಬೇಕು. ಬಹುಭಾಷೆಯಲ್ಲಿ ನಿರ್ಮಾಣ ಮಾಡಿ, ದೊಡ್ಡ ದೊಡ್ಡ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಬೇಕು’ ಎಂಬುದು ಕುಮಾರಸ್ವಾಮಿ ಅಭಿಪ್ರಾಯ.